ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಗಂಡುಗಲಿ ಕುಮಾರರಾಮನ ಹೆಸರಿಡಲು ಸಚಿವರಿಗೆ ಮನವಿ
ಕೊಪ್ಪಳ 07: ನಗರದಲ್ಲಿ ನವೀಕರಣಗೊಳ್ಳುತ್ತಿರುವ ರೈಲ್ವೆ ನಿಲ್ದಾಣಕ್ಕೆ ಗಂಡುಗಲಿ ಕುಮಾರರಾಮನ ಹೆಸರಿಡಲು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ, ಸಂಸದ ಕೆ.ರಾಜಶೇಖರ ಬಿ.ಹಿಟ್ನಾಳ, ಶಾಸಕ ಕೆ.ರಾಘವೇಂದ್ರ ಬಿ.ಹಿಟ್ನಾಳ್. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರಿಗೆ ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಮನವಿಗಳನ್ನು ಸಲ್ಲಿಸಿ ಒತ್ತಾಯಿಸಲಾಯಿತು.
ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ್ದ 20ಕ್ಕೂ ಹೆಚ್ಚು ಜನಪರ ಸಂಘಟನೆಗಳು ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಹೆಸರಿಡುವ ವಿಚಾರವಾಗಿ ಹಲವಾರು ರೀತಿಯ ಅಭಿಪ್ರಾಯಗಳನ್ನು ಮಂಡಿಸಿ, ಅಂತಿಮವಾಗಿ ನಿರ್ಣಯಿಸಿದಂತೆ ಮೊದಲನೆಯದಾಗಿ ಗಂಡುಗಲಿ ಕುಮಾರರಾಮನ ಹೆಸರು, ಎರಡನೆಯದಾಗಿ ದೇವಾನಾಂಪ್ರಿಯ ಅಶೋಕ್ ಚಕ್ರವರ್ತಿಯ ಹೆಸರನ್ನು ಆಯ್ಕೆ ಮಾಡಲಾಯಿತು.
ದೇಶದ ಬಹುತೇಕ ಕಡೆಗಳಲ್ಲಿ ಈಗಾಗಲೇ ಅಶೋಕ ಚಕ್ರವರ್ತಿಯ ಹೆಸರನ್ನಿಡಲಾಗಿದೆ, ಶಾಲೆ, ಕಾಲೇಜುಗಳ ಪಠ್ಯಗಳಲ್ಲಿ ಅಶೋಕನ ಇತಿಹಾಸ ದಾಖಲಾಗಿರುವುದುರಿಂದ ಕೊಪ್ಪಳ ಭಾಗದಲ್ಲಿ ಪರನಾರಿ ಸಹೋದರ ಎಂತಲೇ ಖ್ಯಾತಿಯಾಗಿರುವ ಕುಮಾರರಾಮನ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ಇಡುವ ಅಗತ್ಯವಿದೆಯೆಂದು ಒಮ್ಮತದ ತೀರ್ಮಾನಕ್ಕೆ ಬರಲಾಯಿತು. ಅದರಂತೆ ಸ್ಥಳೀಯ ಐತಿಹಾಸಿಕ ಹಿನ್ನೆಲೆಯುಳ್ಳ ಹೆಸರನ್ನು ಇಡಲು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಗಳ ಮುಖಂಡರಾದ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ ಶೀಲವಂತರ, ಅಲೆಮಾರಿ ಸಂಘಟನೆಯ ನಾಯಕ ಸಂಜಯದಾಸ ಕೌಜಗೇರಿ, ಮಹಾಂತೇಶ ಕೊತಬಾಳ, ಪ್ರಕಾಶ ಮ್ಯಾದರ್, ರಾಮಲಿಂಗಯ್ಯ ಶಾಸ್ತ್ರಿ, ಶಾಂತಯ್ಯ ಅಂಗಡಿ, ಯಲ್ಲಪ್ಪ ಬಂಡಿ ಮುಂತಾದವರು ಹಾಜರಿದ್ದರು