ಅಮೃತ-2 ಯೋಜನೆ ಕುರಿತು ತಪ್ಪುಮಾಹಿತಿ ಹಿ ನರಹರಿ ಕಟ್ಟಿ ಸ್ಪಷ್ಟನೆ

ಅಮೃತ-2 ಯೋಜನೆ ಕುರಿತು ತಪ್ಪುಮಾಹಿತಿ ಹಿ ನರಹರಿ ಕಟ್ಟಿ ಸ್ಪಷ್ಟನೆ Narahari Katti clarifies misinformation about Amrutha-2 project

ಅಮೃತ-2 ಯೋಜನೆ ಕುರಿತು ತಪ್ಪುಮಾಹಿತಿ ಹಿ ನರಹರಿ ಕಟ್ಟಿ ಸ್ಪಷ್ಟನೆ

ಶಿಗ್ಗಾವಿ 13 : ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಾಶ್ವತ ಕುಡಿಯುವ ನೀರಿನ ಯೋಜನೆ ಬಗ್ಗೆ ಇತ್ತೀಚೆಗೆ ಶಾಸಕ ಯಾಸೀರಖಾನ್ ಪಠಾಣ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ತಮ್ಮ ನಾಯಕತ್ವದಲ್ಲಿ ಶಿಗ್ಗಾವಿ, ಬಂಕಾಪೂರ ಹಾಗೂ ಸವಣೂರ ಪಟ್ಟಣಗಳಿಗೆ ಸುಮಾರು 361 ಕೋಟಿ ಮೌಲ್ಯದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ. ಮಾಧ್ಯಮ ವರದಿಗೆ ಪ್ರತಿಕ್ರಿಯೆ ನೀಡಿದ ಯುವ ಮುಖಂಡ ನರಹರಿ ಕಟ್ಟಿ ಶಾಸಕರ ಹೇಳಿಕೆಯು ಸಂಪೂರ್ಣ ಸತ್ಯವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಶಾಸಕರ ಪ್ರಕಾರ, ಈ ಯೋಜನೆ ಹೊಸದು ಅಲ್ಲ; ಇದು ಕೇಂದ್ರ ಸರ್ಕಾರದ ಅಮೃತ-2 ಯೋಜನೆಯ ಭಾಗವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಅರ್ಧಭಾಗದ ವೆಚ್ಚವನ್ನು ಹೊರುತ್ತವೆ. ಈ ಯೋಜನೆಗೆ ಸಂಬಂಧಿಸಿದ ಮೂಲ ಪ್ರಸ್ತಾವನೆ ಮತ್ತು ಮಂಜೂರಾತಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗಲೇ ನಡೆದಿತ್ತು. ಆ ಅವಧಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಸಹಕಾರದೊಂದಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿತ್ತು. ಅಖಂಡ ಕರ್ನಾಟಕದ ನಗರಗಳಿಗೆ ಸುಮಾರು 7200 ಕೋಟಿ ಅನುದಾನವನ್ನು ಬೊಮ್ಮಾಯಿ ಸರ್ಕಾರ ಒದಗಿಸಿತ್ತು. ಇದೀಗ ದೊರೆತಿರುವುದು ಕೇವಲ ಆಡಳಿತಾತ್ಮಕ ಅನುಮೋದನೆ ಮಾತ್ರ. ಮೂರು ಪಟ್ಟಣಗಳಲ್ಲಿ 25 ದಿನಗಳಿಗೊಮ್ಮೆ ಮಾತ್ರ ಕುಡಿಯುವ ನೀರು ಬರುತ್ತಿತ್ತು ಎಂಬುದು ಸಂಪೂರ್ಣ ಸುಳ್ಳು. 2008 ಪೂರ್ವದಲ್ಲಿ ಶಿಗ್ಗಾವಿಹಿಸವಣೂರ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇದ್ದದ್ದು ನಿಜ, ಆದರೆ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರಕ್ಕೆ ಬಂದ ನಂತರ ಆ ಜ್ವಲಂತ ಸಮಸ್ಯೆಯನ್ನು ಬಗೆಹರಿಸಿ ನೂರಾರು ಕೆರೆ, ಕಟ್ಟೆಗಳನ್ನು ತುಂಬಿಸಿ ಜನತೆಗೆ ಶಾಶ್ವತ ಪರಿಹಾರ ನೀಡಿದರು. ಕ್ಷೇತ್ರದ ಜನರು ಅವರನ್ನು ಅಧುನಿಕ ಭಗೀರಥ ಎಂದು ಕೊಂಡಾಡಿದ್ದಾರೆ.  ನರಹರಿ ಕಟ್ಟಿ ಅವರು ಮನವಿ ಮಾಡುತ್ತಾ ಜನಪ್ರತಿನಿಧಿಗಳು ನಿಖರ ಮಾಹಿತಿ ಹಂಚಿಕೊಳ್ಳುವುದು ಅತ್ಯಗತ್ಯ. ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಬದಲು, ಹಿಂದಿನ ಸರ್ಕಾರದ ಪ್ರಯತ್ನಗಳಿಗೂ ಗೌರವ ನೀಡುತ್ತಾ, ಯೋಜನೆಗಳ ನಿಜಸ್ವರೂಪವನ್ನು ಜನತೆಗೆ ತಲುಪಿಸಬೇಕು ಎಂದರು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ವಿಶ್ವನಾಥ ಹರವಿ, ಮುಖಂಡರಾದ ಶಿವಾನಂದ ಮ್ಯಾಗೇರಿ, ದೇವಣ್ಣ ಚಾಕಲಬ್ಬಿ, ಹೊನ್ನಪ್ಪ ಹೂಗಾರ ,ಶಿವಾನಂದ ಸೊಬರದ ಪಕ್ಷದ ಮುಖಂಡರು ಉಪಸ್ಥಿತರಿದ್ದರು.