ವಿದ್ಯಾರ್ಥಿಗಳಲ್ಲಿ ಐತಿಹಾಸಿಕತೆಯನ್ನು ಬೆಳೆಸುವತ್ತ ಪ್ರಾಧ್ಯಾಪಕರು ಪ್ರಯತ್ನಿಸಲಿ: ಪ್ರೊ. ಜೆ. ಮಂಜಣ್ಣ

ವಿದ್ಯಾರ್ಥಿಗಳಲ್ಲಿ ಐತಿಹಾಸಿಕತೆಯನ್ನು ಬೆಳೆಸುವತ್ತ ಪ್ರಾಧ್ಯಾಪಕರು ಪ್ರಯತ್ನಿಸಲಿ: ಪ್ರೊ. ಜೆ. ಮಂಜಣ್ಣ  Professors should try to instill historical awareness in students: Prof. J. Manjanna

ವಿದ್ಯಾರ್ಥಿಗಳಲ್ಲಿ ಐತಿಹಾಸಿಕತೆಯನ್ನು ಬೆಳೆಸುವತ್ತ ಪ್ರಾಧ್ಯಾಪಕರು ಪ್ರಯತ್ನಿಸಲಿ: ಪ್ರೊ. ಜೆ. ಮಂಜಣ್ಣ  

ನೇಸರಗಿ 15: ವಿದ್ಯಾರ್ಥಿಗಳಲ್ಲಿ ಐತಿಹಾಸಿಕತೆಯನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಧ್ಯಾಪಕರು ಪ್ರಯತ್ನಿಸಬೇಕೆಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಐ.ಕ್ಯೂ.ಎ.ಸಿ ನಿರ್ದೇಶಕ ಪ್ರೊ. ಜೆ. ಮಂಜಣ್ಣ ಹೇಳಿದರು. 

ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನೇಸರಗಿ ಇವರ ಸಂಯುಕ್ತ ಆಶ್ರಯದಲ್ಲಿ 2024-25 ನೇ ಸಾಲಿನ ವಿಶೇಷ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಕಿತ್ತೂರು ಸಂಗ್ರಾಮ ಮತ್ತು ತಂತ್ರಜ್ಞಾನ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಆ ದಿನಗಳಲ್ಲಿ ನಮ್ಮ ಸೈನಿಕರು ಬ್ರಿಟಿಷ್‌ರ ವಿರುದ್ಧ ಹೋರಾಡಲು ಬಳಸಿದ ಶಸ್ತ್ರಾಸ್ತ್ರಗಳ ಕೌಶಲ್ಯವನ್ನು ಕುರಿತು ಹಾಗೂ ವಿವಿಧ ಆಯುಧಗಳ ನಿರ್ಮಾಣಕ್ಕೆ ಬಳಸಲ್ಪಟ್ಟಂತಹ ಖನಿಜ ಸಂಪನ್ಮೂಲಗಳ ಕುರಿತು ಮಾಹಿತಿಯನ್ನು ನೀಡಿದರು. ಜೊತೆಗೆ ಅಂದಿನ ಕಿತ್ತೂರು ಭಾಗದ ಜನರ ಜಾಣತನ, ಪ್ರೌಢಿಮೆ ಮತ್ತು ಬದುಕಿನ ರೀತಿ ರಿವಾಜುಗಳ ಸಂಸ್ಕೃತಿ ಪರಂಪರೆಯ ಇತಿಹಾಸವನ್ನು ಪರಿಚಯಿಸಿ ಯುವ ಜನಾಂಗಕ್ಕೆ ಸ್ವಾತಂತ್ರ್ಯ ಹೋರಾಟದ ತ್ಯಾಗ ಬಲಿದಾನಗಳ ಮಹತ್ವ ಅರಿಯಬೇಕೆಂದರು. 

ಬೆಳಗಾವಿ ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯ ಹಾಗೂ ಚಾರಿತ್ರಿಕ ಕಾದಂಬರಿಕಾರ ಯ.ರು. ಪಾಟೀಲ ಮಾತನಾಡಿ, ಸ್ಥಳೀಯ ಸ್ವಾತಂತ್ರ್ಯ ಹೋರಾಟದ ಚಿತ್ರಣವನ್ನು ಪರಿಚಯಿಸುತ್ತಾ ನೇಸರಗಿಯ ಸುತ್ತಮುತ್ತಲು ನಡೆದ ಯುದ್ಧಗಳು ಮತ್ತು ಪರಿಣಾಮಗಳು ಹಾಗೂ ಕಲೆ ಮತ್ತು ವಾಸ್ತುಶಿಲ್ಪಗಳ ಬಗ್ಗೆ ಮಾಹಿತಿಯನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಥಳೀಯ ಐತಿಹಾಸಿಕ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ಇವತ್ತು ರಾಣಿ ಚನ್ನಮ್ಮ ಅಧ್ಯಯನ ಪೀಠ ಹೊಸ ಹೊಸ ಪ್ರಯೋಗಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದರು. 

ಬೆಳಗಾವಿ ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಲಹಾ ಸಮಿತಿ, ವಿಶ್ವವಿದ್ಯಾಲಯ ಪರಿಷತ್ ಸದಸ್ಯೆ ಡಾ. ನಿರ್ಮಲಾ ಜಿ. ಬಟ್ಟಲ ಮಾತನಾಡಿ, ಚೆನ್ನಮ್ಮಾಜಿಯು ಯುದ್ಧದ ಸಂದರ್ಭಗಳಲ್ಲಿ ಬಳಸಿರುವ ಆಯುಧಗಳು ವಿಶೇಷ ತಂತ್ರಜ್ಞಾನಪೂರಿತ ಪ್ರಯೋಗಗಳಾಗಿದ್ದವು ಎಂದರು. 

ಅಧ್ಯಕ್ಷತೆ ವಹಿಸಿದ ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕಿ ಪ್ರೊ. ನಾಗರತ್ನಾ ಪರಾಂಡೆ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಇತಿಹಾಸವನ್ನು ಅರಿಯುವುದು ತುಂಬಾ ಅವಶ್ಯವಾಗಿದೆ. ಅದರಲ್ಲೂ ​‍್ರ​‍್ರಥಮವಾಗಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ ಕಿತ್ತೂರು ಸ್ವಾತಂತ್ರ್ಯ ಸಂಗ್ರಾಮ ವಿಶ್ವದ ಇತಿಹಾಸದ ಪುಟದಲ್ಲಿ ಐತಿಹಾಸಿಕ ದಾಖಲೆಯಾಗಿದೆ. ಇಂದಿನ ಯುವ ಪೀಳಿಗೆ ಇತಿಹಾಸವನ್ನು ರಚಿಸಬೇಕಾದರೆ ಇತಿಹಾಸವನ್ನು ಓದುವ ಅಭಿರುಚಿ ಮತ್ತು ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದರು. 

ಸಮಾರಂಭದಲ್ಲಿ ಸಾಹಿತಿ ಸಿ.ವಾಯ್‌.ಮೆಣಶಿನಕಾಯಿ, ಶೋಭಾ ಸಿದ್ನಾಳ, ಎನ್‌. ಐ. ಸತ್ತಿಗೇರಿ, ಸುರೇಖಾ ಶೆಟ್ಟಿ, ವಿನಾಯಕ ಹೊನ್ನಪ್ಪನವರ, ಹರೀಶ್ ಎಚ್‌. ಆರ್, ಅಶೋಕ ಗುಡದವರ, ಪ್ರತೀಕ ಕಾಮಾನಿ, ಅಶೋಕ ಬಾಗಿ, ಮನೋಜ ಗಡದವರ ಮತ್ತಿತರರು ಇದ್ದರು. 

ಪ್ರಾಂಶುಪಾಲ ಡಾ. ಎಫ್‌. ಡಿ. ಗಡ್ಡಿಗೌಡರ  ಸ್ವಾಗತಿಸಿದರು. ಸುಖದೇವಾನಂದ ಚವತ್ರಿಮಠ ನಿರೂಪಿಸಿದರು. 

ಡಾ. ಮೀನಾಕ್ಷಿ ಮಡಿವಾಳರ  ವಂದಿಸಿದರು.