ರಾಜ್ಯದ 3 ಜಿಲ್ಲೆಗಳಲ್ಲಿ ಹೊಸದಾಗಿ ಒಂದೇ ಭಾರತ ರೈಲು ಆರಂಭಕ್ಕೆ ಶೀಘ್ರ ಚಾಲನೆ - ಸಚಿವ ವಿ.ಸೋಮಣ್ಣ
ಹಾವೇರಿ 11: ದೇಶದಲ್ಲಿ 104 ಸ್ಥಳಗಳಿಂದ ವಂದೇ ಭಾರತ ರೈಲು ಓಡಾಡುತ್ತಿದ್ದು, ಈ ಪೈಕಿ ರಾಜ್ಯದಲ್ಲೇ ನಾಲ್ಕು ಸ್ಥಗಳಿಂದ ಓಡಾಡುತ್ತಿವೆ, ಶೀಘ್ರದಲ್ಲೇ ಹೊಸದಾಗಿ ರಾಜ್ಯದ ಮೂರು ಜಿಲ್ಲೆಗಳಿಂದ ವಂದೇ ಭಾರತ ರೈಲು ಓಡಾಟಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ ಸೋಮಣ್ಣ ಅವರು ಹೇಳಿದರು.
ಹಾವೇರಿ ರೈಲು ನಿಲ್ದಾಣದಲ್ಲಿ ಶುಕ್ರವಾರ ಧಾರವಾಡ-ಕೆ.ಎಸ್.ಆರ್.ಬೆಂಗಳೂರು ವಂದೇ ಭಾರತ ಏಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಭಾರತೀಯ ರೈಲ್ವೆ ಈ ದೇಶದ ಅಭಿವೃದ್ಧಿ ಇಂಜಿನ್ ಇದ್ದಹಾಗೆ, ದೇಶ ಬೆಳೆದಂತೆ ರೈಲ್ವೆ ಬೆಳೆಸಬೇಕಾಗಿದೆ. 2047ರವರೆಗೆ ರಾಷ್ಟ್ರ ವಿಕಸಿತ ಭಾರತ ಆಗಬೇಕು ಎನ್ನುವುದು ಮಾನ್ಯ ಪ್ರಧಾನಮಂತ್ರಿಗಳ ಕನಸಾಗಿದೆ. ಭಾರತದ ಸಾರ್ವಭೌತ್ವದ ಜೊತೆಗೆ ಉನ್ನತೀಕರಣದತ್ತ ಕೊಂಡಯ್ಯಲು ಸಾವಿರಾರು ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.
ರೂ.7,600 ಕೋಟಿ: ಕಳೆದ 65 ವರ್ಷಗಳಲ್ಲಿ ಮಾಡದ ಅಭಿವೃದ್ಧಿಯನ್ನು 10 ವರ್ಷಗಳಲ್ಲಿ ಮಾಡಲಾಗಿದೆ. ದೇಶದ ಅಭಿವೃದ್ಧಿ ಜೊತೆಗೆ ರಾಜ್ಯದ ಅಭಿವೃದ್ಧಿಯಾಗಬೇಕು ಎನ್ನುವುದು ಮಾನ್ಯ ಪ್ರಧಾನಮಂತ್ರಿಗಳಾದ ಮೋದಿಜಿಯವರ ಆಶಯವಾಗಿದೆ. ಹಾಗಾಗಿ ರಾಜ್ಯಕ್ಕೆ ರೂ.7,600 ಕೋಟಿ ನೀಡಲಾಗಿದೆ ಎಂದರು.
61 ನಿಲ್ದಾಣಗಳ ಅಭಿವೃದ್ಧಿ: 2025-26ನೇ ಸಾಲಿನಲ್ಲಿ ರಾಜ್ಯದ 61 ರೈಲು ನಿಲ್ದಾಣಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಹತ್ತಾರು ರೈಲುಗಳನ್ನು ನೀಡಲಾಗಿದೆ. ಜನರ ಬೇಡಿಕೆ ಮೇರೆಗೆ ಕಡಿಮೆ ದರದಲ್ಲಿ ಸ್ವೀಪರ್ ಸೌಲಭ್ಯಕ್ಕೆ ಅಮೃತ ಭಾರತ ರೈಲು ಆರಂಭಕ್ಕೆ ಚಿಂತನೆ ಮಾಡಲಾಗಿದೆ ಎಂದರು.
ನೂರಕ್ಕೆ ನೂರರಷ್ಟು ಲೆವಲ್ ಕ್ರಾಸಿಂಗ್: 2025ರ ಅಂತ್ಯದೊಳಗೆ ದೇಶದಲ್ಲಿ ನೂರಕ್ಕೆ ನೂರರಷ್ಟು ಲೆವಲ್ ಕ್ರಾಸಿಂಗ್ ಮಾಡುವ ಉದ್ದೇಶ ಹೊಂದಲಾಗಿದೆ. ಅಪಘಾತ ತಡೆಗೆ ಸ್ವದೇಶಿ ನಿರ್ಮಿತ ಕವಚ ಅಳವಡಿಕೆ ಆರಂಭಿಸಲಾಗಿದೆ. ರಾಜ್ಯದಲ್ಲಿ 10 ಸಾವಿರ ತೆಗೆದುಕೊಳ್ಳಲಾಗಿದೆ ಎಂದರು.
ಹಾವೇರಿ ನಿಲ್ದಾಣಕ್ಕೆ ರೂ.24 ಕೋಟಿ: ಹಾವೇರಿ ರೈಲು ನಿಲ್ದಾಣ ಅಭಿವೃದ್ಧಿಗೆ ರೂ.24 ಕೋಟಿ ನೀಡಲಾಗಿದೆ. ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 5 ಆರ್‌ಒಬಿ ಹಾಗೂ ಒಂದು ಆರ್‌ಯುಬಿ ಮಾಡಲಾಗಿದೆ ಎಂದರು.
ಹಾವೇರಿ ನಿಲ್ದಾಣಕ್ಕೆ ಎಸ್ಕಿಲೆಟರ್ ಸೌಲಭ್ಯ: ಮಾನ್ಯ ಸಂಸದ ಬೇಡಿಕೆ ಅನುಸಾರ ಹಾವೇರಿ ರೈಲು ನಿಲ್ದಾಣಕ್ಕೆ ಶೀಘ್ರದಲ್ಲೇ ಎಸ್ಕಿಲೆಟರ್ ಅಳವಡಿಕೆಗೆ ಕ್ರಮವಹಿಸಲಾಗುವುದು. ರಾಣೇಬೆನ್ನೂರು ಹಾಗೂ ಬ್ಯಾಡಗಿ ರೈಲು ನಿಲ್ದಾಣಗಳಲ್ಲಿ ಗೂಡ್ ಶೆಡ್ ನಿರ್ಮಾಣ, ಕರ್ಜಗಿ ಲೆವಲ್ ಕ್ರಾಸಿಂಗ್ ಸೇರಿದಂತೆ ಹಾವೇರಿ ಲೋಕಸಭಾ ಕ್ಷೇತ್ರದ ವಿವಿಧ ಬೇಡಿಕೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಭೂಮಿ ನೀಡಿದರೆ ಕೆಲಸ ಆರಂಭ: ರಾಣೇಬೆನ್ನೂರು-ಶಿವಮೊಗ್ಗ-ಶಿಕಾರಿಪುರ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಜಮೀನು ನೀಡಿದರೆ, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಹುಬ್ಬಳ್ಳಿ-ಅಂಕೋಲ, ತಳಕಲ್ಲ -ಕುಷ್ಟಗಿ ಡಿ.ಆರ್‌ಪಿ ಮುಗಿದ್ದು, ಶೀಘ್ರದಲ್ಲೇ ಉದ್ಘಾಟನೆ ನೆರವೇರಿಸಲಾಗುವುದು. ರೂ.15 ಸಾವಿರ ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ವಿವಿಧ ನಿಲ್ದಾಣಗಳನ್ನು ಇನ್ನೂ ಹೆಚ್ಚಿನ ರೈಲು ಸಂಚಾರಕ್ಕೆ ಚಿಂತನೆ ನಡೆಸಲಾಗಿದೆ ಎಂದರು.
ಮಾಜಿ ಮುಖ್ಯ ಮಂತ್ರಿಗಳು ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಸರಾಸರಿ ರೂ.10 ಕೋಟಿ ವಹಿವಾಟು ನಡೆಯುತ್ತಿದೆ. ಈ ಭಾಗದ ಜನರಿಗೆ ಅನುಕೂಲ ಕಲ್ಪಿಸುವ ಹಿನ್ನಲೆಯಲ್ಲಿ ಈ ಭಾಗದ ಜನರ ಬಹುದಿನಗಳ ಬೇಡಿಕೆ ಹಿನ್ನಲೆಯಲ್ಲಿ ಈ ವಂದೇ ಭಾರತ ಏಕ್ಸ್‌ಪ್ರೆಸ್ ನಿಲುಗಡೆಗೆ ಕ್ರಮವಹಿಸಲಾಗಿದ್ದು, ಇದು ಶುಭಾರಂಭವಾಗಿದೆ. ಕರಾವಳಿ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಜನರಿಗೆ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಈ ಇಂತಹ ಯೋಜನೆ ಜಾರಿಗೆ ತಂದಿದೆ. ಹಾವೇರಿ ನಿಲ್ದಾಣದಲ್ಲಿ ವಂದೇ ಭಾರತ ರೈಲು ನಿಲುಗಡೆಗೆ ಸಹಕರಿಸಿ ಸಚಿವ ಸೋಮಣ್ಣ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಅಭಿನಂದಿಸುತ್ತೇನೆ ಎಂದರು.
ವಿದೇಶಗಳಲ್ಲಿ ಇಂತಹ ರೈಲುಗಳನ್ನು ನೋಡಲಾಗುತ್ತಿತ್ತು, ಆದರೆ ಮಾನ್ಯ ಪ್ರಧಾನಮಂತ್ರಿಗಳ ಇಚ್ಛಾಶಕ್ತಿಯಿಂದ ಇಂತಹ ರೈಲುಗಳನ್ನು ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸಂಚರಿಸುತ್ತಿವೆ. ರೈಲು ಮಾರ್ಗಗಳ ವಿಸ್ತರ್ಣ, ರೈಲುಗಳ ವಿದ್ಯುದ್ದೀಕರಣ, ಸಿಗ್ನಲ್‌ಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಮೂಲಕ ಅಪಘಾತ ಹಾಗು ಅನಾಹುತಗಳನ್ನು ತಪ್ಪಿಸಲಾಗಿದೆ ಎಂದು ಹೇಳಿದರು.
ರೂ.100 ಕೋಟಿ ಮಂಜೂರಿಗೆ ಬೇಡಿಕೆ: ಹಾವೇರಿ ರೈಲುನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಎಸ್ಕಿಲೆಟರ್ ಅಳವಡಿಕೆ, ರಾಣೇಬೆನ್ನೂರ ಬ್ಯಾಡಗಿ ನಿಲ್ದಾಣಗಳಲ್ಲಿ ಗೂಡ್ ಶೆಡ್ ನಿರ್ಮಾಣ, ಯಲವಿಗಿ-ಗದಗ ಮಾರ್ಗ, ರಾಣೇಬೆನ್ನೂರು-ಶಿಕಾರಿಪುರ ಮಾರ್ಗ, ಯಲವಿಗಿ ಮೇಲ್ಸೆತುವೆ, ನಾಗೇಂದ್ರಮಟ್ಟಿ ಆರ್‌ಒಬಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಆರ್‌ಒಬಿ ಹಾಗೂ ಆರ್‌ಯುಬಿ ಮಾಡಲು ಹಾಗೂ ವಿವಿಧ ಯೋಜನೆಗಳಿಗೆ ಹಾವೇರಿ ಜಿಲ್ಲೆಗೆ ರೂ.60 ಕೋಟಿ ಹಾಗೂ ಗದಗ ಜಿಲ್ಲೆಗೆ ರೂ. 40 ಕೋಟಿ ಸೇರಿ ರೂ. 100 ಕೋಟಿ ಮಂಜೂರಿಗೆ ಸಂಸದರು ಸಚಿವರಿಗೆ ಬೇಡಿಕೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಡಗಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ, ನಗರಸಭೆ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಮಾಳಗಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ರೈಲ್ವೆ ಇಲಾಖೆಯ ಡಿ.ಆರ್.ಎಂ. ಅನೂಪ್ ಹಾಗೂ ದಯಾನಂದ ಇತರರು ಉಪಸ್ಥಿತರಿದ್ದರು.
ರೈಲು ನಿಲುಗಡೆಗೆ ಚಾಲನೆ: ಹಾವೇರಿ ರೈಲು ನಿಲ್ದಾಣಕ್ಕೆ ಆಗಮಿಸಿದ ಹಸಿರು ನಿಶಾನೆ ತೋರಿಸುವ ಮೂಲಕ ಧಾರವಾಡ-ಕೆ.ಎಸ್.ಆರ್.ಬೆಂಗಳೂರು ವಂದೇ ಭಾರತ ರೈಲಿಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ ಸೋಮಣ್ಣ ಅವರು ಚಾಲನೆ ನೀಡಿದರು ಹಾಗೂ ಅದೇ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.