ಜನವರಿ 5 ರಂದು ಧಾರವಾಡದಲ್ಲಿ ಪಂಚ ಗ್ಯಾರಂಟಿ ಉತ್ಸವ ಆಯೋಜನೆ

ಜನವರಿ 5 ರಂದು ಧಾರವಾಡದಲ್ಲಿ ಪಂಚ ಗ್ಯಾರಂಟಿ ಉತ್ಸವ ಆಯೋಜನೆ Pancha Guarantee Festival to be organized in Dharwad on January 5th

ಧಾರವಾಡ  30: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಸಂಕೇತಿಸುವ ಪಂಚ ಗ್ಯಾರಂಟಿ ಉತ್ಸವ ಕಾರ್ಯಕ್ರಮವನ್ನು ಧಾರವಾಡ ಜಿಲ್ಲೆಯಲ್ಲಿ ಜನವರಿ 5, 2026 ರಂದು ಅತ್ಯಂತ ಅದ್ಧೂರಿಯಾಗಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಬೆಳಗಾವಿ ವಿಭಾಗೀಯ ಉಪಾಧ್ಯಕ್ಷರಾದ ಎಸ್‌.ಆರ್‌. ಪಾಟೀಲ್ ಅವರು ತಿಳಿಸಿದರು.  ಅವರು ಇಂದು (ಡಿ.30) ಮಧ್ಯಾಹ್ನ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. 

ಗ್ಯಾರಂಟಿ ಉತ್ಸವದ ಯಶಸ್ವಿಗಾಗಿ ಜಿಲ್ಲಾಮಟ್ಟದ ಅಧಿಕಾರಿಗಳಿರುವ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿಯ ಪ್ರತಿಯೊಬ್ಬ ಸದಸ್ಯರೂ ತಮಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಈ ಉತ್ಸವವು ಸರ್ಕಾರದ ಸೌಲಭ್ಯಗಳು ಜನರಿಗೆ ತಲುಪಿರುವುದರ ಪ್ರತಿಬಿಂಬವಾಗಬೇಕು ಎಂದು ಅವರು ಹೇಳಿದರು. 

ಜಿಲ್ಲೆಯಾದ್ಯಂತ ಇರುವ ಎಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಉತ್ಸವದಲ್ಲಿ ಭಾಗವಹಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮಾಡಬೇಕು ಎಂದು ಹೇಳಿದರು.  

 ಪಂಚ ಗ್ಯಾರಂಟಿಗಳಿಂದ ಜನರ ಜೀವನದಲ್ಲಿ ಆದ ಬದಲಾವಣೆಗಳನ್ನು ಜನರಿಗೆ ಮನವರಿಕೆ ಮಾಡಲು, ಪ್ರತಿ ಯೋಜನೆಗೆ ಒಂದರಂತೆ ಐದು ವಿಶೇಷ ಕಿರುಚಿತ್ರಗಳನ್ನು ಸಿದ್ಧಪಡಿಸಬೇಕು. ಅಲ್ಲದೆ, ಫಲಾನುಭವಿಗಳ ನೈಜ ಯಶೋಗಾಥೆಗಳನ್ನು ಸಾಕ್ಷ್ಯಚಿತ್ರಗಳ ಮೂಲಕ ಪ್ರದರ್ಶಿಸಬೇಕು ಎಂದು ಅಧಿಕಾರಿಗಳಿಗೆ ಅವರು ತಿಳಿಸಿದರು.  

 ಯೋಜನೆಗಳ ಅನುಷ್ಠಾನದಲ್ಲಿ ಫಲಾನುಭವಿಗಳಿಗೆ ಅಥವಾ ಅಧಿಕಾರಿಗಳಿಗೆ ಯಾವುದೇ ತಾಂತ್ರಿಕ ಅಥವಾ ಆಡಳಿತಾತ್ಮಕ ತೊಡಕುಗಳಿದ್ದರೆ, ಅವುಗಳನ್ನು ತಕ್ಷಣವೇ ಗಮನಕ್ಕೆ ತರಬೇಕು. ಅಂತಹ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲಾಗುವುದು ಎಂದು ಅವರು ಭರವಸೆ ನೀಡಿದರು. 

ವೇದಿಕೆಯಲ್ಲಿ ಧಾರವಾಡ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶ್ಯಾನಪ್ಪಗೌಡ. ಆರ್‌. ಪಾಟೀಲ್,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮಹಾನಗರ ಪಾಲಿಕೆ ವ್ಯಾಪ್ತಿ ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ ಅವರು ಉಪಸ್ಥಿತರಿದ್ದರು.  ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಕಮಿಟಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.