ಕಾರ್ಖಾನೆ ವಿರೋಧಿ 100ನೇ ಶತದಿನದ ಹೋರಾಟಕ್ಕೆ ಭರದ ಸಿದ್ಧತೆ: ಅಲ್ಲಮಪ್ರಭು

ಕಾರ್ಖಾನೆ ವಿರೋಧಿ 100ನೇ ಶತದಿನದ ಹೋರಾಟಕ್ಕೆ ಭರದ ಸಿದ್ಧತೆ: ಅಲ್ಲಮಪ್ರಭು  Preparations underway for 100th anniversary of anti-factory struggle: Allama Prabhu

ಕೊಪ್ಪಳ 02: ಬರುವ ಶನಿವಾರ 07.02.2026ರಂದು ಬಲ್ಡೋಟ ಮುಂತಾದ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಡೆದಿರುವ ಹೋರಾಟಕ್ಕೆ 100 ದಿನ ತಲುಪುಲಿದೆ. ಅಂದು ಧರಣಿ ಸ್ಥಳದಲ್ಲಿ ನಗರದ ಒಂದೂವರೆ ಲಕ್ಷ ಜನರ ಹಾಗೂ 20 ಬಾಧಿತ ಹಳ್ಳಿಯ 50 ಸಾವಿರ ಜನರ ಆರೋಗ್ಯ, ಜೀವ ರಕ್ಷಣೆಗಾಗಿ ಆಗ್ರಹಿಸಿ ಶ್ರೀ ಗವಿಸಿದ್ದೇಶ್ವರ ಮಠದಿಂದ ಬಾಧಿತ ಜನರ ಪರಿಸರ ಉಳಿಸಿ, ಜೀವ ಉಳಿಸಿ ಮೆರವಣಿಗೆ ನಡೆಸಲಾಗುತ್ತದೆ. ಮುಂಜಾನೆ 8 ಗಂಟೆಗೆ ಮಠದ ಪ್ರಸಾದ ನಿಲಯದಲ್ಲಿ ಉಪಾಹಾರ ವ್ಯವಸ್ಥೆ ಇರುತ್ತದೆ. 10 ಗಂಟೆಗೆ ಮೆರವಣಿಗೆ ಆರಂಭಗೊಳ್ಳಲಿದ್ದು, ಸಾಣೇಹಳ್ಳಿ ಶ್ರೀ ಶಿವಾಚಾರ್ಯ ಸ್ವಾಮೀಜಿ, ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಸ್ವಾಮೀಜಿ, ಸಾಹಿತಿ ಧಾರವಾಡದ ರಂಜಾನ್ ದರ್ಗಾ, ರಂಗ ನಿರ್ದೇಶಕ ಸೂರ್ಯಕಾಂತ ಗುಣಕಿಮಠ ಚಾಲನೆ ಕೊಡುವರು. ಮೆರವಣಿಗೆ ಗವಿಮಠ ರಸ್ತೆ, 

ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತದ ಮೂಲಕ ನಗರಸಭೆ ಮುಂದಿನ ಧರಣಿ ಸ್ಥಳಕ್ಕೆ ಬಂದು ಸಮಾವೇಶಗೊಳ್ಳುತ್ತದೆ. ಈ ಸಮಾವೇಶದಲ್ಲಿ ಕೊಪ್ಪಳ ಜಿಲ್ಲೆಯ ಹಲವಾರು ಮಠದ ಸ್ವಾಮಿಗಳು ಪಾಲ್ಗೊಂಡು ಮಾತನಾಡುವರು. ಅಲ್ಲದೇ ಸಾಣೇಹಳ್ಳಿ ಶ್ರೀಗಳು, ಧಾರವಾಡದ ಸಾಹಿತಿ ಅಸ್ಲಂ ದರ್ಗಾ ಬಾಧಿತ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಪರಿಸ್ಥಿತಿ ಕುರಿತು ಸಂವಾದ ನಡೆಸುವರು ಎಂದು  ಬಾಧಿತ ಹಳ್ಳಿಯ ಮತ್ತು ನಗರದ ನಿವಾಸಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ವಿನಂತಿಸಿಕೊಂಡರು. 

ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಅಂದೇ ಜಂಟಿ ಕ್ರಿಯಾ ವೇದಿಕೆ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಧರಣಿ ಸ್ಥಳದಲ್ಲಿ ರಕ್ತದಾನ ಶಿಬಿರ ನಡೆಯುತ್ತಿದೆ. ಹೆಚ್ಚು ಹೆಚ್ಚು ಯುವಕರು, ವಿದ್ಯಾರ್ಥಿಗಳು ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ, ನ್ಯಾಯಾಲಯಗಳಿಗೆ ರಕ್ತದಲ್ಲಿ ಕಾರ್ಖಾನೆ ವಿರೋಧಿ ಪತ್ರ ಬರೆಯಲಾಗುವುದು ಎಂದರು. 

ಧರಣಿಯಲ್ಲಿ ಸಾಹಿತಿ ಎ.ಎಂ. ಮದರಿ, ಕವಯಿತ್ರಿ ಪುಷ್ಪಲತಾ ಏಳುಭಾವಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಎಸ್‌.ಬಿ. ರಾಜೂರು, ಮಹಾಂತೇಶ ಮಲ್ಲನಗೌಡರ, ಜಿ.ಬಿ. ಪಾಟೀಲ್, ಬಿ.ಜಿ. ಕರಿಗಾರ, ಸುಭಾನಸಾಬ್ ನೀರಲಗಿ, ಗಾಯಕಿ ಈರಮ್ಮ ಉಂಡಿ, ರಂಗ ನಿರ್ದೇಶಕ ಶರಣು ಶೆಟ್ಟರ್, ಗಂಗಮ್ಮ ಮುಂಡರಗಿ, ಸಂಜೀವಮ್ಮ ಕುಕನೂರು, ಶಂಭುಲಿಂಗಪ್ಪ ಹರಗೇರಿ, ಜಿ.ಎಸ್‌. ಕಡೇಮನಿ, ಎಸ್ ಮಹಾದೇವಪ್ಪ ಮಾವಿನಮಾಡು, ಮೂಕಪ್ಪ ಮೇಸ್ತ್ರಿ ಬಸಾಪುರ, ರಾಜಶೇಖರ ಏಳುಬಾವಿ, ಪಂಪಣ್ಣ ಚಿಂತಪಲ್ಲಿ, ಶಿವಸಂಗಪ್ಪ ವಣಗೇರಿ, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು, ಮಹಾಂತೇಶ ಹಟ್ಟಿ, ಮಹಾಂತೇಶ ಕೊತಬಾಳ ಮುಂತಾದವರು 95ನೇ ದಿನದ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.