ಸಾರ್ವಜನಿಕರು ಇಲಿ ಜ್ವರ ಕುರಿತು ಎಚ್ಚರ ವಹಿಸಿ: ಡಾ.ಮರಿಯಂಬಿ
ಬಳ್ಳಾರಿ 22:ಸಾರ್ವಜನಿಕರು ತಮ್ಮ ಮನೆಯ ಸುತ್ತ-ಮುತ್ತ ಹಾಗೂ ಇತರೆ ವಾಸಸ್ಥಳ ಸುತ್ತಲಿನಲ್ಲಿ ಇಲಿಯ ಬಿಲಗಳು ಕಂಡುಬಂದಲ್ಲಿ ಅವುಗಳನ್ನು ಮುಚ್ಚಿ ಆಹಾರ ಮತ್ತು ನೀರು ಸುರಕ್ಷಿತವಾಗಿ ಇಡುವ ಮೂಲಕ ಇಲಿಜ್ವರ ಹರಡುವಿಕೆಯನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ ಅವರು ಹೇಳಿದರು.
ನಗರದ ಗುಗ್ಗರಹಟ್ಟಿ ಬಡಾವಣೆಯಲ್ಲಿ ಶಂಕಿತ ಪ್ರಕರಣದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ನೀಡುವ ಮೂಲಕ ಅವರು ಮಾತನಾಡಿದರು.
ವೈಜ್ಞಾನಿಕವಾಗಿ ಲೆಷ್ಟೋಸ್ಪೆರೊಸಿಸ್ ಎಂದು ಕರೆಸಿಕೊಳ್ಳುವ ಇಲಿ ಜ್ವರ "ಲೆಸ್ಟೋಸೈರ್" ಎಂಬ ಬ್ಯಾಕ್ಟಿರಿಯಾ ರೋಗಾಣುವಿನಿಂದ ಬರುವ ಕಾಯಿಲೆಯಾಗಿದೆ. ಈ ಬ್ಯಾಕ್ಟಿರಿಯಾ ಸೋಂಕು ಹೊಂದಿದ ಇಲಿ ಮನುಷ್ಯನನ್ನು ಕಚ್ಚಿದರೆ ಅಥವಾ ಅದರ ಎಂಜಲು, ಮೂತ್ರ, ಮಲ ಅಥವಾ ಇಲಿಯ ದೇಹದ ದ್ರವ ಮನುಷ್ಯನ ಚರ್ಮಕ್ಕೆ ತಾಕಿದರೆ ಸೋಂಕು ಉಂಟಾಗಬಹುದು ಎಂದು ಅವರು ತಿಳಿಸಿದರು.
ಇಲಿಯ ಬಾಯಿಯಿಂದ, ಕಣ್ಣಿನಿಂದ ಬರುವಂತಹ ದ್ರವವು ಕೂಡ ಹಾನಿಕಾರಕವಾಗಬಹುದು. ಕೆಲವು ಬಾರಿ ಸೋಂಕಿತ ಇಲಿಗಳು ತಮ್ಮ ಉಗುರಿನಿಂದ ಪರಿಚಿದರೆ ಅಥವಾ ಹಲ್ಲಿನಿಂದ ಕಚ್ಚಿದರೂ ಕೂಡ ಇಲಿ ಜ್ವರ ಬರಬಹುದು. ಹಾಗಾಗಿ ಮನೆಯ ಸುತ್ತಲು ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ಇಲಿ ಜ್ವರ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು ಸೇರಿದಂತೆ ಕಾಡು ಮೃಗಗಳಿಗೂ ಸಹ ಬರುವ ಸಾದ್ಯತೆ ಇದ್ದು, ಇಲಿ ಹೆಗ್ಗಣಗಳಿಂದ ಹೆಚ್ಚು ಹರಡುವುದರಿಂದ ಇಲಿ ಜ್ವರ ಎಂದು ಹೇಳಲಾಗುತ್ತದೆ. ಕೆಲವು ಬಾರಿ ಸೋಂಕಿತ ಇಲಿಗಳನ್ನು ಹಿಡಿದಿರುವ ಬೆಕ್ಕುಗಳು ಮತ್ತು ನಾಯಿಗಳಿಂದ ಕೂಡ ನಮಗೆ ರೋಗಬರುವ ಸಾಧ್ಯತೆ ಇರುತ್ತದೆ ಎಂದರು.
*ಲಕ್ಷಣಗಳು:*
ಸಾಮಾನ್ಯವಾಗಿ ಮೈಕೈ ನೋವು, ತಲೆನೋವು, ವಾಕರಿಕೆ ಅಥವಾ ವಾಂತಿ, ಕೀಲುಗಳಲ್ಲಿ ನೋವು, ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು, ಸೋಂಕು ಉಂಟಾದ ಎರಡು ದಿನಗಳಲ್ಲಿ ಮೈಮೇಲೆ ಗುಳ್ಳೆಗಳು ಬರುವುದು ಮತ್ತು ಇಲಿ ಕಚ್ಚಿದ ಜಾಗದಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಅಲ್ಲದೇ ಕೇವಲ 3 ದಿನಗಳಲ್ಲಿ ಅಥವಾ 3 ವಾರಗಳ ಅಂತರದಲ್ಲಿ ರೋಗ ಉಲ್ಬಣವಾಗುವ ಸಾಧ್ಯತೆ ಇರುತ್ತದೆ ಎಂದು ಅವರು ತಿಳಿಸಿದರು.
*ಏನು ಹಾನಿ?:*
ಸರಿಯಾದ ಸಮಯಕ್ಕೆ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಸೋಂಕಿತರ ಕಿಡ್ನಿ ಹಾನಿಯಾಗಬಹುದು, ಲಿವರ್ ತನ್ನ ಚಟುವಟಿಕೆಯು ಸಂಪೂರ್ಣವಾಗಿ ನಿಲ್ಲಿಸಬಹುದು, ಬೆನ್ನುಹುರಿ ನೋವು ಕಾಣಿಸಿಕೊಳ್ಳಬಹುದು, ನ್ಯೂಮೋನಿಯ ಬರುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಇಲಿ ಜ್ವರಕ್ಕೆ ಚಿಕಿತ್ಸೆ ಪಡೆಯದೇ ಇದ್ದಲ್ಲಿ ವಿವಿಧ ಅಂಗಾಂಗಗಳ ಹಾನಿಯಾಗುವ ಜೊತೆಗೆ ಮರಣವು ಸಹ ಸಂಭವಿಸಬಹುದು ಎಂದು ಹೇಳಿದರು.
ಸಾಮಾನ್ಯವಾಗಿ ಶಂಕಿತ ವ್ಯಕ್ತಿಗಳನ್ನು ಅವರ ರಕ್ತದ ಪರೀಕ್ಷೆಯ ಮೂಲಕ ಲೆಪ್ಟೊಸ್ಪೈರೊಸಿಸ್ ಐಜಿಎಮ್ಎಲಿಜ ಟೆಸ್ಟ್ ಮೂಲಕ ಖಚಿತ ಪಡಿಸಬಹುದಾಗಿದೆ. ಒಂದು ವೇಳೆ ಒಂದೇ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಖಚಿತ ಪ್ರಕರಣಗಳು ಕಂಡು ಬಂದಲ್ಲಿ ಮತ್ತು ವಲಸೆ ಪ್ರದೇಶದಲ್ಲಿ ಪ್ರಕರಣ ಕಂಡುಬಂದಲ್ಲಿ ಹೆಚ್ಚಿನ ಪರೀಕ್ಷೆಗಾಗಿ ರಕ್ತ ಮಾದರಿಯನ್ನು ಮಂಗಳೂರಿಗೆ ಕಳುಹಿಸಿ ರಾಜ್ಯಮಟ್ಟದ ಪ್ರಯೋಗಾಲಯದಲ್ಲಿ ಮ್ಯಾಟ್ ಪರೀಕ್ಷೆ ಮಾಡಿಸಲಾಗುವುದು. ರೋಗದ ಲಕ್ಷಣಗಳು ಕಂಡುಬಂದ ತಕ್ಷಣ ಹತ್ತಿರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಲು ಮರೆಯಬಾರದು ಮತ್ತು ಚಿಕಿತ್ಸೆಯನ್ನು ವೈದ್ಯರ ಸಲಹೆ ಮೇರೆಗೆ ಸಂಪೂರ್ಣವಾಗಿ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಮಾತನಾಡಿ, ಸಾಮಾನ್ಯವಾಗಿ ಮನೆಯ ಸುತ್ತಲೂ ಇಲಿ ಕಂಡುಬರುವುದು ಸಹಜವಾಗಿರುವುದರಿಂದ ಮನೆಯ ಸುತ್ತಲಿನ ಗೋಡೆಗಳಲ್ಲಿ ಅಥವಾ ನೆಲದ ಕೆಳಭಾಗದಲ್ಲಿ ಸಣ್ಣ ಬಿಲಗಳು ಕಂಡುಬಂದರೆ ಅವುಗಳನ್ನು ಮುಚ್ಚಿಸುವ ಕ್ರಮವಾಗಬೇಕು ಎಂದರು.
ಮನೆಯಲ್ಲಿ ಆಹಾರ ಪದಾರ್ಥವನ್ನು ಮುಚ್ಚಿಡಬೇಕು. ಮನೆಯ ಸುತ್ತಲೂ ಅಥವಾ ಅಕ್ಕಪಕ್ಕ ಅನಗತ್ಯವಾದ ಕಸದ ರಾಶಿ ಇರದಂತೆ ನೋಡಿಕೊಳ್ಳಬೇಕು. ಹೊರಗಡೆಯಿಂದ ಮನೆಗೆ ಬಂದಾಗ ಕೈ ಮತ್ತು ಕಾಲುಗಳನ್ನು ಸ್ವಚ್ಛ ನೀರಿನಿಂದ ತೊಳೆದುಕೊಳ್ಳಬೇಕು. ಮನೆಯ ಹೊರಗಡೆ ಸೇರಿದಂತೆ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವಾಗ ಇಲಿಗಳಿಂದ ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ಮನೆಯ ಹೊರಗಡೆ ಕಾರ್ಯನಿರ್ವಾಹಿಸುವಾಗ ತಪ್ಪದೇ ಪಾದರಕ್ಷೆ ಧರಿಸಬೇಕು. ಒಂದು ವೇಳೆ ಇಲಿ ಎಂಜಲು ಅಥವಾ ನಮ್ಮ ದೇಹದ ಮೇಲಿನ ಗಾಯಕ್ಕೆ ಸಂಪರ್ಕಿಸಿದರೆ ಅಥವಾ ಕಡಿದರೆ ತಕ್ಷಣವೇ ಸೋಪಿನಿಂದ ಚೆನ್ನಾಗಿ ತೊಳೆದು ಆಸ್ಪತ್ರೆಗೆ ವೈದ್ಯರ ಬಳಿ ತೆರಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಕಾಶಿಪ್ರಸಾದ್, ವೈದ್ಯಾಧಿಕಾರಿ ಡಾ.ಶಗುಪ್ತಾ, ತಾಲ್ಲೂಕು ಸಾಂಕ್ರಾಮಿಕ ರೋಗ ನಿರ್ವಾಹಕ ಶಾಸ್ತ್ರಜ್ಞ ನವೀನ್ ಸೇರಿದಂತೆ ಸಿಬ್ಬಂದಿಗಳಾದ ಮಂಜುಳಾ, ಅರುಣಾ, ಜಿಲಾನ್ ಇದ್ದರು.