ಏಕೀಕರಣದ ಆಶಯಗಳ ಮರುಚಿಂತನೆಯ ಅಗತ್ಯವಿದೆ: ಶಂಕರ ಹಲಗತ್ತಿ

ಏಕೀಕರಣದ ಆಶಯಗಳ ಮರುಚಿಂತನೆಯ ಅಗತ್ಯವಿದೆ: ಶಂಕರ ಹಲಗತ್ತಿ Need to rethink aspirations of integration: Shankar Halagatti

ಏಕೀಕರಣದ ಆಶಯಗಳ ಮರುಚಿಂತನೆಯ ಅಗತ್ಯವಿದೆ: ಶಂಕರ ಹಲಗತ್ತಿ 

ಧಾರವಾಡ 24: ಇಂದು ರಾಜ್ಯದಲ್ಲಿ ಏಕೀಕರಣದ ಮೂಲ ಆಶಯಗಳನ್ನು ಮರು ಚಿಂತಿಸುವ ಅಗತ್ಯವಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಹೇಳಿದರು. ಅವರು ಇಂದು (ಅ.24) ರಂದು ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವತಿಯಿಂದ ಜರುಗಿದ ಕರ್ನಾಟಕ ಏಕೀಕರಣ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಸಮಾಜದಲ್ಲಿ ಜಾಗೃತಿ ಮೂಡಿಸುವುದು, ಯುವ ಪೀಳಿಗೆಗೆ ಏಕೀಕರಣದ ಮೌಲ್ಯಗಳನ್ನು ತಿಳಿಸುವುದು ಮತ್ತು ಜಾತಿ ನಿರ್ಮೂಲನೆಗಾಗಿ ಶ್ರಮಿಸುವುದು ಇಂದಿನ ತುರ್ತು ಅಗತ್ಯ ಎಂದು ತಿಳಿಸಿದರು. ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ಭಾಷೆ ಉಳಿಸಲು ಮತ್ತು ಬೆಳೆಸಲು ವೈಯಕ್ತಿಕ ಜವಾಬ್ದಾರಿ ಹೊಂದಬೇಕು. ಕನ್ನಡ ಭಾಷಗೆ ಗೌರವ ಮತ್ತು ಪ್ರಾಮುಖ್ಯತೆ ನೀಡುವ, ಪ್ರತಿಯೊಬ್ಬರಲ್ಲೂ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವಂತಹ ವಾತಾವರಣವನ್ನು ಸೃಷ್ಟಿಸಲು ಶ್ರಮಿಸೋಣ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ಶ್ರೀನಿವಾಸ ವಾಡಪ್ಪಿ ಅವರು ಕರ್ನಾಟಕ ಏಕೀಕರಣ ಚರಿತ್ರೆಯ ಕುರಿತು ಹಾಗೂ ಹೊಂಬೆಳಕು ಪ್ರತಿಷ್ಠಾನ ಹಾಗೂ ಶ್ರೀ ಸಾಯಿ ಪದವಿಪೂರ್ವ ಕಾಲೇಜು ಸಂಸ್ಥಾಪಕ ಅಧ್ಯಕ್ಷೆ ಡಾ.ವೀಣಾ ಬಿರಾದಾರ ಅವರು ಕನಾಟಕ ಏಕೀಕರಣ ಚಳುವಳಿಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ರಂಜಾನ್ ದರ್ಗಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯಗಳು ಮತ್ತು ಶಿಕ್ಷಕರ ಅರ್ಹತೆಗಳ ಬಗ್ಗೆ ಪೋಷಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಜೊತೆಗೆ ಕನ್ನಡ ಮಾಧ್ಯಮದಲ್ಲಿ ನೀಡುವ ಗುಣಮಟ್ಟದ ಶಿಕ್ಷಣದಿಂದ ಉತ್ತಮ ಭವಿಷ್ಯ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ ಎಂದು ಹೇಳಿದರು. 

ಆಲೂರು ವೆಂಕಟರಾವ ಅವರ ನಾಯಕತ್ವದಲ್ಲಿ ನಡೆದ ಈ ಹೋರಾಟ ಕೇವಲ ಗಡಿಗಳನ್ನು ಸೇರಿಸುವುದಕ್ಕೆ ಸೀಮಿತವಾಗಿರಲಿಲ್ಲ; ಬದಲಾಗಿ ಕನ್ನಡತನವನ್ನು ಎತ್ತಿಹಿಡಿಯುವ ಪ್ರಯತ್ನವಾಗಿತ್ತು. ಅವರ ಬಲಿದಾನ ಅಂದರೆ ತಮ್ಮ ಇಡೀ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟಿದ್ದು, ಏಕೀಕೃತ ಕರ್ನಾಟಕ ರಾಜ್ಯದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿತು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು. ರವಿ ಕುಲಕರ್ಣಿ ಅವರು ನಿರೂಪಿಸಿ, ವಂದಿಸಿದರು.  ಕಾರ್ಯಕ್ರಮದಲ್ಲಿ ಡಾ. ದೀಪಕ ಆಲೂರ, ದ್ರೌಪದಿ ಬಿಜಾಪುರ, ಬಸವರಾಜ ಸೂಳಿಭಾವಿ, ಸುನಂದಾ ಕಡಮೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ವಿದ್ಯಾರ್ಥಿಗಳು, ಸಾರ್ವಜನಿಕರು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.