ಕನ್ನಡ ಜಾಗೃತಿ ಸಮಿತಿ ನೇಮಕವನ್ನು ಯಥಾಪ್ರಕಾರ ಮುಂದುವರಿಸಲು ಸಚಿವ ಲಾಡ್ ಗೆ ಮನವಿ

ಕನ್ನಡ ಜಾಗೃತಿ ಸಮಿತಿ ನೇಮಕವನ್ನು ಯಥಾಪ್ರಕಾರ ಮುಂದುವರಿಸಲು ಸಚಿವ ಲಾಡ್ ಗೆ ಮನವಿ Request to Minister Lad to continue the appointment of Kannada Jagruti Samiti as usual

ಕನ್ನಡ ಜಾಗೃತಿ ಸಮಿತಿ ನೇಮಕವನ್ನು ಯಥಾಪ್ರಕಾರ ಮುಂದುವರಿಸಲು ಸಚಿವ ಲಾಡ್ ಗೆ ಮನವಿ 

         ಧಾರವಾಡ 27 : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಧಾರವಾಡ ಜಿಲ್ಲಾ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ  ವ್ಯಾಪ್ತಿಯ ಕನ್ನಡ ಜಾಗೃತಿ ಸಮಿತಿಗೆ ಪ್ರಾಧಿಕಾರದಿಂದ ನಾಮ  ನಿರ್ದೇಶನಗೊಂಡ ಸದಸ್ಯರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿಯಾಗಿ ತಮ್ಮ ನೇಮಕಕ್ಕೆ ತಡೆ ಒಡ್ಡಿರುವ ಪಾತ್ರವನ್ನು ವಾಪಸ್ ಪಡೆದು, ಉಭಯ ಸಮಿತಿಗಳನ್ನು ಯಥಾವತ್ತಾಗಿ ಉಳಿಸಬೇಕೆಂದು ಮನವಿ ಮಾಡಿದರು. ಸಚಿವರನ್ನು  ಭೇಟಿಯಾದ ಸದಸ್ಯರು, ನಮ್ಮ ನಿತ್ಯದ ಕೆಲಸ-ಕಾರ್ಯಗಳ ಜೊತೆಗೆ ನಮ್ಮ ಇತಿಮಿತಿಯಲ್ಲಿ ಕನ್ನಡ ಸೇವೆಯನ್ನು ದಶಕಗಳಿಂದ ಕೈಗೊಂಡಿದ್ದೇವೆ; ನಮ್ಮಲ್ಲಿ ಕೆಲವರು ಕನ್ನಡಕ್ಕಾಗಿ ಬೀದಿ ಹೋರಾಟಕ್ಕಿಳಿದು ತನು-ಮನ-ಧನಗಳ ತ್ಯಾಗ ಮಾಡಿದವರಿದ್ದಾರೆ; ಮತ್ತೆ ಕೆಲವರು ಕತೆ-ಕವನಗಳ ರಚನೆಯಲ್ಲಿ ತೊಡಗಿ ಕನ್ನಡವನ್ನು ಕಟ್ಟಿದವರಿದ್ದೇವೆ; ಪತ್ರ ಚಳವಳಿ ಮೂಲಕ ಸರಕಾರದ ಇಲಾಖೆಗಳಿಗೆ,  

       ಕಾರ​‍್ೊರೇಟ್ ಕಂಪನಿಗಳಿಗೆ ಕನ್ನಡ ಅನುಷ್ಠಾನದ ಮನವರಿಕೆ ಮಾಡಿದವರಿದ್ದೇವೆ; ಮುಂದಿನ ಪೀಳಿಗೆಯಲ್ಲಿ ಈ ಜಾಗೃತಿ ಇರುವಂತೆ ನೋಡಿಕೊಳ್ಳುತ್ತಿದ್ದೇವೆ. ನಮ್ಮ ಸೇವೆಯನ್ನು ಗಮನಿಸಿಯೇ ಪ್ರಾಧಿಕಾರ ನಮ್ಮನ್ನು ಅಳೆದುತೂಗಿ, ಅರ್ಹತೆಯನ್ನು ಗಮನಿಸಿ ಕನ್ನಡ ಜಾಗೃತಿ ಸಮಿತಿಗೆ ಶಿಫಾರಸು ಮಾಡಿತ್ತು. ನಾವು ಯಾರೂ ಈ ಸಮಿತಿಗೆ ನಮ್ಮನ್ನು ನೇಮಕ ಮಾಡಿ ಅಂತ ಅರ್ಜಿ ಹಾಕಿದವರಲ್ಲ. ನಮ್ಮ ಸೇವೆ ಮತ್ತು ಅರ್ಹತೆಯನ್ನು ಗುರುತಿಸಿಯೇ ಸರಕಾರ ನಮ್ಮನ್ನು ನೇಮಕ ಮಾಡಿದಾಗ ನಮಗೆ ಹೆಮ್ಮೆಯೇ ಆಗಿತ್ತು. ಆದರೆ ಜಿಲ್ಲಾ ಉಸ್ತುವಾರಿ  ಸಚಿವರಾದ ಪ್ರಾಧಿಕಾರಕ್ಕೆ  ಪತ್ರ ಬರೆದು, ನಮ್ಮ ನೇಮಕವನ್ನು ತಡೆಹಿಡಿಯುವಂತೆ ಕೋರಿದ್ದೀರಿ. ಆ ಪತ್ರದ ಪ್ರಕಾರ ನಮ್ಮ ನೇಮಕವನ್ನು ತಡೆಹಿಡಿಯಲಾಗಿದೆ. ಇದರಿಂದ ನಮಗೆ ಸಾರ್ವಜನಿಕವಾಗಿ ಅವಮಾನ ಮಾಡಿದಂತಾಗಿದೆ.

         ಈ ರೀತಿ ಯಾವುದೇ ಕನ್ನಡದ ಜಿಜ್ಞಾಸುಗಳಿಗೆ ಭವಿಷ್ಯದಲ್ಲಿ ಪುನರಾವರ್ತನೆಯಾಗಬಾರದು ಎಂದು ಸಚಿವರ ಮೂಲಕ ಸರಕಾರಕ್ಕೆ ವಿನಂತಿಸಿದರು. ಆಡಳಿತದಲ್ಲಿ ಕನ್ನಡ ಭಾಷೆಯ ಅನುಷ್ಠಾನದ ಉದಾತ್ತ ಉದ್ದೇಶದೊಂದಿಗೆ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಅವರು ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಈ ಕನ್ನಡ ಜಾಗೃತಿ ಸಮಿತಿಗಳನ್ನು ರಚಿಸಿದರು. ಆ ಮೂಲಕ ಕನ್ನಡ ಭಾಷೆಯ ಸಂರಕ್ಷಣೆಗೆ ಪ್ರತಿ ಜಿಲ್ಲೆ ಮತ್ತು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕನ್ನಡ ಭಾಷೆಯ ಬಗ್ಗೆ ನೈಜ ಕಳಕಳಿ ಹೊಂದಿರುವ ತಂಡಗಳೇ ರಚನೆಯಾಗಿ, ಸರಕಾರಿ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನದ ಪ್ರಮಾಣ ಗಣನೀಯವಾಗಿ ಹೆಚ್ಚಿತು. ಇಷ್ಟಾದರೂ ಇನ್ನೂ ಕನ್ನಡ ಭಾಷಾ ಅನುಷ್ಠಾನ ಸಂಪೂರ್ಣಗೊಂಡಿಲ್ಲ. ಇದಕ್ಕಾಗಿಯೇ ಕನ್ನಡ ಜಾಗೃತಿ ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದೂ ಸಚಿವರಿಗೆ ಮನವರಿಕೆ ಮಾಡಿದರು.

     ಸಚಿವರು  ಈ ಬಗ್ಗೆ ಕೂಡಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದು, ತಮ್ಮ ನೇಮಕವನ್ನು ಮತ್ತು ಕನ್ನಡ ಜಾಗೃತಿ ಸಮಿತಿಗಳನ್ನು ಜಿಲ್ಲೆಯಲ್ಲಿ ಯಥಾಪ್ರಕಾರ ಮುಂದುವರಿಸುವಂತೆ ಸೂಚಿಸಬೇಕೆಂದು ಮನವಿ ಮಾಡಿದರು. ಈ ಬಿಕ್ಕಟ್ಟು ಒಂದು ವಾರದೊಳಗೆ ಬಗೆಹರಿಸಿ, ಕರ್ನಾಟಕ ರಾಜ್ಯೋತ್ಸವದ ಹೊತ್ತಿಗೆ ಕನ್ನಡ ಜಾಗೃತಿ ಸಮಿತಿಗಳು ಈಗ ನೇಮಕಗೊಂಡಿರುವ ಸದಸ್ಯರನ್ನೇ ಒಳಗೊಂಡು ಕ್ರಿಯಾಶೀಲವಾಗುವಂತೆ ಕ್ರಮ ಕೈಗೊಳ್ಳಬೇಕೆಂದೂ ಆಗ್ರಹಿಸಿದರು. ಸಚಿವರು ಕೂಡಲೇ ಕನ್ನಡ ಜಾಗೃತಿ ಸಮಿತಿಗೆ ತಮ್ಮಿಂದ ನೀಡಲಾಗಿರುವ ತಡೆಯನ್ನು ವಾಪಾಸ್ ಪಡೆದು ಸರ್ಕಾರದ   ನೇಮಕಗಳನ್ನು ಮುಂದುಚರಿಸುವುದಾಗಿ ಭರವಸೆ ನೀಡಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಮತ್ತು  ಧಾರವಾಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ. ಎಚ್‌.ಎ. ಇಲಕಲ್, ಸಂಗಮೇಶ ಮೆಣಸಿನಕಾಯಿ, ಅಮೃತ ಇಜಾರಿ, ಸಿದ್ರಾಮ್ ಹಿಪ್ಪರಗಿ, ಸುಧೀರ ಮುಧೋಳ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.