ಕನ್ನಡ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕನ್ನಡ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ Oath-taking ceremony of Kannada Sangha office bearers

                     ತಾಳಿಕೋಟೆ 02: ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಕನ್ನಡ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಉಪನ್ಯಾಸ ಕಾರ್ಯಕ್ರಮವು ಭಾನುವಾರ ಜರುಗಿತು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಂಘದ ಅಧ್ಯಕ್ಷ ಬಿ.ಬಿ ಕೊಂಗಂಡಿ ಅವರು ನೂತನ ಅಧ್ಯಕ್ಷ ಡಾ.ವಿಜಯಕುಮಾರ ಕಾರ್ಚಿ ಅವರಿಗೆ ಧ್ವಜ ಹಸ್ತಾಂತರಿಸಿ ಮಾತನಾಡಿ, ಕನ್ನಡದ ಕಂಪು ಸುಸುವ ಕೈಂಕರ್ಯ ನಿಂತ ನೀರಾಗದೇ ಹರಿವ ನೀರಾಗಬೇಕು. ಹಳತು ಬೇರಿನ ಮೇಲೆ ಹೊಸ ಎಲೆ ಹೂವು ಫಲ ಅರಳಿ ಕನ್ನಡ ಸಹೃದಯರ ಮನವನ್ನು ತಣಿಸುವ ಕೆಲಸ ನಡೆಯಲಿ ಅದು ವೈದ್ಯ ಕಾರ್ಚಿ ಅವರ ನೇತೃತ್ವದಲ್ಲಿ ಹೊಸ ಬೆಳಕು ಕಾಣಲಿ ಎಂದು ಹಾರೈಸುವೆ ಎಂದರು.  ವಾಗ್ಮಿ ಸಂಗೀತ ಮತ್ತು ಚಿತ್ರಕಲಾವಿದ ಕೆಂಭಾವಿಯ ಹಳ್ಳೇರಾವ್ ಕುಲಕರ್ಣಿ ತಮ್ಮ ವಿಶೇಷ ಉಪನ್ಯಾಸ ನೀಡಿ ಕನ್ನಡ ನೆಲದಲ್ಲಿ ಕನ್ನಡದ ಅಸ್ಮಿತೆಯ ಅನಂತತೆಯ ಜವಾಬ್ದಾರಿ ಪ್ರತಿ ಕನ್ನಡಿಗರ ಮೇಲಿದೆ. ಮನೆಯಲ್ಲಿ, ಮನೆಯ ಹೊರಗೆ ಕನ್ನಡ ಮಾತಾಡುವುದನ್ನು ಮುಂದುವರೆಸಬೇಕು. ಕನ್ನಡ ಶಾಲೆಗಳು ಉಳಿಯಬೇಕು.

                     ಪ್ರಾಚೀನತೆಯ ಸೊಗಡು ಮುಂದಿನ ಪೀಳಿಗೆಗೆ ಉಣಿಸಿ ಬೆಳೆಸಬೇಕಿದೆ. ಸಾಹಿತ್ಯದಲ್ಲಡಗಿದ ಮೌಲ್ಯಗಳಿಗೆ ಹೆಚ್ಚು ಅವಕಾಶ ಸಿಗುವಂತಾಗಲಿ ಎಂದರು. ಕರುಳು ಭಾಷೆ ಕನ್ನಡ ಕಳೆದುಹೋದರೆ ಕನ್ನಡಿಗರ ಅಸ್ತಿತ್ವವೇ ಇಲ್ಲವಾಗುತ್ತದೆ ಎಂದು ಎಚ್ಚರಿಸಿದರು.ಮಂಕುಮನವೇ ಅಂಕಿತ ತಮ್ಮ ಸ್ವರಚಿತ ತ್ರಿಪದಿಗಳ ಮೂಲಕ ಹಾಗೂ ನಂತರ ದಾರವನ್ನು ಬಳಸಿ ಸುಂದರ ಚಿತ್ರವನ್ನು ಬಿಳಿಪರದೆಯಲ್ಲಿ ಬರೆದು ಗಮನ ಸೆಳೆದರು. ನಿವೃತ್ತ ಪ್ರಾಚಾರ್ಯ ತಾಲ್ಲೂಕಾ ಕಸಾಪ ಅಧ್ಯಕ್ಷ ಆರ್‌.ಎಲ್‌.ಕೊಪ್ಪದ, ನೂತನ ಉಪಾಧ್ಯಕ್ಷರಾದ ಸುಮಂಗಲಾ ಕೋಳೂರ ಹಾಗೂ ಆರ್‌. ಬಿ. ದಮ್ಮೂರಮಠ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಕನ್ನಡ ಸಂಘದ ಕಾರ್ಯದರ್ಶಿ ಪ್ರೊ.ಶೇಷಾಚಲ ಹವಾಲ್ದಾರ(ಚೇಚಿ), ಮಾತನಾಡಿ, ಕನ್ನಡ ಸಂಗದ ಹುಟ್ಟಿನ ಹಿನ್ನೆಲೆ ನಡೆದುಬಂದ ದಾರಿಯನ್ನು ಸ್ಮರಿಸಿದರು. ಇಂದು ಮತ್ತೆ ಹೊಸ ಚಿಗುರು ಮೂಡುತ್ತಿರುವುದಕ್ಕೆ ಸಂತಸವಾಗುತ್ತದೆ ಎಂದರು. ಅತಿಥಿಗಳಾಗಿದ್ದ ಬೋರಗಿ ತತ್ವಪದಗಾರ್ತಿ ಇಮಾಂಬಿ ದೊಡಮನಿ ತತ್ವ ಪದಗಳನ್ನು ಹಾಡಿ ರಂಜಿಸಿದರು.  

                  ನೂತನ ಪದಾಧಿಕಾರಿಗಳು: ಡಾ.ವಿಜಯಕುಮಾರ ಕಾರ್ಚಿ - ಅಧ್ಯಕ್ಷ, ಸುಮಂಗಲಾ ಕೋಳೂರ ಹಾಗೂ ಆರ್‌. ಬಿ. ದಮ್ಮೂರಮಠ ಹಿ ಉಪಾಧ್ಯಕ್ಷರು. ಶ್ರೀಕಾಂತ ಪತ್ತಾರ- ಪ್ರಧಾನ ಕಾರ್ಯದರ್ಶಿ, ಅಪ್ಪಾಸಾಹೇಬಗೌಡ ಮೂಲಿಮನಿ ಹಾಗೂ ಸಾಹೇಬಗೌಡ ಬಿರಾದಾರ -ಸಹ ಕಾರ್ಯದರ್ಶಿ, ಸಿ. ಲಿಂಗಪ್ಪ- ಖಜಾಂಚಿ, ಅನಿತಾ ಸಜ್ಜನ, ಎಸ್‌. ಆರ್ ಮೋಮಿನ, ಕಾಶಿನಾಥ ಸಜ್ಜನ, ವೆಂಕಣ್ಣ ತಾಳಪಲ್ಲೆ, ಡಾ.ಆನಂದ ಭಟ್, ಡಾ.ನಜೀರ ಕೋಳ್ಯಾಳ, ಸಂಜು ಹಂಚಾಟೆ, ಸುರೇಖಾ ಸಾಲಂಕಿ - ಸದಸ್ಯರು ಸಾಹಿತಿ ಅಶೋಕ ಹಂಚಲಿ ಸ್ವಾಗತಿಸಿದರು. ಸಾಹಿತಿ ಸಾಹೇಬಗೌಡ ಬಿರಾದಾರ, ಡಾ.ಅನೀಲಕುಮಾರ ಇರಾಜ ನಿರ್ವಹಿಸಿದರು. ಅಜೀತ ಯಾಳಗಿ ವಂದಿಸಿದರು.