ಕುಡಿಯುವ ನೀರು, ಮೇವು ಕೊರತೆಯಾಗದಂತೆ ಬೇಸಿಗೆಯನ್ನು ಸಮಪರ್ಕವಾಗಿ ನಿರ್ವಹಿಸಲು ಅಧಿಕಾರಿಗಳು ಸ್ಥಾನಿಕವಾಗಿ ಲಭ್ಯರಿದ್ದು, ಕರ್ತವ್ಯ

ಕುಡಿಯುವ ನೀರು, ಮೇವು ಕೊರತೆಯಾಗದಂತೆ ಬೇಸಿಗೆಯನ್ನು ಸಮಪರ್ಕವಾಗಿ ನಿರ್ವಹಿಸಲು ಅಧಿಕಾರಿಗಳು ಸ್ಥಾನಿಕವಾಗಿ ಲಭ್ಯರಿದ್ದು, ಕರ್ತವ್ಯ Officials are available locally to manage the summer smoothly and ensure that there is no shortage

ಲೋಕದರ್ಶನ ವರದಿ 

ಧಾರವಾಡ (ಮಾ.13): ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಕಳೆದ ಕೆಲವು ವರ್ಷಗಳ ಅಂಕಿ ಅಂಶ ಹಾಗೂ ಅನುಭವದ ಆಧಾರದ ಮೇಲೆ ಮಾರ್ಚ, ಏಪ್ರಿಲ್, ಮೇ ತಿಂಗಳಲ್ಲಿ ಬೇಸಿಗೆ ಹೆಚ್ಚಾದಂತೆ ಜಿಲ್ಲೆಯ ಸುಮಾರು 90 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಆಗುವ ಅಂದಾಜು ಮಾಡಲಾಗಿತ್ತು. ಅದರಂತೆ ಎಂಟು ಗ್ರಾಮಗಳಲ್ಲಿ ಬಾಡಿಗೆ ಆಧಾರದಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ತಹಶೀಲ್ದಾರ ಮತ್ತು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕುಡಿಯುವ ನೀರಿನ ಅಭಾವ ಉಂಟಾಗದಂತೆ ಮುನ್ನಚ್ಚರಿಕೆ ವಹಿಸಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಅವರು ನಿರ್ದೇಶಿಸಿದರು.  ಅವರು ಇಂದು (ಮಾ.13) ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, 2026ನೇ ಸಾಲಿನ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಬಗ್ಗೆ ಕೈಗೊಂಡ ಕ್ರಿಯಾ ಯೋಜನೆ ಅನುಷ್ಠಾನದ ಪ್ರಗತಿ ಪರೀಶೀಲನೆ ಮಾಡಿ  ಅಧ್ಯಕ್ಷತೆ ವಹಿಸಿ, ಮಾತನಾಡಿದರು. 

ಜಿಲ್ಲೆಯಲ್ಲಿ ಪ್ರಸ್ತುತವಾಗಿ ಯಾವುದೇ ಗ್ರಾಮ, ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ. ಜಾನುವಾರಗಳಿಗೆ ಅಗತ್ಯವಿದ್ದಾಗ ಬಳಸಲು ಸಾಕಷ್ಟು ಮೇವಿನ ದಾಸ್ತಾನು ಲಭ್ಯವಿದೆ. ಧಾರವಾಡ ತಾಲೂಕಿನ ಹೊಸಟ್ಟಿ, ಮಂಡಿಹಾಳ, ಬೇಲೂರ ಮತ್ತು ಮುಗದ ಗ್ರಾಮಗಳು, ಹುಬ್ಬಳ್ಳಿ ತಾಲೂಕಿನ ನೂಲ್ವಿ ಮತ್ತು ಅದರಗುಂಚಿ ಗ್ರಾಮಗಳು ಹಾಗೂ ಕಲಘಟಗಿ ತಾಲೂಕಿನ ನೆಲ್ಲಿಹರವಿ ತಾಂಡಾ ಮತ್ತು ಬಿ. ಹುಲಿಕಟ್ಟಿ ಗ್ರಾಮಗಳು ಸೇರಿ ಒಟ್ಟು ಎಂಟು ಗ್ರಾಮಗಳಲ್ಲಿ ಎಂಟು ಖಾಸಗಿ ಬೊರವೆಲ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 395 ಗ್ರಾಮಗಳಿದ್ದು, ಈ ಪೈಕಿ 90 ಗ್ರಾಮಗಳಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾದಲ್ಲಿ ಆಯಾ ಗ್ರಾಮಗಳಲ್ಲಿ ಲಭ್ಯವಿರುವ ಖಾಸಗಿ ಬೊರವೆಲ್‌ಗಳನ್ನು ಗುರುತಿಸಿ, ಮುನ್ನಚ್ಚರಿಕಾ ಕ್ರಮವಾಗಿ 186 ಖಾಸಗಿ ಕೊಳವೆಬಾವಿಗಳ ಮಾಲಿಕರೊಂದಿಗೆ ನೀರು ಪಡೆಯಲು ಒಪ್ಪಿಗೆ ಪತ್ರ ಮಾಡಿಕೊಳ್ಳಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಅಗತ್ಯವಿದ್ದಲ್ಲಿ ತುರ್ತು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಅವರು ಸೂಚಿಸಿದರು.  

ಜಿಲ್ಲೆಯ ಕುಡಿಯುವ ನೀರಿನ ಮೂಲಗಳಲ್ಲಿ ಮತ್ತು ಗ್ರಾಮ ಹಾಗೂ ನಗರಗಳ ವಿತರಣಾ ಸ್ಥಳಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಕುಡಿಯಲು ಯೋಗ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕಲುಷಿತ ಅಥವಾ ಅಶುದ್ಧ ನೀರು ಸರಬರಾಜು ಆಗದ್ದಂತೆ ಮುನ್ನಚ್ಚರಿಕೆ ವಹಿಸಬೇಕು. ಕಲುಷಿತ ನೀರಿನಿಂದ ಯಾವುದೇ ಸಾಂಕ್ರಾಮಿಕ ರೋಗಗಳು, ಇತರ ರೋಗರುಜಿನಿಗಳು ಹರಡದಂತೆ ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  ಬೇಸಿಗೆ ಕಾಲದಲ್ಲಿ ನೀರಿನ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಜಿಲ್ಲೆಯ ಎಲ್ಲ ಕುಡಿಯುವ ನೀರಿನ ಕೆರೆಗಳನ್ನು ಈಗಾಗಲೇ ತುಂಬಿಸಲಾಗಿದೆ. ಇವು ಕಲುಷಿತವಾಗದಂತೆ ಹಾಗೂ ಕೃಷಿ ಅಥವಾ ಇತರ ಕಾರ್ಯಚಟುವಟಿಕೆಗಳಿಗೆ ಕೆರೆಯ ನೀರು ಬಳಸದಂತೆ ಎಚ್ಚರಿಕೆ ವಹಿಸಬೇಕು. ಪ್ರಾಣಿ ಮತ್ತು ಪಕ್ಷಿಗಳಿಗೂ ನೀರಿನ ಕೊರತೆ ಆಗದಂತೆ ವಿಶೇಷ ಗಮನ ಹರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರಿನ ತಟ್ಟೆಗಳು ಅಥವಾ ಸಣ್ಣ ನೀರಿನ ಟ್ಯಾಂಕ್ ವ್ಯವಸ್ಥೆಗಳನ್ನು ಮಾಡಬೇಕು ಎಂದು ಅವರು ಹೇಳಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಇವತ್ತಿನವರೆಗೆ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಯಾವುದೇ ರೀತಿಯಾಗಿ ಕುಡಿಯುವ ನೀರಿನ ಅಭಾವ ಕಂಡುಬಂದಿಲ್ಲ. ಕುಂದೋಳ, ನವಲಗುಂದ, ಅಣ್ಣಿಗೇರಿ ಮತ್ತು ಹುಬ್ಬಳ್ಳಿ ತಾಲೂಕಿನ ಎಲ್ಲ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲಾಗಿದೆ. ನವಲಗುಂದ ತಾಲೂಕಿನ ಒಂದು ಕೆರೆಯ ಹೂಳೆತ್ತುವ ಕಾಮಗಾರಿ ಆರಂಭಿಸಿದ್ದು, ಈ ಗ್ರಾಮಕ್ಕೆ ಅಗತ್ಯವಿದ್ದಾಗ ನೀರು ಸರಬರಾಜು ಮಾಡಲು ಎರಡು ಖಾಸಗಿ ಬೊರವೆಲ್‌ಗಳ ಮೂಲಕ ಕ್ರಮವಹಿಸಲಾಗಿದೆ ಎಂದರು.  

ಕುಡಿಯುವ ನೀರು ಜಾನುವಾರುಗಳಿಗೆ ಮೇವು ಹಾಗೂ ವಿಪತ್ತಿಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ತಕ್ಷಣ ಸಂಪರ್ಕಿಸಿ, ಪರಿಹರಿಸಿಕೊಳ್ಳಲು ಅನುಕೂಲವಾಗುವಂತೆ ಸಾರ್ವಜನಿಕರ ಸಹಾಯಕ್ಕಾಗಿ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಹಾಗೂ ಎಲ್ಲ ತಾಲೂಕಾ ಪಂಚಾಯತ ಕಚೇರಿಗಳಲ್ಲಿ ಸಹಾಯವಾಣಿಗಳನ್ನು ಆರಂಭಿಸಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಎಲ್ಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸ್ಥಾನಿಕವಾಗಿ ಲಭ್ಯವಿದ್ದು, ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸಲು ಮತ್ತು ಜಿಲ್ಲಾ ಪಂಚಾಯತಿಗೆ ಈ ಕುರಿತು ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಸಿಇಓ ಭುವನೇಶ ಪಾಟೀಲ ಅವರು ತಿಳಿಸಿದರು.  ವೇದಿಕೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ರೀತಿಕಾ ವರ್ಮಾ, ಎಡಿಸಿಯವರಾದ ಗೀತಾ ಸಿ.ಡಿ. ಅವರು ಉಪಸ್ಥಿತರಿದ್ದರು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಾಲೋಚಕ ವೆಂಕಟೇಶ ಬುಳ್ಳಾ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.  

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಪಂಚಾಯತ ರಾಜ್ ಇಂಜನೀಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ್ ಆರ್‌.ಎಮ್‌.ಸೊಪ್ಪಿಮಠ, ಗ್ರಾಮೀಣ ಕುರಿಯುವ ನೀರು ವಿಭಾಗದ ಕಾರ್ಯಪಾಲಕ ಅಭಿಯಂತರ ಜಗದೀಶ ಪಾಟೀಲ, ಪಶುಪಾಲನೆ ಇಲಾಖೆಯ ಡಾ.ಪ್ರಕಾಶ ಬೆನ್ನೂರ ಸೇರಿದಂತೆ ಎಲ್ಲ ತಾಲೂಕುಗಳ ತಹಶೀಲ್ದಾರರು, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಕಂದಾಯ ನೀರೀಕ್ಷಕರು, ತೋಟಗಾರಿಕೆ, ಅಗ್ನಿಶಾಮಕ, ಆರೋಗ್ಯ ಇಲಾಖೆ ಒಳಗೊಂಡಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.  ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ಆರಂಭಿಸಲಾಗಿರುವ ಸಹಾಯವಾಣಿಗಳು: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲೆಯ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರು, ಮೇವು ಮತ್ತು ಇತರ ವಿಪತ್ತು ಘಟನೆಗಳು ಜರುಗಿದಾಗ ಸಾರ್ವಜನಿಕರು ತಕ್ಷಣ ಸಂಪರ್ಕಿಸಲು ಅನುಕೂಲವಾಗುವಂತೆ ಅಧಿಕಾರಿಗಳನ್ನು ನೇಮಿಸಿ, ಸಹಾಯವಾಣಿಗಳನ್ನು ಆರಂಭಿಸಿದೆ.