ಧರ್ಮ ಮತ್ತು ಕಾಯಕ ಬೇರೆ ಅಲ್ಲ: ಬಸವರಾಜ ಬೊಮ್ಮಾಯಿ

ಧರ್ಮ ಮತ್ತು ಕಾಯಕ ಬೇರೆ ಅಲ್ಲ: ಬಸವರಾಜ ಬೊಮ್ಮಾಯಿ Religion and Kayaka are not different: Basavaraja Bommai

ಶಿಗ್ಗಾವಿ 08  : ಹಣೆ ಬರಹ ಬದಲಿಸಲು ಕೈಯಲ್ಲಿನ ಗೆರೆ ಸವಿಯುವ ಹಾಗೆ ದುಡಿಯಬೇಕು. ಕಾಯಕ ಮಾಡುವುದರಿಂದ ಕೈಲಾಸ ಕಾಣಬಹುದು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.  ಪಟ್ಟಣದ ವಿರಕ್ತಮಠದಲ್ಲಿ 33 ನೇಯ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಿ, ಮಾತನಾಡಿದ ಅವರು ಮನುಷ್ಯನ ಬದುಕು ಬಹಳ ವಿಚಿತ್ರ ಇದೆ. ಹುಟ್ಟು ನಮ್ಮ ಕೈಯಲ್ಲಿ ಇಲ್ಲ. ಅದರ ಬಗ್ಗೆ ಚಿಂತೆ ಮಾಡುತ್ತೇವೆ.

ಸಾವು ನಮ್ಮ ಕೈಯಲ್ಲಿಲ್ಲ ಅದರ ಬಗ್ಗೆ ಚಿಂತೆ ಮಾಡುತ್ತೇವೆ. ಬದುಕು ನಮ್ಮ ಕೈಯಲ್ಲಿದೆ. ಆದರೆ ಅದರ ಬಗ್ಗೆ ಚಿಂತೆ ಮಾಡುವುದಿಲ್ಲ. ನಮ್ಮ ಕಾಯಕದ ಬಗ್ಗೆ ಚಿಂತೆ ಮಾಡುವುದಿಲ್ಲ. ಇಲ್ಲದ ವಿಚಾರಗಳ ಬಗ್ಗೆ ಚಿಂತೆ ಮಾಡುವುದು ಹೆಚ್ಚು. ಹಾಸಿಗೆ ಇದ್ದವರಿಗೆ ನಿದ್ದೆ ಇಲ್ಲ. ನಿದ್ದೆ ಇದ್ದವರಿಗೆ ಹಾಸಿಗೆ ಇಲ್ಲ. ಶ್ರೀಮಂತರಿಗೆ ನಿದ್ದೆಯೇ ಬರುವುದಿಲ್ಲ. ಹಾಸಿಗೆ ಇದ್ದರೇನು ಮಾಡುವುದು. ಹಾಸಿಗೆ ಇದ್ದವರು ಮೈ ಮುರಿದು ದುಡಿದರೆ ಅವರಿಗೆ ನಿದ್ದೆ ಬರುತ್ತದೆ.

ಹಾಸಿಗೆ ಇಲ್ಲದವರೂ ದುಡಿದು ಹಾಸಿಗೆ ತೆಗೆದುಕೊಳ್ಳಬೇಕು. ಇಬ್ಬರೂ ಕಾಯಕ ಮಾಡಬೇಕು ಎಂದು ಹೇಳಿದರು. ಹಣೆ ಬರಹ ಬದಲಿ ಮಾಡಬೇಕೆಂದರೆ ಕೈಯಲ್ಲಿನ ಗೆರೆ ಸವಿಯುವ ಹಾಗೆ ದುಡಿಯಬೇಕು. ಕಾಯಕಕ್ಕೆ ಅಷ್ಟೊಂದು ಮಹತ್ವ ಕೊಟ್ಟಿದ್ದಾರೆ. ನಾವು ನಮ್ಮ ಕಾಯಕ ಮಾಡಬೇಕು. ಕಾಯಕಕ್ಕೆ ನಿರ್ಧಿಷ್ಟ ಸಮಯವಿಲ್ಲ. ಕಾಯಕದಿಂದ ಬಂದ ಫಲವನ್ನು ದಾಸೋಹಕ್ಕೆ ಕೊಡಬೇಕು ಎಂದರು.  ಸದಮಲ ಜ್ಞಾನಿ ಕುರಿತು ಪ್ರವಚನವನ್ನು ಶ್ರೀ ಸದ್ಗುರು ಸಮರ್ಥ ಡಾ. ಎ.ಸಿ ವಾಲಿ ಮಹಾರಾಜರು ನಿರ್ವಹಿಸಿದರು.

ಪಾವನ ಸಾನಿಧ್ಯ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಬಸವಲಿಂಗ ದೇವರು ಸಮ್ಮುಖವಹಿಸಿದ್ದರು.      ಜಿ.ಟಿ.ಟಿ.ಸಿ ವಲಯ ಮುಖ್ಯಸ್ಥ ಶಿವಾನಂದ ಕುಂಬಾರ, ದುಂಢಸಿ ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪ, ವಾಗ್ಮಿ ಕಗ್ಗ ನಟೇಶ, ನಿವೃತ್ತ ಪ್ರಾಚಾರ್ಯ ಜಿ.ಎನ್‌.ಯಲಿಗಾರ, ಮುಖಂಡ ಶಿವಾನಂದ ಮ್ಯಾಗೇರಿ, ಪ್ರಕಾಶ ವೇರ್ಣೇಕರ, ಸಿ.ಡಿ.ಯತ್ನಳ್ಳಿ, ರಮೇಶ ಹರಿಜನ, ನಾಗಪ್ಪ ಬೆಂತೂರ ಸೇರಿದಂತೆ ಭಕ್ತ ಸಮೂಹ ಉಪಸ್ಥಿತರಿದ್ದರು. ಪ್ರೋ ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು.