ಸರಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆಗಾಗಿ ಆಗ್ರಹಿಸಿ ಫೆಬ್ರವರಿ 3 ರಂದು ಪ್ರತಿಭಟನೆ
ಕೊಪ್ಪಳ 27: ಜಿಲ್ಲಾ ಆಸ್ಪತ್ರೆ ಎದುರು ಎಸ್. ಯು. ಸಿ. ಐ. (ಕಮ್ಯುನಿಸ್ಟ್) ಪಕ್ಷದ ನೇತೃತ್ವದಲ್ಲಿ ಫೆಬ್ರುವರಿ 3 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಹೋರಾಟದ ಕುರಿತು ಪ್ರಚಾರ ಮಾಡಿ ಜನರಿಂದ ಸಹಿ ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ನಾಯಕರಾದ ಶರಣು ಗಡ್ಡಿ ಮಾತನಾಡಿ, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಿ ಎಚ್. ಸಿ. ಹಾಗೂ ಪಿ.ಎಚ್.ಸಿಗಳಲ್ಲಿ ಉಚಿತವಾಗಿ ಗುಣಮಟ್ಟದ ಚಿಕಿತ್ಸೆಗಾಗಿ ಆಗ್ರಹಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲಿಸಬೇಕೆಂದು ಮನವಿ ಮಾಡಿದರು. ಆಸ್ಪತ್ರೆಗಳಲ್ಲಿ ಅವಶ್ಯಕತೆ ಇರುವಷ್ಟು ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಗಳು, ಸ್ವಚ್ಛತಾ ಸಿಬ್ಬಂದಿಗಳು, ಇಲ್ಲದಾಗಿದೆ. ಮತ್ತೊಂದೆಡೆ ಜನರಿಗೆ ಒದಗಿಸುತ್ತಿರುವ ಓಷಧಿಗಳ ಗುಣಮಟ್ಟ ಸಹ ಕಳಪೆಯಾಗಿದೆ, ಸ್ಕ್ಯಾನಿಂಗ್, ರಕ್ತಪರೀಕ್ಷೆ, ಇನ್ನಿತರ ಪರೀಕ್ಷೆಗಳು( ಟೆಸ್ಟ್ ಗಳು) ಕೂಡಲೇ ಆಗುವುದಿಲ್ಲ. ಇದರಿಂದಾಗಿ ಜನರು ನರಳುವಂತೆ ಆಗಿದೆ.
ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ಈ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಜಿಲ್ಲೆಯ ಜನರು ಮುಂದಾಗಬೇಕು ಎಂದು ಮನವಿ ಮಾಡಿದರು... ಪಕ್ಷದ ಸದಸ್ಯರಾದ ಶರಣು ಪಾಟೀಲ್ ಇದ್ದರು. ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಂತಹ ನೂರಾರು ಜನರು ಸಹಿ ಮಾಡುವ ಮೂಲಕ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದರು.