ಸದ್ಯಕ್ಕಿಲ್ಲ ನೀರಿನ ಬವಣೆ : ಜನತೆಗೆ ಸಮಾಧಾನದ ಸಂಗತಿ

ಸದ್ಯಕ್ಕಿಲ್ಲ ನೀರಿನ ಬವಣೆ : ಜನತೆಗೆ ಸಮಾಧಾನದ ಸಂಗತಿ No water shortage for now: A relief for the people

ಲೋಕದರ್ಶನ ವರದಿ

ಕಂಪ್ಲಿ 20:  ಇನ್ನೇನು ಬೇಸಿಗೆ ಆರಂಭವಾಗಿದ್ದು, ಎಲ್ಲೆಡೆ ನೀರಿನ ಸಮಸ್ಯೆಯದ್ದೇ ಸುದ್ದಿ. ಆದರೆ, ಇದಕ್ಕೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಮಾತ್ರ ಸದ್ಯಕ್ಕೆ ನೀರಿನ ಬವಣೆಯ ಪರಿಸ್ಥಿತಿ ಇಲ್ಲ ಎಂಬುದು ಸಮಾಧಾನದ ಸಂಗತಿ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ತಾಲೂಕು ಆಡಳಿತ, ಪುರಸಭೆಯವರು ಸೂಕ್ತ ಮುನ್ನೆಚ್ಚರಿಕೆ ಕ್ರಮಕ್ಕೆ ಈಗಾಗಲೇ ಮುಂದಾಗಿದ್ದು ವಿಶೇಷ. ಪಟ್ಟಣದ ಬಳಿಯಲ್ಲಿರುವ ಜೀವನಾಡಿ ತುಂಗಭದ್ರಾ ನದಿ ಹರಿಯುತ್ತಿದ್ದು, ಸುತ್ತಲಿನ ಗ್ರಾಮಗಳ ಹತ್ತಿರ ಕೆರೆಗಳೂ ಇವೆ. ತಾಲೂಕು ವ್ಯಾಪ್ತಿಯ ಕೆಲವು ಭಾಗದಲ್ಲಿ ತುಂಗಭದ್ರಾ ಬಲದಂಡೆ ಮೇಲ್ಮಟ್ಟದ,ಕೆಳಮಟ್ಟದ ಕಾಲುವೆ ಹಾಗೂ ವಿಜಯನಗರ ಕಾಲುವೆಗಳು ಹರಿಯುತ್ತಿವೆ. ಕೊಳವೆ ಬಾವಿ ಕೊರೆಯಿಸಿ ಜನತೆಗೆ ಶುದ್ದಕುಡಿಯುವ ನೀರು ಪೂರೈಸಲಾಗುತ್ತಿರುವುದು ಗಮನಾರ್ಹ. 

ಎರಡನೇ ಬೆಳೆಗೆ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡದ ಕಾರಣ, ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಏಪ್ರಿಲ್ ಅಂತ್ಯ ಹಾಗೂ ಮೇ ಮೊದಲ ವಾರದಲ್ಲಿ ಕೆಲವೆಡೆ ಕುಡಿಯುವ ನೀರಿನ ಅಭಾವ ಉಂಟಾಗಬಹುದಾಗಿದ್ದು, ಇದಕ್ಕೆ ಸೂಕ್ತ ಮುನ್ನೆಚ್ಚರಿಕೆ ಕ್ರಮಕ್ಕೆ ತಾಲೂಕು ಆಡಳಿತ ಈಗಾಗಲೇ ಮುಂದಾಗಿದೆ. 2011ರ ಜನಗಣತಿ ಪ್ರಕಾರ ಪಟ್ಟಣದ ಜನಸಂಖ್ಯೆ ಸುಮಾರು 39 ಸಾವಿರವಿದೆ. ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳಲ್ಲಿ ನಾಲ್ಕು ಮೇಲೊಟ್ಟಿ (ಓವರ್ ಹೆಡ್ ಟ್ಯಾಂಕ್) ನಿರ್ಮಿಸಿದ್ದು, 35 ಲಕ್ಷ ಲೀಟರ್ ನೀರು ನೀರು ಸಂಗ್ರಹಣಾ ಸಾಮರ್ಥ ವಿದೆ. 23 ವಾರ್ಡ್‌ ಗಳಿದ್ದು, ನೀರು ಶುದ್ದೀಕರಣ ಘಟಕದ ಮೂಲಕ ಹಲವು ವಾರ್ಡ್‌ ಗಳಿಗೆ ದಿನ ಬಿಟ್ಟು ದಿನ ನೀರು ಪೂರೈಸಿದರೆ, ಇನ್ನು ಕೆಲವು ವಾರ್ಡ್‌ ಗಳಿಗೆ ಪ್ರತಿದಿನವೂ ನೀರನ್ನು ಪೂರೈಸಲಾಗುತ್ತಿದೆ. 

ಪ್ರತಿದಿನ ಪಟ್ಟಣದಲ್ಲಿ 6 ಲಕ್ಷ ಎಂಎಲ್‌ಡಿ ನೀರನ್ನು ಪೂರೈಸಲಾಗುತ್ತಿದೆ. ಹೆಚ್ಚುವರಿಯಾಗಿ ಅಗತ್ಯವಿರುವ ಕಡೆಗಳಲ್ಲಿ 107ಕೊಳವೆ ಬಾವಿ ಕೊರೆಯಿಸಿ ಸಿಸ್ಟನ್ ಟ್ಯಾಂಕ್ ಅಳವಡಿಸಲಾಗಿದೆ. ಪಟ್ಟಣದಲ್ಲಿ 11 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು (ಆರ್‌ಬಿ) ಅದರಲ್ಲಿ ಒಂದು ದುರಸ್ತಿಯಲ್ಲಿದೆ. ನದಿಯಲ್ಲಿ ಹರಿಯುವ ನೀರಿನ ಪ್ರಮಾಣವೂ ಇದೀಗ ಉತ್ತಮವಾಗಿದೆ. ಮುಂದಿನ ದಿನದಲ್ಲಿ ನದಿಯಲ್ಲಿನೀರಿನ ಹರಿವು ಕಡಿಮೆಯಾದರೆ, ಜಾಕ್ ವೆಲ್ (ನೀರೆತ್ತುವ) ಹತ್ತಿರದಲ್ಲಿ ಸುತ್ತ ಮರಳಿನ ರಿಂಗ್ ಬಂಡ್ ಹಾಕಿ ನೀರು ಬರುವಂತೆ ಮಾಡಲು ಯೋಜನೆ ರೂಪಿಸಲಾಗಿದೆ. 3 ಗ್ರಾಮಗಳಲ್ಲಿ ಸಮಸ್ಯೆ ಸಾಧ್ಯತೆ ಹಳೆ ನೆಲ್ಲುಡಿ, ಪ್ರಭುಕ್ಯಾಂಪ್, ಇಟಗಿ ಹಾಗೂ ದೇವಲಾಪುರಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗುವ ಸಾಧ್ಯತೆಗಳಿದ್ದು, ಮುಂಜಾಗ್ರತಾ ಕ್ರಮವಾಗಿ ತಾಪಂ ಅಧಿಕಾರಿಗಳು ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. 

ತಾಲೂಕಿನ ಹತ್ತು ಗ್ರಾಪಂಗಳಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ. ತಾಲೂಕಿನ ಮೂರು ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಕಂಡು ಬರಬಹುದಾಗಿದ್ದು, ಆ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಕಾಯ್ದಿರಿಸಲು ಗ್ರಾಪಂ ಆಡಳಿತಾಧಿಕಾರಿ ಗಳಿಗೆ ಸೂಚಿಸಲಾಗಿದೆ ಎಂದು, ತಾಪಂ ಇಒ, ಆರ್‌.ಕೆ.ಶ್ರೀಕುಮಾರ್ ಹಾಗೂ ನಿರ್ದೇಶಕ ಕೆ.ಮಲ್ಲನಗೌಡ ತಿಳಿಸಿದ್ದಾರೆ. ತಹಶೀಲ್ದಾರ್‌ನೇತೃತ್ವದಲ್ಲಿ ಕಳೆದ ತಿಂಗಳು ಟಾಸ್ಕ್‌ ಪೋರ್ಸ್‌ ಸಮಿತಿ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀರಿನ ಬವಣೆಯಿಂದ ಬಳಲುವ ಆತಂಕ ಎದುರಿಸುವ ಸಾಧ್ಯತೆ ತೀರ ಕಡಿಮೆ ಎನ್ನಬಹುದು.