ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ; ಪೌಷ್ಟಿಕಯುಕ್ತ ಆಹಾರ ಒದಗಿಸುವ ವಿನೂತನ ಕಾರ್ಯಕ್ರಮ ಆರಂಭ

Prime Minister's Safe Motherhood Campaign; Innovative program to provide nutritious food started

ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ; ಪೌಷ್ಟಿಕಯುಕ್ತ ಆಹಾರ ಒದಗಿಸುವ ವಿನೂತನ ಕಾರ್ಯಕ್ರಮ ಆರಂಭ

ಬಳ್ಳಾರಿ 10: ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣಿಯರ ತಪಾಸಣೆಯೊಂದಿಗೆ ಪೌಷ್ಟಿಕಯುಕ್ತ ಆಹಾರ ಒದಗಿಸುವ ವಿನೂತನ ಕಾರ್ಯಕ್ರಮವನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಅವರು ಹೇಳಿದ್ದಾರೆ. 

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲೆಯಾದ್ಯಂತ ಪ್ರತಿ ತಿಂಗಳು 09 ಮತ್ತು 24ನೇ ತಾರೀಖುನಂದು ಗಂಡಾಂತರ ಗರ್ಭಿಣಿಯರ ಆರೋಗ್ಯ ತಪಾಸಣೆಯನ್ನು ಕೈಗೊಳ್ಳುವ ಕಾರ್ಯ ನಿರಂತರವಾಗಿ ಜರುಗುತಿದ್ದು, ಇದೇ ಮೊದಲ ಬಾರಿಗೆ ಗ್ರಾಮೀಣ ಮತ್ತು ನಗರ ಭಾಗದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆಗೆ ಆಗಮಿಸಿದ ಗರ್ಭಿಣಿಯರಿಗೆ ಪ್ರಾಯೋಗಿಕವಾಗಿ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಲಹೆಯಂತೆ ಪೌಷ್ಟಿಕಯುಕ್ತ ಆಹಾರ ಒಳಗೊಂಡ ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ಜಿಲ್ಲೆಯಲ್ಲಿ ಗರ್ಭಿಣಿ ತಾಯಂದಿರು ತಪಾಸಣೆ ಆಗಮಿಸಿ ಸಂತಸದಿಂದ ಮನೆಗೆ ಹಿಂತಿರುಗುವ ಕಾರ್ಯವನ್ನು ಮಾಡಲಾಗಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ. 

ಸಾಮಾನ್ಯವಾಗಿ 12 ವಾರದೊಳಗೆ ಗರ್ಭಿಣಿ ಎಂದು ತಿಳಿದ ದಿನವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸುವ ಮೂಲಕ ತಾಯಿ ಕಾರ್ಡ್‌ನಲ್ಲಿ ತಮ್ಮ ಎಲ್ಲಾ ಮಾಹಿತಿಗಳನ್ನು ಒದಗಿಸಿ ಇಲಾಖೆಯಡಿ ವೈದ್ಯರ ಸೂಚನೆಯಂತೆ ಪ್ರತಿ ತಿಂಗಳು ತೂಕ, ರಕ್ತದ ಪ್ರಮಾಣ ಹಾಗೂ ಇತರೆ ಅಗತ್ಯ ಪರೀಕ್ಷೆಗಳನ್ನು ಮಾಡಿಸುವುದರಿಂದ ಹೆರಿಗೆ ಸಮಯದಲ್ಲಿ ಅನಗತ್ಯ ಒತ್ತಡ ಉಂಟಾಗದಂತೆ ಮಾಡಬಹುದಾಗಿದೆ ಎಂದರು. 

ಪ್ರಸ್ತುತ ಪ್ರತಿ ತಿಂಗಳು 09 ನೇಯ ತಾರೀಖಿನಂದು ಎಲ್ಲಾ ಗರ್ಭಿಣಿ ಸ್ತ್ರೀಯರಿಗೆ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತಿದ್ದು, ಮುಖ್ಯವಾಗಿ ಗಂಡಾಂತರ ಗರ್ಭಿಣಿಯರು ಎಂದು ಗುರ್ತಿಸಿದ ನಂತರ ಅಂದರೆ ಚೊಚ್ಚುಲು ಗರ್ಭಿಣಿ, ಎತ್ತರ ಕಡಿಮೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಕಬ್ಬಿಣಾಂಶ ಕೊರತೆ, ಅವಳಿಜವಳಿ ಗರ್ಭಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವುದು, ಮೊದಲ ಹೆರಿಗೆ ಸಿಸೇರಿಯನ್, ಮುಂತಾದ ಕಾರಣಗಳಿದ್ದರೆ ನಿರ್ಲಕ್ಷಿಸಿಸಬಾರದು. ಅಲ್ಲದೆ ತೀವ್ರ ರಕ್ತಹೀನತೆಯಂತಹ ಸನ್ನಿವೇಶದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆಯಾದ (ಐಎಫ್‌ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವಿಕೆ) ಸುಧಾರಣೆಯಾಗದಿದ್ದಲ್ಲಿ ತಜ್ಞರ ಬಳಿ ತಪ್ಪದೇ ಕಳುಹಿಸಬೇಕು. ಅಗತ್ಯವಿದ್ದಲ್ಲಿ ಸ್ಕ್ಯಾನ್ ಮಾಡಿಸುವುದು. ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಬೇಕು. 

ಗಾಳಿ ಸುದ್ದಿ ಮೂಲಕ ಕಬ್ಬಿಣಾಂಶ ಮಾತ್ರೆ ನುಂಗಿದರೆ, ಭ್ರೂಣ ದಪ್ಪವಾಗುತ್ತದೆ, ಕಪ್ಪು ಬಣ್ಣದ ಮಗು ಹುಟ್ಟುತ್ತದೆ ಎಂಬ ತಪ್ಪು ನಂಬಿಕೆಗಳನ್ನು ಸಮುದಾಯದಲ್ಲಿ ನಂಬದೇ ವೈದ್ಯರ ಸಲಹೆಯಂತೆ ಉಚಿತವಾಗಿ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಒಂದರಂತೆ ಕನಿಷ್ಟ 180, ಒಂದು ವೇಳೆ ರಕ್ತಹೀನತೆಯ ಪ್ರಮಾಣ ತೀವ್ರವಾಗಿದ್ದಲ್ಲಿ ದಿನಕ್ಕೆ 2 ರಂತೆ 360 ಮಾತ್ರೆಗಳನ್ನು 6 ತಿಂಗಳ ಅವಧಿಯಲ್ಲಿ ಸೇವಿಸಲು ಹಾಗು ಇದರ ಜೊತೆಗೆ ದೈಹಿಕವಾಗಿ ಸದೃಡವಾಗಿರಲು ಕ್ಯಾಲ್ಸಿಯಮ್ ಮಾತ್ರೆಗಳನ್ನು ಸಹ ನುಂಗಬೇಕು ಎಂದು ಅವರು ತಿಳಿಸಿದ್ದಾರೆ.