ರಾಷ್ಟ್ರಾಭಿವೃದ್ಧಿಯ ಶಿಕ್ಷಣ ನೀಡುತ್ತಿರುವ ನಾರಗೊಂಡ ಶಾಲೆ : ಶಾಸಕ ಸವದಿ

ರಾಷ್ಟ್ರಾಭಿವೃದ್ಧಿಯ ಶಿಕ್ಷಣ ನೀಡುತ್ತಿರುವ ನಾರಗೊಂಡ ಶಾಲೆ : ಶಾಸಕ ಸವದಿ Nargonda school imparting education for national development: MLA Savadi

       ಹಾರೂಗೇರಿ, 16 : ದೇಶದಲ್ಲಿಂದು ಉನ್ನತ ಶಿಕ್ಷಣ ಎಲ್ಲರಿಗೂ ಲಭ್ಯವಾಗುತ್ತಿದೆ. ಅಷ್ಟು ಮಾತ್ರ ಸಾಲದು. ಗುಣಮಟ್ಟದ, ಉದ್ಯೋಗಾವಕಾಶ ಒದಗಿಸುವ, ಕೌಶಲ್ಯ ಕಲಿಸುವ, ಉದ್ಯಮಶೀಲತೆ ಮತ್ತು ಸಾಂಸ್ಕೃತಿಕ ತಿಳಿವಳಿಕೆ ಜೊತೆಗೆ ರಾಷ್ಟ್ರೀಯ ಅಭಿವೃದ್ಧಿ ಆಲೋಚನೆ ಬೆಳೆಸುವ ಶಿಕ್ಷಣ ನೀಡುತ್ತಿರುವುದು ನಾರಗೊಂಡ ಶಾಲೆಯ ಹೆಗ್ಗಳಿಕೆಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. 

    ಪಟ್ಟಣದ ಹಾರೂಗೇರಿ ಕ್ರಾಸ್‌ನ ಎಸ್‌.ಎಮ್‌.ನಾರಗೊಂಡ ಇಂಟರ್ ನ್ಯಾಷನಲ್ ಸಿಬಿಎಸ್‌ಇ ಶಾಲೆ ಹಾಗೂ ವಿಜ್ಞಾನ ಪಿಯು ಕಾಲೇಜಿನಲ್ಲಿ ನಡೆದ ಚಿಗುರು-7 ಮತ್ತು ಸಾರ ದೈವಂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

  ನಾರಗೊಂಡ ಶಾಲೆ ಮಕ್ಕಳು ಬುದ್ಧಿವಂತರು ಎಂಬುದು ಪ್ರತಿ ವರ್ಷದ ಫಲಿತಾಂಶದಲ್ಲಿ ಸಾಬೀತಾಗುತ್ತಲೇ ಬಂದಿದೆ. ಇಲ್ಲಿನ ಶಾಲಾ ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತ ಬಂದಿರುವುದು ವಿಶೇಷ. ಇಲ್ಲಿ ಕಲಿಯುತ್ತಿರುವ ಮಕ್ಕಳ ಭವಿಷ್ಯ ಉಜ್ವಲವಾಗಲೆಂದು ಶಾಸಕ ಲಕ್ಷ್ಮಣ ಸವದಿ ಹಾರೈಸಿದರು.   

  ಸಾನಿಧ್ಯ ವಹಿಸಿದ್ದ ಮನಕವಾಡ ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡುತ್ತ ಮಠಗಳಿಗಿಂತ ಸಾಮಾಜಿಕ ಅಭಿವೃದ್ಧಿಗೆ ಒತ್ತು ನೀಡುವ ಶಿಕ್ಷಣ ಪ್ರಸ್ತುತ ಸಮಾಜಕ್ಕೆ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ನಾರಗೊಂಡ ಕುಟುಂಬದ ಕಾರ್ಯ ಶ್ಲಾಘನೀಯವಾದುದು ಎಂದರು. 

  ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಜನಪದ ಸಾಹಿತಿ ಸಿದ್ದಪ್ಪ ಬಿದರಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳು ನಡೆದವು. 

  ಜಿಲ್ಲಾ ಪಂಚಾಯತ ಮಾಜಿ ಸದಸ್ಯ, ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಶ್ರೀಶೈಲ ನಾರಗೊಂಡ, ಡಾ.ಗೀರೀಶ ನಾರಗೊಂಡ, ಗಣ್ಯರಾದ ವಿಠ್ಠಲರಾವ ಬಂತಿ, ಡಾ.ಎಲ್‌.ಎಸ್‌.ಜಂಬಗಿ, ಡಾ.ಸಂಜೀವ ಪಾಟೀಲ, ಡಾ.ಭರತೇಶ ಚೌಗಲಾ, ಡಾ.ಯಲ್ಲಾಲಿಂಗ ಸನಸನ್ನಿ, ಡಾ.ಸತೀಶ ಕಲ್ಲಟ್ಟಿ, ಪ್ರಾಚಾರ್ಯ ಪ್ರಶಾಂತ ಎಲ್‌.ಎಚ್‌., ಇ.ಜಿ.ದಿಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.  ಸಂಸ್ಥೆ ಅಧ್ಯಕ್ಷ ವಿವೇಕ ನಾರಗೊಂಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ಮುಗಳಖೋಡ ಕಾರ್ಯಕ್ರಮ ನಿರೂಪಿಸಿದರು.