ಪೇಶಾವರ, ಏ 24 ವಿಶ್ವಾದ್ಯಂತ ಪೋಲಿಯೋ ರೋಗದ ನಿವಾರಣೆಗಾಗಿ ಲಸಿಕೆ ಕಾರ್ಯಕ್ರಮವನ್ನು ಅವ್ಯಾಹತವಾಗಿ ನಡೆಸುತ್ತಿರುವ ಬೆನ್ನಲ್ಲೇ, ಪಾಕಿಸ್ತಾನದ ಖೈಬರ್ ಪಾಖ್ತುನ್ಕ್ವ ಪ್ರದೇಶದಲ್ಲಿ ಜನರು ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ನಿರಾಕರಿಸಿದ ಘಟನೆ ನಡೆದಿದೆ.
ಪೋಲಿಯೋ ಲಸಿಕೆ ಸೇವನೆಯಿಂದ ಮಕ್ಕಳು ಅಸ್ವಸ್ಥಗೊಂಡು, ಕೆಲವರು ಮೃತಪಟ್ಟಿದ್ದಾರೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಸಾವಿರಾರು ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ನಿರಾಕರಿಸಿದ್ದಾರೆ. ಇದರಿಂದ ಲಸಿಕೆ ಅಭಿಯಾನವನ್ನು ಅರ್ಧದಲ್ಲೇ ತಡೆಗಟ್ಟಬೇಕಾಯಿತು.
ಲಸಿಕೆ ಸೇವಿಸಿದ ಮಕ್ಕಳು ಅಸ್ವಸ್ಥಗೊಂಡಿದ್ದರಿಂದ ಆಕ್ರೋಶಗೊಂಡ ಜನರು ಕಳೆದ ಸೋಮವಾರ ಪ್ರಥಮ ಚಿಕಿತ್ಸಾ ಪೆಟ್ಟಿಗೆಗೆ ಹಾನಿ ಮಾಡಿದ್ದು, ಕೆಲವರು ಅದನ್ನು ಬೆಂಕಿ ಹಾಕಿ ಸುಟ್ಟಿದ್ದರು. ಈ ಸಂಬಂಧ ಪೊಲೀಸರು 13 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ತವ್ಯದ ಮೇಲಿದ್ದ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಇದರ ಬೆನ್ನಲ್ಲೇ ಮಂಗಳವಾರ ಸಾವಿರಾರು ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಗೆ ಲಸಿಕೆ ಅಭಿಯಾನವನ್ನು ಸ್ಥಗಿತಗೊಳಿಸಬೇಕಾಯಿತು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಪೇಶಾವರದ ಬಾದ್ಬೇರ್ ಪ್ರದೇಶದ ಮಕ್ಕಳು ವಾಂತಿ ಬೇಧಿ ಹಾಗೂ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದ ಪೋಷಕರು ಗಾಬರಿಯಾಗಿದ್ದು, ಲಸಿಕೆ ಸೇವಿಸಿ ಮಕ್ಕಳು ಮೃತಪಟ್ಟಿದ್ದಾರೆ ಎಂಬ ವದಂತಿ ಹಬ್ಬಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಸ್ಪಷ್ಚಪಡಿಸಿದ್ದಾರೆ.