ಜನ ಸಾಮಾನ್ಯರಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ- ಸಚಿವ ಶಿವಾನಂದ ಪಾಟೀಲ
Program to issue rights certificates to common people - Minister Shivanand Patil
ಹಾವೇರಿ 06 : ಫೆ.13 ರಂದು ವರ್ಲ್ಡ್ ಡ್ಯಾಂ ಸೇಪ್ಟಿ ಡಿವಿಜನ್ ಸಭೆ ಬೆಂಗಳೂರಿನಲ್ಲಿ ಇರುವುದರಿಂದ ಆಲ್ ಇಂಡಿಯಾ ಸೆಂಟ್ರಲ್ ವಾಟರ್ ಟೀಮ್ ಸಭೆಯಲ್ಲಿ ಪಾಲ್ಗೊಳ್ಳಲಿದೆ ಹಾಗೂ ಅದೇ ದಿನ ಹಂಪಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಭಾಗವಹಿಸುವುದರಿಂದ ಫೆ.13 ರಂದು ಹಾವೇರಿ ನಗರದಲ್ಲಿ ಜರುಗಬೇಕಿದ್ದ ಕಂದಾಯ ಇಲಾಖೆ ಲಕ್ಷ ಹಕ್ಕಪತ್ರ ವಿತರಣೆ ಸಮಾವೇಶವನ್ನು ಫೆ.14 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ತಿಳಿಸಿದರು.
ನಗರದ ಅಜ್ಜಯ್ಯನ ಗುಡಿ ಹತ್ತಿರ ಕಂದಾಯ ಇಲಾಖೆ ಲಕ್ಷ ಹಕ್ಕಪುತ್ರ ವಿತರಣೆ ಸಮಾವೇಶ ವೇದಿಕೆ ನಿರ್ಮಾಣ ಪರೀಶೀಲಿಸಿ, ನಂತರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಒಂದು ಸಾವಿರ ಪೂರೈಸಿದ ಸಮಯದಲ್ಲಿ ಹಕ್ಕುಪತ್ರ ವಿತರಣೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಚಿವರು ಭಾಗವಹಿಸಲಿದ್ದಾರೆ ಎಂದರು.
ಜಿಲ್ಲೆ ವಿಶೇಷ ಸಾಧನೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಂದಾಯ ಇಲಾಖೆ ದಾಖಲೆಗಳನ್ನು ಪೇಪರ್ ಲೆಸ್ ಮಾಡುವುದು, ಡಿಜಿಟಲೀಕರಣ ಮಾಡುವುದು ಅವರ ಕನಸಾಗಿತ್ತು. ಜನಸಾಮಾನ್ಯರಿಗೆ ಕಂದಾಯ ಇಲಾಖೆ ದಾಖಲೆಗಳು ತ್ವರಿತರವಾಗಿ ದೊರೆಯುವಂತೆ ಮಾಡಲು ದಾಖಲೆಗಳ ಸರಳೀಕರಣ ಮಾಡಲಾಗಿದೆ. ಕಳೆದ ಬಾರಿ ಹೊಸಪೇಟೆಯಲ್ಲಿ 1.11 ಲಕ್ಷ ಫಲಾನುಭವಿಗಳಿಗೆ ಕಂದಾಯ ಇಲಾಖೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಈ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಗುರಿ ಹೊಂದಲಾಗಿದೆ. ಇದು ಒಳ್ಳೆಯ ಮೆರಗು ತರುವ ನೀರೀಕ್ಷೆ ಇದೆ. ಹಾವೇರಿ ಜಿಲ್ಲೆಯಲ್ಲಿ 20 ಸಾವಿರಕ್ಕೂ ಅಧಿಕ ಹಕ್ಕುಪತ್ರಗಳನ್ನು ಸಿದ್ಧಮಾಡುವ ಮೂಲಕ ಜಿಲ್ಲೆ ವಿಶೇಷ ಸಾಧನೆ ಮಾಡಿದೆ. ಈ ಸಾಧನೆಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕೆಲಸಮಾಡಿದ್ದಾರೆ ಎಂದರು.
ದೇಶದಲ್ಲೇ ಎರಡನೇ ಕಾರ್ಯಕ್ರಮ: ಸರ್ಕಾರಿ ಜಮೀನಿನಲ್ಲಿ ಮನೆಕಟ್ಟಿಕೊಂಡವರಿಗೆ ಇ-ಸ್ವತ್ತು ನೀಡಲಾಗುತ್ತಿದೆ. ಯಾರೂ ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ, ದೇಶದಲ್ಲೇ ಇದು ಎರಡನೇ ಕಾರ್ಯಕ್ರಮವಾಗಿದೆ. ಬೇರೆ ರಾಜ್ಯಗಳಿಗೆ ಇದು ಮಾದರಿಯಾಗಿದೆ. ಕಂದಾಯ ಇಲಾಖೆಯಲ್ಲಿ ಕೃಷ್ಣ ಬೈರೇಗೌಡರು ಅನೇಕ ಬದಲಾವಣೆಗಳನ್ನು ತಂದಿದ್ದಾರೆ. ಜನ ಸಾಮಾನ್ಯರಿಗೆ ಬದುಕುವ ಹಕ್ಕು ನೀಡುತ್ತಿದ್ದಾರೆ ಎಂದು ತಿಳಿಸಿದರು. ವ್ಯವಸ್ಥಿತವಾಗಿ ಸಮಾವೇಶ ನಡೆಸಲು ಅನೇಕ ಸಮಿತಿಗಳನ್ನು ರಚಿಸಲಾಗಿದೆ, ವೇದಿಕೆ ನಿರ್ಮಾಣ, ಫಲಾನುಭವಿಗಳಿಗೆ ವಾಹನ ವ್ಯವಸ್ಥೆ, ವಾಹನ ಸೌಕರ್ಯ, ಊಟ, ನೀರು, ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಯಾವುದೇ ಅಡೆ-ತಡೆಯಾಗದಂತೆ ವ್ಯವಸ್ಥಿತ ಕಾರ್ಯಕ್ರಮ ಆಯೋಜನೆಗೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದರು.
9 ಜಿಲ್ಲೆಗಳ 1.23 ಲಕ್ಷ ಫಲಾನುಭವಿಗಳು: ಈ ಸಮಾವೇಶದಲ್ಲಿ ಮಧ್ಯಕರ್ನಾಟಕದ ಹಾವೇರಿ-50 ಸಾವಿರ, ಚಿತ್ರದುರ್ಗ-5,500, ದಾವಣಗೆರೆ-20ಸಾವಿರ, ಶಿವಮೊಗ್ಗ-10 ಸಾವಿರ, ಚಿಕ್ಕಮಗಳೂರು-7ಸಾವಿರ, ಧಾರವಾಡ, ಗದಗ, ಹಾಗೂ ಕೊಪ್ಪಳ ಜಿಲ್ಲೆಯ ತಲಾ 10 ಸಾವಿರ ಮತ್ತು ಉತ್ತರ ಕನ್ನಡ ಜಿಲ್ಲೆಯ ಒಂದು ಸಾವಿರ ಫಲಾನುಭವಿಗಳು ಸೇರಿ 1.23 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಿದ್ಧತೆ ಪರೀಶೀಲನೆ: ಸಮಾವೇಶದ ವೇದಿಕೆ ನಿರ್ಮಾಣ ಸಿದ್ಧತೆ, ಊಟ ಕೌಂಟರ್ ನಿರ್ಮಾಣದ ಕುರಿತು ಪರೀಶೀಲನೆ ನಡೆಸಿದರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರ್ಪ ಲಮಾಣಿ ಮಾತನಾಡಿ, ಹಾಡಿ, ಹಟ್ಟಿ, ತಾಂಡಾಗಳಲ್ಲಿ ಹಲವಾರು ವರ್ಷಗಳಿಂದ ದಾಖಲೆ ರಹಿತವಾಗಿ ವಾಸಿಸುವವರಿಗೆ ಅತಂತ್ರ ಬದುಕಿನಿಂದ ಮುಕ್ತಿ ನೀಡಿ, ನೆಮ್ಮದಿ ಬದುಕು ನಡೆಸಲು 1 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ದಾಖಲೆ ರಹಿತರಿಗೆ ಕಂದಾಯ ಗ್ರಾಮ ಮಾಡುವುದು ಬಹಳ ದಿನಗಳ ಹೋರಾಟವಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಹಾವೇರಿ ಜಿಲ್ಲೆಯ ಕಂದಾಯ ಗ್ರಾಮ, ಇ-ಪೋತಿ, ದರಖಾಸ್ತ್ ಪೋಡಿ ಮತ್ತು ಪೋಡಿ ಮುಕ್ತ ಗ್ರಾಮ ಅಭಿಯಾನದ 30 ಸಾವಿರ , ಸುತ್ತಮುತ್ತಲಿನ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಧಾರವಾಡ, ಕೊಪ್ಪಳ ದಿಂದ ಸುಮಾರು 70 ಸಾವಿರ ಫಲಾನುಭವಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು. 2,550 ವಾಹನಗಳು: ಫಲಾನುಭವಿಗಳನ್ನು ಕರೆತರಲು ಸರ್ಕಾರಿ ಸೌಮ್ಯದ ಎನ್ ಡಬ್ಲ್ಯೂಕೆಆರ್‌ಟಿಸಿ, ಕೆಕೆಆರ್ ಟಿಸಿ ಮತ್ತು ಕೆ ಎಸ್ ಆರ್ ಟಿ ಸಿಯ 2,140 ಬಸ್ಸುಗಳು, 195 ಖಾಸಗಿ ಬಸ್‌ಗಳು ಹಾಗೂ 215 ಶಾಲಾ ಕಾಲೇಜು ಬಸ್ಸುಗಳು ಸೇರಿ 2,550 ವಾಹನಗಳನ್ನು ಬಳಸಲಾಗುತ್ತಿದೆ. ಪ್ರತಿ ಬಸ್ಸಿಗೆ ಎರಡು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದರು.
ವಿವಿಧ ಸಮಿತಿ: ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಾಹಕ ಸಮಿತಿ. ಹಣಕಾಸು ಸಮಿತಿ, ಕಾನೂನು ಸುವ್ಯವಸ್ಥೆ ಮತ್ತು ಭದ್ರತಾ ಸಮಿತಿ ಮುಖ್ಯ ವೇದಿಕೆ ನಿರ್ಮಾಣ ಸಮಿತಿ, ಆಹಾರ ಮತ್ತು ಕುಡಿಯುವ ನೀರಿನ ಸಮಿತಿ, ಸಾರಿಗೆ ಮತ್ತು ಪಾಕಿಂರ್ಗ್ ವ್ಯವಸ್ಥೆ ಸಮಿತಿ, ಹೆಲಿಪ್ಯಾಡ್ ನಿರ್ಮಾಣ ಸಮಿತಿ, ಕಾರ್ಯಕ್ರಮ ನಿರ್ವಹಣಾ ಮತ್ತು ಮುಖ್ಯ ವೇದಿಕ ಶಿಷ್ಟಾಚಾರ ಸಮಿತಿ, ಫಲಾನುಭವಿಗಳ ಆಸನ ವ್ಯವಸ್ಥೆ ಸಮಿತಿ, ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿ, ವಸತಿ ಸಮಿತಿ ಆರೋಗ್ಯ ಸಮಿತಿ ಒಳಗೊಂಡಂತೆ 15 ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ.
ಮೂರು ಸಾವಿರ ಪೊಲೀಸ್: ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಭದ್ರತೆಯ ಸಲುವಾಗಿ ಸುಮಾರು 300 ವಿವಿಧ ಹಂತದ ಅಧಿಕಾರಿಗಳನ್ನು ಹಾಗೂ ಹೋಂ ಗಾರ್ಡ್ ಒಳಗೊಂಡಂತೆ 3,000 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಫಲಾನುಭವಿಗಳಿಗೆ 200 ಊಟದ ಕೌಂಟರ್, ಸುಮಾರು 200 ತಾತ್ಕಾಲಿಕ ಶೌಚಾಲಯಗಳು,ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ. ಈಗಾಗಲೇ ಎಲ್ಲಾ ಕೆಲಸಗಳು ವೇಗವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಅಧ್ಯಕ್ಷ ಸೈಯದ್ ಅಜೀಮಪೀರ್ ಎಸ್ ಖಾದ್ರಿ, ಶಾಸಕರಾದ ಯಾಸೀರ ಅಹ್ಮದಖಾನ ಪಠಾಣ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ.ಮೈದೂರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಸಂಜೀವಕುಮರ ನೀರಲಗಿ, ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 