ಲಾರಿ ಚಾಲಕರ ಮಕ್ಕಳಿಗೆ 4500 ರೂ. ವಿದ್ಯಾರ್ಥಿ ವೇತನ ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ 2500 ವಿದ್ಯಾರ್ಥಿಗಳಿಗೆ ವಿತರಣೆ

ಲಾರಿ ಚಾಲಕರ ಮಕ್ಕಳಿಗೆ 4500 ರೂ. ವಿದ್ಯಾರ್ಥಿ ವೇತನ  ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ 2500 ವಿದ್ಯಾರ್ಥಿಗಳಿಗೆ ವಿತರಣೆ Rs. 4500 scholarship for the children of lorry drivers distributed to 2500 students from Bellary, K

ಲಾರಿ ಚಾಲಕರ ಮಕ್ಕಳಿಗೆ 4500 ರೂ. ವಿದ್ಯಾರ್ಥಿ ವೇತನ  ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ 2500 ವಿದ್ಯಾರ್ಥಿಗಳಿಗೆ ವಿತರಣೆ  

  ಬಳ್ಳಾರಿ  27: ಶ್ರೀರಾಮ್ ಸೇವಾ ಸಂಕಲ್ಪ ವತಿಯಿಂದ ಲಾರಿ ಚಾಲಕರುಗಳ 2500 ಮಕ್ಕಳಿಗೆ (ಪ್ರತಿಯೊಬ್ಬರಿಗೂ 4500 ರೂ.ಗಳಂತೆ) ವಿದ್ಯಾರ್ಥಿ ವೇತನವನ್ನು ಸೋಮವಾರ ವಿತರಿಸಲಾಯಿತು. ನಗರದ ಸಂಗನಕಲ್ಲು ರಸ್ತೆಯಲ್ಲಿನ ಕೆಆರ್‌ಎಸ್ ಸಭಾಂಗಣದಲ್ಲಿ ಶ್ರೀರಾಮ್ ಫೈನಾನ್ಸ್‌ ಲಿ. ಕಂಪನಿಯ ಶ್ರೀರಾಮ್ ಸೇವಾ ಸಂಕಲ್ಪದಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಲಾರಿ ಚಾಲಕರ 8ನೇ ತರಗತಿಯಿಂದ ಪಿಯುಸಿ ವರೆಗೆ ವ್ಯಾಸಂಗ ಮಾಡುತ್ತಿರುವ 2500 ಮಕ್ಕಳಿಗೆ ಪ್ರತಿಯೊಬ್ಬರಿಗೂ 4500 ರೂ.ಗಳಂತೆ ಒಟ್ಟು 68 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಸಂಸ್ಥೆಯು ಕಳೆದ 13 ವರ್ಷಗಳಿಂದ ಲಾರಿ ಚಾಲಕರ ಮಕ್ಕಳಿಗೆ ಈ ರೀತಿಯ ಆರ್ಥಿಕ ಸೇವೆ ಸಲ್ಲಿಸುತ್ತಾ ಬರುತ್ತಿದೆ.  

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲ್ಯಾಣಸ್ವಾಮಿಗಳು, ಶ್ರೀರಾಮ್ ಫೈನಾನ್ಸ್‌ ಕಂಪನಿಯು ರಾಜ್ಯದ ಜಿಲ್ಲಾ, ತಾಲೂಕು ಕೇಂದ್ರಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಕಷ್ಟದಲ್ಲಿರುವ ಕೃಷಿಕರಿಗೆ, ವಾಹನ ಚಾಲಕರಿಗೆ, ಕ್ಲೀನರ್‌ಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಆರ್ಥಿಕವಾಗಿ ನೆರವಾಗುತ್ತಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಸಮಾಜದ ಉತ್ತಮ ಪ್ರಜೆಯಾಗಬೇಕು. ಯಾರು ದುಶ್ಚಟಗಳಿಗೆ ಬಲಿಯಾಗಬಾರದು. ಜೀವನದಲ್ಲಿ ಒಂದು ಗುರಿಗಳನ್ನು ಇಟ್ಟುಕೊಂಡು ಮುಂದೆ ಸಾಗಬೇಕು. ಮಕ್ಕಳು ಪೋಷಕರ ಹೆಸರಿಗೆ ಕಳಂಕ ತರಬಾರದು. ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಮಾನವೀಯತೆಯಿಂದ ಶ್ರೀರಾಮ್ ಫೈನಾನ್ಸ್‌ ಲಿ., ಕಂಪನಿಯು ಕೆಲಸ ಮಾಡುತ್ತಿದೆ. ಎಲ್ಲ ವಿದ್ಯಾರ್ಥಿಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸ್ವಾಮೀಜಿಗಳು ವಿವರಿಸಿದರು. 

ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಕಂಪನಿಯು 1974 ರಲ್ಲಿ ಆರಂಭವಾಯಿತು. ಚಾಲಕರು, ಕ್ಲೀನರ್‌ಗಳು ಮತ್ತು ಕಾರ್ಮಿಕರು ಟ್ರಕ್ ಮಾಲೀಕರಾಗಬೇಕು ಎಂಬ ಉದ್ದೇಶದಿಂದ ವಾಹನ ಖರೀದಿಗೆ ಸಾಲ ನೀಡಲಾಗುತ್ತಿದೆ. ಜತೆಗೆ ದ್ವಿಚಕ್ರ ವಾಹನ, ಬಂಗಾರದ, ಸಣ್ಣ ಹಾಗೂ ಮಧ್ಯಮ ಗಾತ್ರದ ವ್ಯವಹಾರಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಅವರು ವಿವರಿಸಿದರು. ಸಣ್ಣ ವ್ಯಾಪಾರ ಮಾಲೀಕರ ಅಗತ್ಯಗಳನ್ನು ಪೂರೈಸುವ ಸಮಗ್ರ ಹಣಕಾಸು ಸಂಸ್ಥೆಯಾಗಿದೆ. ನಮ್ಮ ಸಂಸ್ಥೆಯು 3,095 ಶಾಖೆಗಳನ್ನು ಹೊಂದಿದ್ದು, 95 ಲಕ್ಷ ಜನ ಗ್ರಾಹಕರನ್ನು ಹೊಂದಿದೆ. ಟ್ರಕ್ ಡ್ರೈವರ್‌ಗಳು ಮತ್ತು ಕ್ಲೀನರ್‌ಗಳು ಯಾವಾಗಲೂ ಒಂದು ನಗರದಿಂದ ಇನ್ನೊಂದು ನಗರಕ್ಕೆ ಪ್ರಯಾಣಿಸುತ್ತಿರುತ್ತಾರೆ. ಅವರ ಮಕ್ಕಳ ಶಿಕ್ಷಣವನ್ನು ಅವರು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಅವರ ಮಕ್ಕಳ ವಿಧ್ಯಾಭ್ಯಾಸವನ್ನು ಪ್ರೋತ್ಸಾಹಿಸಲು ಶ್ರೀರಾಮ್ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ 8 ರಿಂದ 12ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದರು. ಬಳಿಕ ಲಾರಿ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.  

ಈ ಸಂದರ್ಭದಲ್ಲಿ ತಾರನಾಥ ಸರ್ಕಾರಿ ಆಯುರ್ವೇದ ಕಾಲೇಜು ಪ್ರಾಧ್ಯಾಪಕ ಡಾ. ದೊಡ್ಡಬಸಯ್ಯ ಕೆಂಡದಮಠ, ಮಕ್ಕಳ ಸಾಹಿತಿ ಶಿವಲಿಂಗಪ್ಪ ಹಂದ್ಯಾಳ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಎಸ್‌.ಶ್ರೀನಿವಾಸಗಿರಿ, ಕಂಪನಿಯ ವಲಯ ಬಿಜಿನೆಸ್ ಹೆಡ್ ಚನ್ನನಗೌಡ ಎಚ್‌., ಸ್ಟೇಟ್ ಹೆಡ್ ಇನ್ವೆಸ್ಟ್ಮೆಂಟ್ ಅಂಡ್ ಇನ್ಸೂರೆನ್ಸ್‌ ವಿಜಯಕುಮಾರ್ ಪಿ.ಜಿ., ಬಳ್ಳಾರಿ ಕ್ಲಸ್ಟರ್ ಹೆಡ್ ರಾಘವೇಂದ್ರ ಟಿ.ಆರ್‌., ಸ್ಟೇಟ್ಸ್‌ ಕಲೆಕ್ಷನ್ ಹೆಡ್ ಪಂಪಾ ವಿರೂಪಾಕ್ಷ, ಸಿಬ್ಬಂದಿ ವರ್ಗ ಸೇರಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.