ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಜಾಗೃತಿ ಅಗತ್ಯ: ವಕೀಲ ಕಾಶಿನಾಥ ಚವ್ಹಾಣ

ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಜಾಗೃತಿ ಅಗತ್ಯ: ವಕೀಲ ಕಾಶಿನಾಥ ಚವ್ಹಾಣ   Road safety awareness is necessary for the public: Advocate Kashinath Chavan


ದೇವರಹಿಪ್ಪರಗಿ 31: ದೇಶದಲ್ಲಿ ಪ್ರತಿನಿತ್ಯ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಜಾಗೃತಿ ಹೊಂದುವ ಅಗತ್ಯವಿದೆ ಎಂದು ಸಿಂದಗಿ ವಕೀಲರ ಸಂಘದ ಸದಸ್ಯರಾದ ಕಾಶೀನಾಥ ಚವ್ಹಾಣ ಹೇಳಿದರು.  

ಪಟ್ಟಣದ ವೆಂಕಟೇಶ್ವರ ಪ್ರೌಢಶಾಲಾ ಸಭಾಭವನದಲ್ಲಿ ನಡೆದ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಂದಗಿ ಹಾಗೂ ಇತರ ಎಲ್ಲಾ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹ-2026ಅಭಿಯಾನ  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.18 ವರ್ಷದ ಒಳಗಿನ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಬಾರದು, ಹೆಲ್ಮೆಟ್ ರಹಿತ, ಕುಡಿದ ಮತ್ತಿನಲ್ಲಿ ವಾಹನ ಚಾಲನೆ, ಮೊಬೈಲ್ ಪೋನ್ ಬಳಕೆ, ಅತಿವೇಗದ ಚಾಲನೆ ನಿಲ್ಲಬೇಕು. ಇದರಿಂದ ಅನೇಕ ಸಾವು ನೋವುಗಳು ಸಂಭವಿಸುತ್ತಿವೆ ಎಂದು ತಿಳಿಸಿದರು.  

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಅಂಬವ್ವ ಕುಂಬಾರ ಅವರು ಮಾತನಾಡಿ,ಸಮಾಜದಲ್ಲಿ ನಡೆಯುವ ಬಾಲ್ಯ ವಿವಾಹವನ್ನು ಹೆಣ್ಣು ಮಕ್ಕಳು ತಡೆಹಿಡಿಯಬೇಕು ಅಥವಾ 1098 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಿ ಅಧಿಕಾರಿಗಳು ಬಂದು ತಕ್ಷಣ ವಿವಾಹ ನಿಲ್ಲಿಸುತ್ತಾರೆ ಎಂದು ಬಾಲ್ಯ ವಿವಾಹದ ಕುರಿತು ಸವಿಸ್ತಾರವಾಗಿ ಮಾತನಾಡಿದರು.  

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಕೀಲರ ಸಂಘದ ಸದಸ್ಯರಾದ ರವಿ ನಾಯಕ, ರಾಜಕುಮಾರ ಬಿರಾದಾರ, ಅಸ್ಲಾಂ ಬಂಕಲಗಿ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳಾದ  ಬಿ.ಎಂ.ಚೌರ ಅವರು ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಯುವಕರು, ಚಿಕ್ಕಮಕ್ಕಳು ಅತ್ಯಂತ ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ನಿಯಮಗಳು ಇರುವುದು ನಮ್ಮ ಒಳ್ಳೆಯದಕ್ಕಾಗಿ ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಬೇಕು ಎಂದು ಹೆಳಿದರು.  

ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಎನ್‌.ಎಲ್‌.ಅಂಗಡಿ ಅವರು ಮಾತನಾಡಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಮಹತ್ವ ಅರಿಯಬೇಕು, ಅಪಘಾತ ಪ್ರಮಾಣಗಳನ್ನು ಕಡಿಮೆ ಮಾಡಲು ವಾಹನ ಚಲಿಸುವ ಪ್ರತಿಯೊಬ್ಬರು ಚಾಲನಾ ಪರವಾನಿಗೆ ಪಡೆದಿರಬೇಕು ಎಂದು ಹೇಳಿದರು.  

ಉಪನ್ಯಾಸಕ ಸಿದ್ದರಾಮ ತಳವಾರ ನಿರೂಪಿಸಿ, ವಂದಿಸಿದರು. ಪ್ರಾಚಾರ್ಯ ಎಸ್‌.ಪಿ. ರಜಪೂತ್, ಉಪನ್ಯಾಸಕರಾದ ಎಸ್‌.ಎಚ್‌.ಮುಬಿ, ಎಂ.ವೈ.ಬುಯ್ಯಾರ, ಎಸ್‌.ವ್ಹಿ. ಕುಲಕರ್ಣಿ ಎನ್‌.ಪಿ.ಕೊರಬು, ಸನ್ನಥ ಬಾಗಡಿ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.