ಸುಳೇಭಾವಿ ಗ್ರಾಮದ ರೈತರ ಹೊಲಗದ್ದೆಗೆ ರಸ್ತೆ ನಿರ್ಮಿಸಲು ಆಗ್ರಹಿಸಿ ಪ್ರತಿಭಟನೆ

ಸುಳೇಭಾವಿ ಗ್ರಾಮದ ರೈತರ ಹೊಲಗದ್ದೆಗೆ ರಸ್ತೆ ನಿರ್ಮಿಸಲು ಆಗ್ರಹಿಸಿ ಪ್ರತಿಭಟನೆ Protest demanding construction of road to farmers' fields in Sulebhavi village

            ಬೆಳಗಾವಿ 23: ಸುಳೇಭಾವಿ ಗ್ರಾಮದ ರೈತರ ಹೊಲಗದ್ದೆಗಳಿಗೆ ಹೋಗಲು ರಸ್ತೆಯನ್ನು ನಿರ್ಮಿಸಿ ಕೊಡಬೇಕೆಂದು ಒತ್ತಾಯಿಸಿ ಯುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇಂದು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಿದ ಯುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಜಿಲ್ಲಾಡಳಿತದ ವಿಳಂಬ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.  

            ಸುಳೇಭಾವಿ ಚಂದೂರ ಮತ್ತು ಖನಗಾಂವ ಈ ಮೂರು ಗ್ರಾಮಗಳ ಮಧ್ಯದಲ್ಲಿರುವ ರೈಲ್ವೇ ಮೇಲ್ಸೇತುವೆ ಕೆಳಗೆ ಸುಳೇಭಾವಿಗೆ ಹೋಗುವ ರಸ್ತೆ ಇದ್ದು ಅದನ್ನು ನವೀಕರಿಸಬೇಕಾದ ಅವಶ್ಯಕತೆ ಇದೆ. ರೈತರ ಸುಮಾರು 300 ಎಕರೆ ಹೊಲಗಳ ರಸ್ತೆಯನ್ನು ಬಂದ ಮಾಡಿದ್ದು ಮಳೆಗಾಲದ ಸಂದರ್ಭದಲ್ಲಿ ನೀರು ನಿಂತು ಈ ರಸ್ತೆ ಸಂಪೂರ್ಣ ಬಂದ ಆಗುತ್ತದೆ. ಇದರಿಂದ ರೈತರಿಗೆ ಹಾಗೂ ಸ್ಥಳೀಯರಿಗೆ ಓಡಾಡಲು ತೊಂದರೆಯಾಗುತ್ತಿದೆ. ರಸ್ತೆಯಿಲ್ಲದ ಕಾರಣ ಕಲುಷಿತ ನೀರಿನಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಆರೋಗ್ಯ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತಿದೆ.

             ಹಲವಾರು ಬಾರಿ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳು ಕಣ್ಮುಚ್ಚಿ ಜಪ ಮಾಡುತ್ತಿದ್ದಾರೆ. 6 ತಿಂಗಳ ಹಿಂದೆ ಈ ವಿಚಾರವನ್ನು ಪ್ರಸ್ತಾಪಿಸಿದಾಗ ಮಳೆಗಾಲದ ಸಬೂಬು ನೀಡಿ ಕಾಮಗಾರಿಗೆ ವಿಳಂಬ ಧೋರಣೆ ಅನುಸರಿಸಿದ್ದರು. ಈಗ ಚಳಿಗಾಲ ಮುಗಿಯಲು ಬಂತು ಆದರೂ ಕಾಮಗಾರಿ ಆರಂಭವಾಗುತ್ತಿಲ್ಲ. ಕೂಡಲೇ ಕಾಮಗಾರಿಯನ್ನು ಆರಂಭಿಸದಿದ್ದರೇ, ಸ್ಥಳದಲ್ಲೇ ಅಡುಗೆ ಮಾಡಿ ಧರಣಿ ನಡೆಸಲಾಗುವುದು ಎಂದು ಯುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸುನೀಲ್ ಎನ್ ಎಚ್ಚರಿಕೆಯನ್ನು ನೀಡಿದರು. ಯುವ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.