ಮಹಿಳಾ ಸಬಲೀಕರಣಕ್ಕೆ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ: ಡಾ.ವಿನೋದ ದೊಡ್ಡಣ್ಣವರ

ಮಹಿಳಾ ಸಬಲೀಕರಣಕ್ಕೆ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ: ಡಾ.ವಿನೋದ ದೊಡ್ಡಣ್ಣವರ Rural development project helpful for women empowerment: Dr. Vinoda Doddannavara

 ಬೆಳಗಾವಿ 27 : ಮಹಿಳೆಯರು ಸಮಾಜದಲ್ಲಿ ಉನ್ನತ ಜೀವನ ನಡೆಸಲು ಗ್ರಾಮಾಭಿವೃದ್ಧಿ  ಯೋಜನೆಯು ಅನುಕೂಲವಾಗಿದೆ.  ಮಹಿಳೆಯರು  ಸ್ವ-ಉದ್ಯೋಗದಲ್ಲಿ ಕೌಶಲ್ಯಗಳನ್ನು ಅಳವಡಿಸಿಕೊಂಡಲ್ಲಿ ಅವಕಾಶಗಳಿವೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆರ್ಥಿಕ, ಸಾಮಾಜಿಕ ಬದಲಾವಣೆಗೆ ಮತ್ತು ಮಹಿಳಾ ಸಬಲೀಕರಣಕ್ಕೆ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ ಎಂದು  ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯವರಾದ ಡಾ.ವಿನೋದ ಸುರೇಂದ್ರ ದೊಡ್ಡಣ್ಣವರ ಅವರು ಹೇಳಿದರು. 

ತಾಲೂಕಿನ  ಕಲಖಾಂಬದ ಮಾವುಲಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ (ರಿ) ಖಾಸಭಾಗ ಬೆಳಗಾವಿ ಜಿಲ್ಲೆ 1 ಮತ್ತು ಜ್ಞಾನವಿಕಾಸ ಕೇಂದ್ರಗಳು ಹಾಗೂ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಇವರ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ಜ್ಞಾನವಿಕಾಸ ಕೇಂದ್ರಗಳ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು,  

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ್‌  ಅವರು ಮಾತನಾಡಿ,  ಸ್ವಾವಲಂಬನೆ ಜೀವನಕ್ಕೆ ಆದ್ಯತೆ ನೀಡಲು ಯೋಜನೆ ಪ್ರಾರಂಭಿಸಲಾಗಿದೆ.   ಮಹಿಳೆಯರು ಸಾಮಾಜಿಕವಾಗಿ , ಆರ್ಥಿಕವಾಗಿ, ಧಾರ್ಮಿಕವಾಗಿ ಸಬಲರಾಗಲು ಸಾಧ್ಯವಾಗಿದೆ. ಕಳೆದ 4 ದಶಕಗಳಿಂದ ಕರ್ನಾಟಕದ ಗ್ರಾಮೀಣ ಜನರ ಅಭಿವೃದ್ಧಿಗೆ ಯೋಜನೆಯು ಶ್ರಮಿಸುತ್ತಿದೆ.  ಕೆರೆಯ ನೀರನ್ನು ಕೆರೆಗೆ ಚೆಲ್ಲು ಎಂಬ ಮಾತಿನಂತೆ ಪೂಜ್ಯರು ಮಾಶಾಸನ,  ದೇವಸ್ಥಾನ ಜೀರ್ಣೋದ್ಧಾರ, ಶಿಷ್ಯವೇತನ, ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಮೂಲಕ ಸಮಾಜದಿಂದ ಬಂದ ಹಣವನ್ನು ಸಮಾಜಕ್ಕೆ ವಿನಿಯೋಗಿಸುತ್ತಿದ್ದಾರೆ ಎಂದು ಹೇಳಿದರು.  

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಮೈತ್ರೇಯಿಣಿ ಗದಿಗೆಪ್ಪ ಗೌಡರ  ಇವರು ಮಾತನಾಡಿ,  ಮಕ್ಕಳಿಗೆ ಗೌರವ ಭಾವನೆ ಬೆಳೆಸಬೇಕು. ಮಕ್ಕಳಿಗೆ ಸ್ಪರ್ಧಾತ್ಮಕ ಜೀವನ ಅನಿವಾರ್ಯ ಆದರೆ ನೈತಿಕ ಮೌಲ್ಯಗಳ ಹಾನಿ ಅನಿವಾರ್ಯವಲ್ಲ. ಗೆಲುವಿನ ಹೋರಾಟದಲ್ಲಿ ಮನುಷ್ಯತ್ವ ಕಳೆದುಕೊಳ್ಳಬಾರದು. ಮಕ್ಕಳನ್ನು ಸಮಾಜದ ಹೊರೆಯಾಗಿ ಬೆಳೆಸಬಾರದು. ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡುವವಳು ಮಹಿಳೆಯಾಗಿರುತ್ತಾಳೆ ಎಂದು ಮಾಹಿತಿ ನೀಡಿದರು.  

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜಿಲ್ಲಾ  ಜನ ಜಾಗೃತಿ ವೇದಿಕೆಯ ಸದಸ್ಯರಾದ ಶೈಲಜಾ ಹಿರೇಮಠ, ಬಸವರಾಜ ಹಣ್ಣಿಕೇರಿ, ರವರು ಭಾಗವಹಿಸಿದ್ದರು. ಯೋಜನಾಧಿಕಾರಿಯವರಾದ ಸುಭಾಷ ಪಿಸಿಯವರು ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಮೀನಾರಾಣಿ ವಂದಿಸಿದರು. ಕೃಷಿ ಮೇಲ್ವಿಚಾರಕ ಮಂಜುನಾಥ ಗೌಡ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮೇಲ್ವಿಚಾರಕಿ ವಿಶಾಲ, ಸೇವಾ ಪ್ರತಿನಿಧಿಗಳಾದ ಜಯ, ಗೀತಾ, ವೀಣಾ, ಭಾರತಿ ಮತ್ತು ಜ್ಞಾನವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಂದ ವಿವಿಧ ಮನರಂಜನ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು.