ಸಂಸ್ಥೆಗೆ ಆಡಳಿತಾಧಿಕಾರಿ ನೇಮಕಕ್ಕೆ ನರೇಂದ್ರ ನೇರ್ಲಿಕರ ಒತ್ತಾಯ

ಸಂಸ್ಥೆಗೆ ಆಡಳಿತಾಧಿಕಾರಿ ನೇಮಕಕ್ಕೆ ನರೇಂದ್ರ ನೇರ್ಲಿಕರ ಒತ್ತಾಯ Narendra Nerlikar urges appointment of an administrator for the organization


ಚಿಕ್ಕೋಡಿ, 25 : ಪಟ್ಟಣದ ಶತಮಾನಕಂಡ ಸಿಟಿಇ ಶಿಕ್ಷಣ ಸಂಸ್ಥೆಯು ಪಿಟಿಆರ್ ಆಕ್ಟ ಪ್ರಕಾರ ನವೀಕರಣೆ ಮಾಡದೆ ಇರುವದರಿಂದ ಇದೀಗ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಸಂಸ್ಥೆಯ ಮಾಜಿ ನಿರ್ದೇಶಕರು ಮತ್ತು ಪುರಸಭೆ ಮಾಜಿ ಅಧ್ಯಕ್ಷ ನರೇಂದ್ರ ನೇರ್ಲಿಕರ ಒತ್ತಾಯಿಸಿದ್ದಾರೆ. 

ಪಟ್ಟಣದಲ್ಲಿನ ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನರೇಂದ್ರ ನೇರ್ಲಿಕರ ಅವರು, ಪಿಟಿಆರ್ ಆಕ್ಟ ಪ್ರಕಾರ ಸಂಸ್ಥೆಯ ನವೀಕರಣ ಪ್ರಕ್ರಿಯೆ ಕೈಗೊಳ್ಳದೆ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಹತ್ತನೆ ತರಗತಿ ಪರೀಕ್ಷೆ ಬರೆಯಲು ಸಮಸ್ಯೆ ಎದುರಾಗುತ್ತದೆ. ಸಂಸ್ಥೆಯ ಶಿಕ್ಷಕರಿಗೆ ವೇತನದ ಸಮಸ್ಯೆ ಉಲ್ಬನಗೊಳ್ಳಲಿದೆ ಹೀಗಾಗಿ ಕ್ಷಣವೇ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.ಸಿಟಿಇ ಸಂಸ್ಥೆಯನ್ನು ಹುಟ್ಟುಹಾಕಿ ಮುನ್ನಡೆಸುವಲ್ಲಿ ತಮ್ಮ ಅಜ್ಜಹಿತಂದೆ ಹಾಗೂ ತಮ್ಮ ಪಾತ್ರ ಅಪಾರವಾಗಿದೆ ಎಂದು ತಿಳಿಸಿದರು.

ಆದರೆ ಆಡಳಿತ ಮಂಡಳಿಯ ಕೆಲ ನಿರ್ದೇಶಕರು ಯಾವುದೇ ಪೂರ್ವ ಮಾಹಿತಿ ನೀಡದೇ, ಠರಾವು ಪಾಸು ಮಾಡಿ ನನ್ನನ್ನು ನಿರ್ದೇಶಕ ಸ್ಥಾನದಿಂದ ತೆಗೆದುಹಾಕಿರುವುದು ಸಂಪೂರ್ಣ ಅನ್ಯಾಯಕರ ಹಾಗೂ ನಿಯಮ ವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿದರು.ತಾವು ನಿರ್ದೇಶಕನಾಗಿದ್ದ ಅವಧಿಯಲ್ಲಿ ಸಂಸ್ಥೆಯಲ್ಲಿ ಬಿ.ಇಡಿ., ಡಿ.ಇಡಿ., ಬಿ.ಪಿ.ಎಡ್‌., ಸಿಬಿಎಸ್‌ಇ ಸೇರಿದಂತೆ ಹಲವು ಶೈಕ್ಷಣಿಕ ಕೋರ್ಸ್‌ಗಳನ್ನು ಆರಂಭಿಸಿ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದು ಹೇಳಿದರು.

ಸಂಸ್ಥೆಯ ಬೆಳವಣಿಗೆಗೆ ದುಡಿದವರನ್ನೇ ಇಂದು ಅಕ್ರಮವಾಗಿ ಹೊರಗಿಟ್ಟಿರುವುದು ನೋವುಂಟುಮಾಡಿದೆ ಎಂದರು.ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಕುಲಕರ್ಣಿ ಅವರೊಂದಿಗೆ ಉಂಟಾದ ಕೆಲವು ವೈಯಕ್ತಿಕ ಭಿನ್ನಾಭಿಪ್ರಾಯಗಳೇ ನನ್ನನ್ನು ನಿರ್ದೇಶಕ ಸ್ಥಾನದಿಂದ ತೆಗೆದುಹಾಕಲು ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ನನ್ನ ಮೇಲೆ ಕಾನೂನುಬಾಹಿರ ಚಟುವಟಿಕೆ ಆರೋಪ ಮಾಡಿದರೆ, ಯಾಕೆ ನನ್ನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. 

ಇತ್ತೀಚೆಗೆ ಡಾ.ಅಂಬೇಡ್ಕರ್ ಜನಜಾಗೃತಿ ವೇದಿಕೆ ನಡೆಸಿದ ಪತ್ರಿಕಾಗೋಷ್ಠಿ ಹಾಗೂ ಸಂಸ್ಥೆಯಲ್ಲಿ ನಡೆದ ಅವ್ಯವಹಾರ ಆರೋಪಗಳ ಹಿಂದೆ ನನ್ನ ಪಾತ್ರವಿದೆ ಎಂದು ಹಾಲಿ ನಿರ್ದೇಶಕ ಮಂಡಳಿ ನನ್ನ ಮೇಲೆ ಆರೋಪ ಮಾಡುತ್ತಿದೆ. ಆದರೆ ಆ ವೇದಿಕೆಯ ಹೇಳಿಕೆಗಳಿಗೆ ನನಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ ತೆಜೋವಧೆ ನಡೆಸುತ್ತಿರುವ ಸಿಟಿಇ ಸಂಸ್ಥೆಯ ಆಡಳಿತ ಮಂಡಳಿ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ನರೇಂದ್ರ ನೇರ್ಲಿಕರ ತಿಳಿಸಿದರು.