ಜನೇವರಿ 31ಕ್ಕೆ ರಾವುತ ಬಿಡುಗಡೆ
ಕೊಪ್ಪಳ 19: ಜಿಲ್ಲೆಯ ಕನಕಗಿರಿ, ಜಬ್ಬಲಗುಡ್ಡ, ಮುಕ್ಕುಂಪಿ ಸೇರಿದಂತೆ ವಿವಿಧೆಡೆ ಚಿತ್ರೀಕರಣಗೊಂಡ ಕನ್ನಡದ ರಾವುತ ಸಿನಿಮಾ ಇದೇ ಜನೇವರಿ 31ರಂದು ಬಿಡುಗಡೆ ಆಗುತ್ತಿದೆ ಎಂದು ಚಿತ್ರದ ನಿರ್ದೇಶಕ ಸಿದ್ದು ವಜ್ರ್ಪ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಚಿತ್ರದ ಪೊಸ್ಟರ್ ಬಿಡುಗಡೆ, ಟ್ರೈಲರ್ ಲಾಂಚ್ಗೊಳಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಾವುತ ಸಂಪೂರ್ಣವಾಗಿ ಉತ್ತರ ಕರ್ನಾಟಕ ಭಾಷೆ, ಸೊಗಡು, ಲೊಕೇಷನ್ ಇರುವ ಚಿತ್ರವಾಗಿದ್ದು, ಈಗಾಗಲೇ ಚಿತ್ರದ ಸೆನ್ಸಾರ್ ಮುಗಿದಿದೆ. ಯು/ಎ ಪ್ರಮಾಣತ್ರದೊಂದಿಗೆ ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್ ಸೇರಿದಂತೆ 130 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದರು.ಸತ್ತ ನಂತರ ಆತ್ಮದ ಪಯಣವನ್ನು ತೋರಿಸುವ ಸಿನಿಮಾ ಇದಾಗಿದ್ದು, ಈ ಥರದ ಪ್ರಯತ್ನ ಇರುವ ಸಿನಿಮಾ ಇದುವರೆಗೆ ಬಂದಿಲ್ಲ.ಎಲ್ಲರಿಗೂ ಭೂಮಿಗೆ ಬರುವ ಎಂಟ್ರಿ ಗೊತ್ತು. ಆಮೇಲೆ ಭೂಮಿಯಿಂದ ಎಕ್ಸಿಟ್ ಯಾರಿಗೂ ಗೊತ್ತಿಲ್ಲ. ಕೆಲ ಸೈದ್ಧಾಂತಿಕ ಅಂಶಗಳೊಂದಿಗೆ ಸಿನಿಮಾ ನಿರ್ಮಿಸಲಾಗಿದೆ. ವೇದೋಪನಿಷತ್ತು ಸೇರಿ ಹಲವು ಪುಸ್ತಕಗಳನ್ನು ಅಧ್ಯಯನ ಮಾಡಿ, ಈ ಕುರಿತ ತಜ್ಞರ ಹಿರಿಯರ ಮಾರ್ಗದರ್ಶನದಲ್ಲಿ ಸಿನಿಮಾ ಮಾಡಿದ್ದೇವೆ ಎಂದು ನಿರ್ದೇಶಕ ಸಿದ್ದು ವಜ್ರ್ಪ ಹೇಳಿದರು.
ಕಢಎರಢಋಢ ಶಿಕ್ಷಕರ ಸೇವಾ ಬಳಗದ ಮುಖಂಡ ಬೀರ್ಪ ಅಂಡಗಿ ಮಾತನಾಡಿ, ರಾವುತ ಸಿನಿಮಾದ ಪ್ರಿಮಿಯರ್ ಷೋ ನೋಡಿದ್ದೇವೆ. ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ. ಸಿನಿಮಾದ ವಿಶೇಷವೆಂದರೆ ಕೊಪ್ಪಳ ಭಾಗದ ಕಲಾವಿದರು ಸೇರಿದಂತೆ ಸ್ಥಳೀಯರಿಗೆ ಆದ್ಯತೆ ನೀಡಲಾಗಿದೆ. ಈ ಹೊಸ ಚಿತ್ರ ಎಲ್ಲೂ ಹೊಸಬರ ಸಿನಿಮಾ ಎನಿಸದೇ, ನುರಿತ ತಂತ್ರಜ್ಞರ ಕೆಲಸದಿಂದ ಮಾಡಿದ ಕಮರ್ಷಿಯಲ್ ಸಿನಿಮಾ ಫೀಲ್ ಕಟ್ಟಿಕೊಡುತ್ತದೆ. ಚಿತ್ರದ ಮೂರು ಹಾಡುಗಳಿಗೆ ಜಿಲ್ಲೆಯ ಶಿಕ್ಷಕ ಸುರೇಶ ಕಂಬಳಿ ಹಾಡು ರಚಿಸಿದ್ದು, ಅದ್ಭುತ ಸಾಹಿತ್ಯ ಹೊಂದಿವೆ ಎಂದು ಹಾಡಿನ ಸಾಲೊಂದರ ವಿವರಣೆ ನೀಡಿದರು.
ನಿರ್ಮಾಪಕ ಈರಣ್ಣ ಬಡಿಗೇರ ಮಾತನಾಡಿ, ಸುಮಾರು 85 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿನಿಮಾ ನಿರ್ಮಿಸಲಾಗಿದ್ದು, ಪೊಸ್ಟ್ ಪ್ರೊಡಕ್ಷನ್, ಪ್ರಮೋಷನ್ ಕಾರ್ಯಗಳು ನಡೆಯುತ್ತಿವೆ. ರಾವುತ ಎಂದರೆ ಕುದುರೆ ಪಳಗಿಸುವವನು ಎಂದರ್ಥ. ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು. ಈ ವೇಳೆ ಚಿತ್ರತಂಡದ ನಿಂಗಪ್ಪ ಕಂಬಳಿ, ಸುರೇಶ ಕಂಬಳಿ ಸೇರಿದಂತೆ ಚಿತ್ರತಂಡದ ಅನೇಕರು ಇದ್ಧರು.