ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ : ಜನರ ಅಗತ್ಯಗಳಿಗೆ ಸ್ಪಂದಿಸುವ ಆಡಳಿತವೇ ನಿವಾದ ಪ್ರಜಾಪ್ರಭುತ್ವ -ಜಿ.ಪಂ.ಸಿಇಒ ರುಚಿ ಬಿಂದಲ್

ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ : ಜನರ ಅಗತ್ಯಗಳಿಗೆ ಸ್ಪಂದಿಸುವ ಆಡಳಿತವೇ ನಿವಾದ ಪ್ರಜಾಪ್ರಭುತ್ವ -ಜಿ.ಪಂ.ಸಿಇಒ ರುಚಿ ಬಿಂದಲ್ National Panchayat Raj Day: A democracy that responds to the needs of the people is a true democrac

ಲೋಕದರ್ಶನ ವರದಿ 

        ಹಾವೇರಿ 30:  ಪಂಚಾಯತ್ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ಮೂಲ ಸ್ತಂಭವಾಗಿದ್ದು, ಗ್ರಾಮ ಮಟ್ಟದಲ್ಲಿ ಜನರ ಅಗತ್ಯಗಳಿಗೆ ಸ್ಪಂದಿಸುವ ಆಡಳಿತವೇ ನಿಜವಾದ ಪ್ರಜಾಪ್ರಭುತ್ವದ ಸಾರ್ಥಕತೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರುಚಿ ಬಿಂದಲ್ ಅವರು ಹೇಳಿದರು. 

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ “ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ” ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಚಾಯತ್‌ಗಳ ಮೂಲಕ ಸರಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಅಧಿಕಾರಿಗಳು ಇನ್ನಷ್ಟು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು. 

ಪ್ರತಿ ವರ್ಷ ಏಪ್ರಿಲ್ 24ರಂದು ದೇಶಾದ್ಯಂತ "ರಾಷ್ಟ್ರೀಯ ಪಂಚಾಯತಿ ರಾಜ್ ದಿನ'ವನ್ನು ಆಚರಿಸಲಾಗುತ್ತದೆ. ಈ ದಿನದ ವಿಶೇಷತೆ ಏನೆಂದರೆ, ಗ್ರಾಮೀಣ ಆಡಳಿತ ವ್ಯವಸ್ಥೆಗೆ ಸಂವಿಧಾನಿಕ ಸ್ಥಾನಮಾನವನ್ನು ನೀಡಿದ 73ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ದಿನವನ್ನು ಸ್ಮರಿಸುವುದು. 1992ರಲ್ಲಿ ಅಂಗೀಕರಿಸಲ್ಪಟ್ಟು 1993ರ ಏಪ್ರಿಲ್ 24ರಂದು ಜಾರಿಗೆ ಬಂದ ಈ ಐತಿಹಾಸಿಕ ತಿದ್ದುಪಡಿ, ಭಾರತದಲ್ಲಿ ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ಬಲವರ್ಧನೆಗೆ ಮಹತ್ವದ ಮೈಲುಗಲ್ಲಾಗಿ ಪರಿಣಮಿಸಿದೆ ಎಂದರು. 

73ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ ಪಂಚಾಯತ್ ವ್ಯವಸ್ಥೆಗೆ ಸಂವಿಧಾನಿಕ ಮಾನ್ಯತೆ ದೊರೆಯಿತು. ಇದರೊಂದಿಗೆ ಗ್ರಾಮ, ತಾಲೂಕು (ಮಧ್ಯಂತರ) ಮತ್ತು ಜಿಲ್ಲಾ ಮಟ್ಟಗಳಲ್ಲಿ ಮೂರು ಹಂತಗಳ ಪಂಚಾಯತ್ ವ್ಯವಸ್ಥೆಯನ್ನು ರೂಪಿಸಲಾಯಿತು. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳು ಗ್ರಾಮೀಣ ಆಡಳಿತದ ಮೂಲ ಘಟಕಗಳಾಗಿ ಕಾರ್ಯನಿರ್ವಹಿಸುತ್ತಿವೆ. ಈ ತಿದ್ದುಪಡಿಯಿಂದ ಜನರಿಗೆ ಆಡಳಿತದಲ್ಲಿ ನೇರ ಪಾಲ್ಗೊಳ್ಳುವ ಅವಕಾಶ ದೊರೆಯುವುದರ ಜೊತೆಗೆ, ಪ್ರಜಾಪ್ರಭುತ್ವವನ್ನು ತಳಮಟ್ಟದವರೆಗೆ ತಲುಪಿಸುವ ಮಹತ್ವದ ಕಾರ್ಯ ಸಾಧ್ಯವಾಯಿತು ಎಂದು ಹೇಳಿದರು.  

ಈ ಕಾಯ್ದೆಯ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದು ಎಂದರೆ, ಸಮಾಜದ ಎಲ್ಲಾ ವರ್ಗಗಳ ಪ್ರತಿನಿಧಿತ್ವವನ್ನು ಖಚಿತಪಡಿಸುವುದು, ಮಹಿಳೆಯರು, ಅನುಸೂಚಿತ ಜಾತಿ ಮತ್ತು ಪಂಗಡಗಳವರಿಗೆ ಮೀಸಲಾತಿಯನ್ನು ನೀಡುವ ಮೂಲಕ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಕನಿಷ್ಠ ಶೇ.33 ಮೀಸಲಾತಿ ನೀಡಿರುವುದು, ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಮಹತ್ತರ ಉತ್ತೇಜನ ನೀಡಿದೆ. ಅನೇಕ ರಾಜ್ಯಗಳಲ್ಲಿ ಈ ಮೀಸಲಾತಿಯನ್ನು ಶೇ.50ರವರೆಗೆ ವಿಸ್ತರಿಸಲಾಗಿದೆ. ಇದು ಮಹಿಳೆಯರ ನಾಯಕತ್ವವನ್ನು ಇನ್ನಷ್ಟು ಬಲಪಡಿಸಿದೆ ಎಂದರು.  

ಇದೇ ರೀತಿ, ಗ್ರಾಮ ಸಭೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಗ್ರಾಮ ಸಭೆಯು ಜನರ ನೇರ ಪಾಲ್ಗೊಳ್ಳುವಿಕೆಯನ್ನು ಪ್ರತಿಬಿಂಬಿಸುವ ವೇದಿಕೆಯಾಗಿದೆ. ಗ್ರಾಮದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳು, ಯೋಜನೆಗಳ ಆಯ್ಕೆ, ವೆಚ್ಚದ ಪರೀಶೀಲನೆ ಹಾಗೂ ಸಾಮಾಜಿಕ ಲೆಕ್ಕಪತ್ರಗಳು ಗ್ರಾಮ ಸಭೆಯ ಮೂಲಕ ನಡೆಯುವ ವ್ಯವಸ್ಥೆ ಮಾಡಲಾಗಿದೆ. ಇದು ಪಾರದರ್ಶಕತೆ ಮತ್ತು ಜವಾಬ್ದಾರಿತ್ವವನ್ನು ಹೆಚ್ಚಿಸಲು ಸಹಕಾರಿ ಆಗಿದೆ ಎಂದರು.  

ಪಂಚಾಯತ್‌ಗಳಿಗೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಸ್ತಾಂತರಿಸಲಾಗಿದೆ. ಕೃಷಿ, ನೀರು ನಿರ್ವಹಣೆ, ಗ್ರಾಮೀಣ ರಸ್ತೆ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಸ್ವಚ್ಛತೆ ಮುಂತಾದ 29 ವಿಷಯಗಳನ್ನು ಪಂಚಾಯತ್‌ಗಳಿಗೆ ನೀಡಲಾಗಿದೆ.  ಇದರಿಂದ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ಜಾರಿಗೆ ತರಲು ವಂಚಾಯತ್‌ಗಳು ಸಬಲವಾಗಿವೆ ಎಂದು ಹೇಳಿದರು.  

ರಾಷ್ಟ್ರೀಯ ಪಂಚಾಯತಿ ರಾಜ್ ದಿನವನ್ನು ಆಚರಿಸುವುದು ಕೇವಲ ಒಂದು ಆಚರಣೆಯಲ್ಲ, ಇದು ಗ್ರಾಮೀಣ ಆಡಳಿತದ ಮಹತ್ವವನ್ನು ಅರಿತುಕೊಳ್ಳುವ ಹಾಗೂ ಅದನ್ನು ಬಲಪಡಿಸುವ ಸಂಕಲ್ಪದ ದಿನವಾಗಿದೆ. ಈ ದಿನದಂದು ದೇಶದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳು, ಚರ್ಚೆಗಳು, ಪ್ರಶಸ್ತಿ ವಿತರಣಾ ಸಮಾರಂಭಗಳು ನಡೆಯುತ್ತವೆ. ಉತ್ತಮ ಕಾರ್ಯನಿರ್ವಹಣೆ ಮಾಡಿದ ಪಂಚಾಯತ್‌ಗಳಿಗೆ ಗೌರವ ನೀಡಲಾಗುತ್ತದೆ. ಇದರ ಮೂಲಕ ಉತ್ತಮ ಆಡಳಿತದ ಮಾದರಿಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ ಎಂದರು. 

ಇಂದಿನ ಸಂದರ್ಭದಲ್ಲಿ ಪಂಚಾಯತ್ ವ್ಯವಸ್ಥೆಯು ಗ್ರಾಮೀಣ ಅಭಿವೃದ್ಧಿಗೆ ಪ್ರಮುಖ ಚಾಲಕ ಶಕ್ತಿಯಾಗಿದೆ. ಮಹಾತ್ಮ ಗಾಂಧೀಜಿ ಕನಸು "ಗ್ರಾಮ ಸ್ವರಾಜ್ಯ'ದ ದಿಕ್ಕಿನಲ್ಲಿ ಈ ವ್ಯವಸ್ಥೆ ಮಹತ್ತರ ಪಾತ್ರ ವಹಿಸುತ್ತಿದೆ. ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳನ್ನು ತಳಮಟ್ಟಕ್ಕೆ ತಲುಪಿಸುವಲ್ಲಿ ಪಂಚಾಯತ್‌ಗಳು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ. ಡಿಜಿಟಲ್ ತಂತ್ರಜ್ಞಾನಗಳ ಬಳಕೆ, ಪಾರದರ್ಶಕ ಆಡಳಿತ ಮತ್ತು ಜನಸಹಭಾಗಿತ್ವದ ಮೂಲಕ ಪಂಚಾಯತ್‌ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದು ಗಮನಾರ್ಹವಾಗಿದೆ ಎಂದರು. 

ಅತ್ಯುತ್ತಮ ಸೇವಾ ಪುರಸ್ಕಾರ: ಸರ್ಕಾರದ ನಿರ್ದೇಶನದಂತೆ, 2025-26ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ತಾಲೂಕು ಪಂಚಾಯತಿಗಳು, ಗ್ರಾಮ ಪಂಚಾಯತಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ “ಅತ್ಯುತ್ತಮ ಸೇವಾ ಪುರಸ್ಕಾರ” ಪ್ರದಾನ ಮಾಡಲಾಯಿತು. 

ಈ ಪುರಸ್ಕಾರಗಳ ಮುಖ್ಯ ಉದ್ದೇಶ ಗ್ರಾಮೀಣ ಆಡಳಿತದಲ್ಲಿ ಸ್ಪರ್ಧಾತ್ಮಕತೆ, ಪಾರದರ್ಶಕತೆ ಹಾಗೂ ಜನಪರ ಸೇವೆಯನ್ನು ಉತ್ತೇಜಿಸುವುದು, ಉತ್ತಮ ಕಾರ್ಯನಿರ್ವಹಣೆಯನ್ನು ಗುರುತಿಸಿ ಗೌರವಿಸುವ ಮೂಲಕ ಇತರ ಪಂಚಾಯತಿಗಳಿಗೂ ಪ್ರೇರಣೆಯಾಗುವಂತಹ ವಾತಾವರಣವನ್ನು ನಿರ್ಮಿಸುವುದು ಇದರ ಹಿಂದಿನ ಆಶಯವಾಗಿದೆ ಎಂದರು. 

ಸನ್ಮಾನ: ಅತೀ ಹೆಚ್ಚು ತೆರಿಗೆ ವಸೂಲಿ ಮಾಡಿದ ರಟ್ಟಿಹಳ್ಳಿ ತಾಲೂಕು ಪಂಚಾಯತಿಯ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ತೆರಿಗೆ ಸಂಗ್ರಹಣೆ ಗ್ರಾಮೀಣ ಅಭಿವೃದ್ಧಿಯ ಪ್ರಮುಖ ಆಧಾರವಾಗಿದ್ದು, ಈ ಕ್ಷೇತ್ರದಲ್ಲಿ ರಟ್ಟಿಹಳ್ಳಿ ತಾಲೂಕು ಪಂಚಾಯತಿಯ ಸಾಧನೆ ಶ್ಲಾಘನೀಯವಾಗಿದೆ ಎಂದರು. 

ಶಿಗ್ಗಾಂವ ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯತಿ ಅತೀ ಹೆಚ್ಚು ತೆರಿಗೆ ವಸೂಲಿ ಮಾಡಿ ಗೌರವಕ್ಕೆ ಪಾತ್ರವಾಗಿದೆ. ಈ ಸಾಧನೆಯಲ್ಲಿ ಪಂಚಾಯತಿ ಅಭಿವ್ರುದ್ಧಿ ಅಧಿಕಾರಿ ನಾಗರಾಜ ತರವಂದ ಹಾಗೂ ಬಿಲ್ ಕಲೆಕ್ಕರ್ ಕೃಷ್ಣ ಕುಲಕರ್ಣಿ ಅವರ ಶ್ರಮ ಪ್ರಮುಖವಾಗಿದೆ ಎಂದರು. 

ಗ್ರಾಮ ಪಂಚಾಯತಿ ಅರಿವು ಕೇಂದ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿದ ಹಾವೇರಿ ತಾಲೂಕಿನ ಹಾವನೂರ ಗ್ರಾಮ ಪಂಚಾಯತಿಯನ್ನು ಕೂಡ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ ಮುಂಡವಾಡ ಹಾಗೂ ಗ್ರಂಥಾಲಯ ಮೇಲ್ವಿಚಾರಕರಾದ ಕೋಟಪ್ಪ ಪುಟ್ಟಪ್ಪ ಕೆಂಗನಿಂಗಪ್ಪನವರ ಅವರ ಪ್ರಯತ್ನಗಳಿಂದ ಅರಿವು ಕೇಂದ್ರವು ಜನರಿಗೆ ಮಾಹಿತಿ ಮತ್ತು ಜ್ಞಾನ ಹಂಚುವ ಪರಿಣಾಮಕಾರಿ ಕೇಂದ್ರವಾಗಿ ರೂಪುಗೊಂಡಿದೆ.  

ಅತ್ಯುತ್ತಮ ಮಹಿಳಾ ಸ್ನೇಹಿ ಉಪಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹಾವೇರಿ ತಾಲೂಕಿನ ದೇವಗಿರಿ ಗ್ರಾಮ ಪಂಚಾಯತಿಗೆ ವಿಶೇಷ ಗೌರವ ನೀಡಲಾಯಿತು. ಮಹಿಳೆಯರ ಸಬಲೀಕರಣ, ಆರೋಗ್ಯ ಸ್ಥಾವಲಂಬನೆ ಮತ್ತು ಸುರಕ್ಷತೆಗಾಗಿ ಕೈಗೊಂಡ ಉಪಕ್ರಮಗಳು ಈ ಪಂಚಾಯತಿ ಮಾದರಿಯಾಗಿದೆ. 

ಸರ್ಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಕಾರ ನೀಡಿದ ಸರ್ಕಾರೇತರ ಸಂಸ್ಥೆಗಳನ್ನೂ ಗುರುತಿಸಲಾಯಿತು. ಬೆಂಗಳೂರು ಮೂಲದ ಶಿಕ್ಷಣ ಪೌಂಡೇಷನ್ ಸಂಸ್ಥೆಗೆ ಈ ಗೌರವ ಲಭಿಸಿದೆ. 

ಈ ಎಲ್ಲಾ ಪುರಸ್ಕಾರಗಳು ಗ್ರಾಮೀಣ ಆಡಳಿತದಲ್ಲಿ ಶ್ರಮಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಂಸ್ಥೆಗಳ ನಿಷ್ಠೆ ಸಮರೆ​‍್ಣ ಮತ್ತು ಕಾರ್ಯಕ್ಷಮತೆಯ ಪ್ರತಿಫಲವಾಗಿವೆ. ಇವು ಇತರರಿಗೆ ಪ್ರೇರಣೆಯಾಗಿ, ಇನ್ನಷ್ಟು ಉತ್ತಮ ಸೇವೆಯನ್ನು ನೀಡಲು ಉತ್ತೇಜನ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. 

ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ಅಂಗವಾಗಿ ನೀಡಲಾದ ಅತ್ಯುತ್ತಮ ಸೇವಾ ಪುರಸ್ಕಾರಗಳು ಗ್ರಾಮೀಣ ಅಭಿವೃದ್ಧಿಯ ದಿಕ್ಕಿನಲ್ಲಿ ಹೊಸ ಉತ್ಸಾಹವನ್ನು ತುಂಬಿದ್ದು, "ಗ್ರಾಮ ಸ್ವರಾಜ್ಯ'ದ ಕನಸನ್ನು ಸಾಕಾರಗೊಳಿಸುವತ್ತ ಮತ್ತೊಂದು ದೃಢ ಹೆಜ್ಜೆಯಾಗಿದೆ. 

ಕಾರ್ಯಕ್ರಮದಲ್ಲಿ ಗ್ರಾಮೀಣ ಅಭಿವೃದ್ಧಿ, ಪಾರದರ್ಶಕ ಆಡಳಿತ ಮತ್ತು ಜನಸೇವೆಯಲ್ಲಿ ಗುಣಮಟ್ಟ ಹೆಚ್ಚಿಸುವ ಬಗ್ಗೆ ವಿಚಾರ ವಿನಿಮಯ ನಡೆಯಿತು. 

ಕಾರ್ಯಕ್ರಮದಲ್ಲಿ ಉಪ ಕಾರ್ಯದರ್ಶಿ ಜಿ.ಪಂ. ಡಾ. ಪುನೀತ್, ಯೋಜನಾ ನಿರ್ದೇಶಕಿ ಶ್ರೀಮತಿ ರೇಖಾ ಡೊಳ್ಳಿನ ಸೇರಿದಂತೆ ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಹಾಗೂ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.