ನಿಡಶೇಸಿ ಗ್ರಾಮದಲ್ಲಿ ರಾಷ್ಟ್ರೀಯ ಹಾವು ಕಡಿತ ನಿಯಂತ್ರಣ ಜಾಗೃತಿ ಕಾರ್ಯಕ್ರಮ

ನಿಡಶೇಸಿ ಗ್ರಾಮದಲ್ಲಿ ರಾಷ್ಟ್ರೀಯ ಹಾವು ಕಡಿತ ನಿಯಂತ್ರಣ ಜಾಗೃತಿ ಕಾರ್ಯಕ್ರಮ National Snake Bite Control Awareness Program in Nidashesi Village

        ಕೊಪ್ಪಳ  10:  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ, ಕೊಪ್ಪಳ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಕುಷ್ಟಗಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ದೋಟಿಹಾಳ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ನಿಡಶೇಸಿ ಗ್ರಾಮದ ಸಮುದಾಯ ಭವನದಲ್ಲಿ “ರಾಷ್ಟ್ರೀಯ ಹಾವು ಕಡಿತ ನಿಯಂತ್ರಣ ಜಾಗೃತಿ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ ಅವರು ಮಾತನಾಡಿ, ಹಾವು ಕಡಿತದಿಂದ ಉಂಟಾಗುವ ಮರಣವನ್ನು ನಿಯಂತ್ರಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಭಾರತ ಹಳ್ಳಿಗಳ ದೇಶ ಶೇ.70 ಕ್ಕಿಂತಲೂ ಹೆಚ್ಚು ಜನರು ಕೃಷಿಯಲ್ಲಿ ಅವಲಂಬಿತರಾಗಿದ್ದಾರೆ. ಭಾರತದಲ್ಲಿ ಪ್ರಮುಖ 4 ವಿಷಕಾರಿ ಹಾವುಗಳಾದ ನಾಗರಹಾವು, ಕಟ್ಟಾವು, ಕೊಳಕುಮಂಡಲ ಹಾವು ಹಾಗೂ ಗರಗಸ ಮಂಡಲ ಹಾವು ಕಡಿತದಿಂದ ಉಂಟಾಗುವ ಸಾವುಗಳಲ್ಲಿ ಶೇ.90 ಕ್ಕಿಂತ ಅಧಿಕ ಸಾವುಗಳಿಗೆ ಕಾರಣವಾಗುತ್ತವೆ.

         ಹಾಗಾಗಿ ಈ 4 ಹಾವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ನಾಗರಹಾವು ಬಿಟ್ಟು ಉಳಿದ 3 ವಿಷಕಾರಿ ಹಾವುಗಳು ರಾತ್ರಿ ವೇಳೆ ಹೆಚ್ಚು ಚಟುವಟಿಕೆಯಿಂದಿರುತ್ತವೆ. ಹಾಗಾಗಿ ರಾತ್ರಿ ವೇಳೆ ಹೊರಗಡೆ ಹೋಗುವಾಗ ಟಾರ್ಚ್‌ ಬಳಸಬೇಕು. ಮನೆ ಅಂಗಳವನ್ನು ಇಲಿ, ಹೆಗ್ಗಣಗಳಂತಹ ಹಾವುಗಳು ತಿನ್ನುವ ಜೀವಿಗಳಿಂದ ಮುಕ್ತವಾಗಿಡಬೇಕು. ಹಾವುಗಳು ತಿನ್ನುವ ಜೀವಿಗಳಿಂದ ಮುಕ್ತವಾಗಿಡಬೇಕು. ಮನೆಯಂಗಳ ಅಥವಾ ಹೊಲಗದ್ದೆಗಳಲ್ಲಿ ಸಾಮಾನ್ಯವಾಗಿ ತಿರುಗಾಡುವ ಸ್ಥಳಗಳಲ್ಲಿ ಗಿಡಗಂಟಿಗಳನ್ನು ಕಡಿದು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಮಾಹಿತಿ ನೀಡಿದರು. 

ಹಾವುಗಳಿರುವ ಸಾಧ್ಯತೆ ಹೆಚ್ಚಿರುವ ಸ್ಥಳಗಳಲ್ಲಿ ಕೆಲಸ ಮಾಡುವಾಗ ಶೂಗಳನ್ನು ಬಳಸಬೇಕು. ರಾತ್ರಿ ಮನೆಯ ಹೊರಗೆ ಹಾಗೂ ಹೊಲಗದ್ದೆಗಳಲ್ಲಿ ಮಲಗಬೇಕಾದಾಗ ನೆಲದಲ್ಲಿ ಮಲಗದೆ ಎತ್ತರ ಪ್ರದೇಶದ ಮಂಚ ಬಳಸಬೇಕು. ನೆಲದಲ್ಲಿ ಮಲಗಲೇ ಬೇಕೆಂದರೆ ಕಡ್ಡಾಯವಾಗಿ ಸೊಳ್ಳೆಪರದೆ ಬಳಸಬೇಕು ಹಾಗೂ ರೈತರು ಹೊಲದಲ್ಲಿ ದನ-ಕರುಗಳಿಗೆ ಮೇವು ಹಾಗೂ ಹಸಿಹುಲ್ಲು ಕೀಳುವಾಗ ಕುಡುಗೋಲು ಬಳಸಬೇಕು. ಒಂದು ವೇಳೆ ಹಾವು ಕಚ್ಚಿದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ 40 ನಿಮಿಷದೊಳಗಾಗಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಹಾವು ಕಡೆದ ವ್ಯಕ್ತಿಯನ್ನು ಸಮಾಧಾನ ಪಡಿಸಿ, ಗಾಬರಿ ಪಡಿಸಬೇಡಿ.

         ಹಾವಿನಿಂದ ನಿಧಾನವಾಗಿ ದೂರ ಸರಿಯಿರಿ. ರಕ್ತಬಂಧಕಪಟ್ಟಿ ಕಟ್ಟಬೇಡಿ. ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಿ. ಗಾಯವನ್ನು ಕತ್ತರಿಸಬೇಡಿ, ಏನನ್ನು ಹಚ್ಚಬೇಡಿ. ಹಾವು ಕಚ್ಚಿದ ವ್ಯಕ್ತಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಿಸಿ. ನಾಟಿ ಓಷಧ ಅಥವಾ ಅಸುರಕ್ಷಿತ ಚಿಕಿತ್ಸಾ ಪದ್ದತಿಯನ್ನು ಅವಲಂಬಿಸಬೇಡಿ. ಒಟ್ಟಾರೆಯಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಸುತ್ತ-ಮುತ್ತಲಿನ ಪ್ರದೇಶ ಸ್ವಚ್ಛತೆಯಿಂದ ಇಟ್ಟುಕೊಂಡು ಇದರ ಬಗ್ಗೆ ಇತರರಿಗೂ ಮಾಹಿತಿ ನೀಡಿ, ಜಾಗೃತರಾಗಬೇಕೆಂದು ತಿಳಿಸಿದರು. 

ನಂತರ ಕುಷ್ಟಗಿಯ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಸೋಮಶೇಖರ ಮೇಟಿ ಅವರು ಬಾಲ್ಯವಿವಾಹ ನಿಷೇಧ, ಆರ್‌.ಸಿ.ಹೆಚ್, ಕುಟುಂಬ ಕಲ್ಯಾಣ ಕಾರ್ಯಕ್ರಮ, ಮಾನಸಿಕ ಆರೋಗ್ಯ ಕಾರ್ಯಕ್ರಮ ಕುರಿತು ಮಾತನಾಡಿದರು. ಸಾಂಕ್ರಾಮಿಕ ರೋಗಗಳ ಶಾಸ್ತ್ರಜ್ಞರಾದ ಡಾ. ಪ್ರಶಾಂತ ಅವರು ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕುರಿತು ವಿವರವಾಗಿ ಮಾತನಾಡಿದರು. ಸಿ.ಎಚ್‌.ಒ ಪೂರ್ಣಿಮಾ ಅವರು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಶಾಕೀರ್‌ಬಾನು, ಆಶಾ ಕಾರ್ಯಕರ್ತೆಯರಾದ ಶಾಮಲಾಬಾಯಿ, ಅಂಗನವಾಡಿ ಕಾರ್ಯಾಕರ್ತೆಯರಾದ ಚೈತ್ರಾ, ದೇವಮ್ಮ, ಮಲ್ಲಿಕಾ ಹಾಗೂ ಗ್ರಾಮದ ನಾಗರಿಕರು, ಗರ್ಭಿಣಿ, ಬಾಣಂತಿಯರು ಭಾಗವಹಿಸಿ ಯಶಸ್ವಿಗೊಳಿಸಿದರು.