ಪಿಎಸ್ಸೈ ಎಲ್.ಮಧು. ಮಹಾಲಿಂಗಪುರದ ಬಿವಿವಿ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿನೆ
ಮಹಾಲಿಂಗಪುರ 12: ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಕ್ರಿಯಾಶೀಲತೆ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ಪಿಎಸ್ಸೈ ಎಲ್.ಮಧು ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಬಿವಿವಿ ಶಾಲೆಯಲ್ಲಿ ಶನಿವಾರ ನಡೆದ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ದಾನಕ್ಕಿಂತ ಶ್ರೇಷ್ಠದಾನ ವಿದ್ಯಾದಾನವಾಗಿದೆ. ವಿದ್ಯಾ ದಾಸೋಹದತ್ತ ಸಂಸ್ಥೆಯ ನಡೆ ಪ್ರಶಂಸನೀಯ. ಕಲಿಕೆಯಲ್ಲಿ ಉತ್ಸಾಹ, ಗ್ರಹಿಕಾ ಸಾಮರ್ಥ್ಯ ಹೆಚ್ಚಿಸಿಕೊಂಡು ವಿದ್ಯಾರ್ಥಿಗಳು ಸಾಧನೆಯ ಪರಾಕಾಷ್ಠೆ ತಲುಪುವ ಮೂಲಕ ಒಳ್ಳೆಯ ನೌಕರಿ ಪಡೆದು, ಪಾಲಕರಿಗೆ ಮತ್ತು ದೇಶಕ್ಕೆ ಆಸ್ತಿಯಾಗಬೇಕೆಂದರು.
ಪತ್ರಕರ್ತ ಜಯರಾಮ ಶೆಟ್ಟಿ, ಲಕ್ಷ್ಮಣ ಕಿಶೋರ ಮಾತನಾಡಿ ಸರ್ಕಾರದ ನೆರವಿಲ್ಲದಿದ್ದರೂ ಮಕ್ಕಳಿಗೆ, ಶಿಕ್ಷಕರಿಗೆ ಕಟ್ಟಡ ಸೇರಿದಂತೆ ಉನ್ನತ ಸೌಕರ್ಯ ಕಲ್ಪಿಸುವ ಮೂಲಕ ಧುರೀಣ ಶೇಖರ ಅಂಗಡಿ ಮಾದರಿಯಾಗಿದ್ದಾರೆ. ಶಿಕ್ಷಣ ಶಕ್ತಿಯಾಗಿದ್ದು, ಅದನ್ನು ಎಲ್ಲ ಸ್ತರದ ಮಕ್ಕಳಿಗೆ ಮುಟ್ಟಿಸುವತ್ತ ಶ್ರಮಿಸುತ್ತಿರುವುದು ಶ್ಲಾಘನೀಯವೆಂದರು.
ನಾರಾಯಣಗೌಡ ಉತ್ತಂಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಒಳ್ಳೆಯ ಸಂಸ್ಕಾರ ನೀಡಿದಲ್ಲಿ ಭವಿತವ್ಯದಲ್ಲಿ ಉತ್ತಮ ಹೊಣೆಗಾರಿಕೆಯ ನಾಗರಿಕರನ್ನು ನಿರ್ಮಿಸುವಂತಾಗುತ್ತದೆ. ಪಾಠದೊಡನೆ ಆಟ, ಬದುಕಿನ ನೈಜ ಪಾಠ ನೀಡುವತ್ತ ಸಂಸ್ಥೆ ಮುಂದಾಗಬೇಕು. ಪಾಲಕರು ಲಿಂಗ ತಾರತಮ್ಯ ಮಾಡದೇ ಹೆಣ್ಣು ಮಗುವೆಂದು ಕೀಳಾಗಿ ನೋಡದೇ ಸ್ತ್ರೀ ಶಿಕ್ಷಣಕ್ಕೂ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಸಮಾಜದ ಕಣ್ಣಾಗಿರುವ ಹೆಣ್ಣು ಕಲಿತರೆ ಸ್ವಸ್ಥ ಸಮಾಜದ ನಿರ್ಮಾಣವಾಗುತ್ತದೆಂದರು.
ಈ ಸಂದರ್ಭದಲ್ಲಿ ಬಿವಿವಿ ಸಂಸ್ಥೆಯ ಅಧ್ಯಕ್ಷರಾದ ಶೇಖರ ಅಂಗಡಿ, ಕಾನಿಪ ಸಂಘದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಜಿಲ್ಲಾ ಕಾನಿಪ ಕಾರ್ಯಕಾರಣಿ ಸದಸ್ಯ ಎಸ್.ಎಸ್. ಈಶ್ವರ್ಪಗೋಳ, ಕಾನಿಪ ಕಾರ್ಯದರ್ಶಿ ಹನಮಂತ ನಾವಿ, ಪತ್ರಕರ್ತ ಮಹೇಶ ಆರಿ, ಅತಿಥಿಗಳಾದ ರಂಗಣ್ಣಗೌಡ ಪಾಟೀಲ್, ಅರುಣಾ ಅಂಗಡಿ, ಅರ್ಚನಾ ಕಡಪಟ್ಟಿ, ಡಾ ಮೀನಾಕ್ಷಿ ಹುಬ್ಬಳ್ಳಿ, ರತ್ನಾ ಗೌಡರ, ಸುವರ್ಣಾ ಕರೆನ್ನವರ, ಬೋಧಕರಾದ ಗೀತಾ ಪಾಟೀಲ ,ಹನಮಂತ ಪಾಟೀಲ, ಶಿವಲೀಲಾ ಹಿರೇಮಠ, ಅನ್ನಪೂರ್ಣಾ ಚಿಚಖಂಡಿ, ಮಂಜುಳಾ ನಾಶಿ, ಜಯಶ್ರೀ ಹುಬ್ಬಳ್ಳಿ, ವಿನಯಶ್ರೀ ಕುಲಕರ್ಣಿ, ಸುಧಾ ಮೂಡಲಗಿ, ಜ್ಯೋತಿ ಕಾಡೇ ಸೇರಿದಂತೆ ಪಾಲಕರು ಮಕ್ಕಳು ಉಪಸ್ಥಿತರಿದ್ದರು.ಗೀತಾ ಪಾಟೀಲ ಸ್ವಾಗತಿಸಿದರು,ಜಯಶ್ರೀ ಸೋನೋನೆ ನಿರೂಪಿಸಿ ವಂದಿಸಿದರು.