91ನೇ ದಿನದ ಪರಿಸರ ಉಳಿಸಿ ಧರಣಿಗೆ ಎನ್‌ಕೆಪಿಎಂ ವಿದ್ಯಾರ್ಥಿಗಳ ಸಾಥ್ ಸುದೀರ್ಘ ಹೋರಾಟ ಮುಂದಿನ ಪೀಳಿಗೆ ಉಳುವಿಗಾಗಿ : ಶಿಕ್ಷಕಿ ರಂಗಮ್ಮ

91ನೇ ದಿನದ ಪರಿಸರ ಉಳಿಸಿ ಧರಣಿಗೆ ಎನ್‌ಕೆಪಿಎಂ ವಿದ್ಯಾರ್ಥಿಗಳ ಸಾಥ್ ಸುದೀರ್ಘ ಹೋರಾಟ ಮುಂದಿನ ಪೀಳಿಗೆ ಉಳುವಿಗಾಗಿ : ಶಿಕ್ಷಕಿ ರಂಗಮ್ಮ  NKPM students join 91st day of environmental protest, long struggle for the future generations: Tea


         ಕೊಪ್ಪಳ 30: ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಮೂಲಕ ಕಳೆದ 91 ದಿನಗಳಿಂದ ನಡೆಯುತ್ತಿರುವ ಕಾರ್ಖಾನೆ ತೊಲಗಿಸಿ ಜೀವ ಉಳಿಸಿ ಧರಣಿಗೆ ಎನ್‌.ಕೆ.ಪಿ.ಎಂ ಶಾಲೆಯ ವಿದ್ಯಾರ್ಥಿಗಳು ಬೆಂಬಲಿಸಿದರು. ಈ ವೇಳೆ ಶಿಕ್ಷಕಿ ರಂಗಮ್ಮ ಕೆ. ಮಾತನಾಡಿ, ನಮ್ಮ ಅಭಿವೃದ್ಧಿಯ ಹೆಸರಿನಲ್ಲಿ ಸ್ಥಾಪಿಸಿದ ಕೈಗಾರಿಕೆಗಳು ನಮ್ಮ ಜೀವಕ್ಕೆ ಬಾಧೆಯನ್ನುಂಟು ಮಾಡುತ್ತಿವೆ. ನಮಗೆ ಮೊದಲು ಜೀವ ಮತ್ತು ಆರೋಗ್ಯ ಉಳಿಯಬೇಕು. ಆನಂತರವಷ್ಟೇ ಅಭಿವೃದ್ಧಿ, ಉದ್ಯೋಗ ಕುರಿತು ಮಾತನಾಡೋಣ.

         ಈಗ ಕೊಪ್ಪಳಕ್ಕೆ ಸಂಕಷ್ಟ ತಂದಿರುವುದು ಪರಿಸರ ಮಾಲಿನ್ಯ. ಈ ಮಾಲಿನ್ಯ ಎಷ್ಟು ದೊಡ್ಡದು ಎಂದರೆ 50,000 ಜನಸಂಖ್ಯೆ ಇರುವ 20 ಹಳ್ಳಿಗಳು ಗಂಭೀರ ರೋಗರುಜಿನಗಳಿಂದ ಬಾಧಿತವಾಗಿವೆ. ಇದು ಗೊತ್ತಿದ್ದು ನಗರ ಪಕ್ಕದಲ್ಲಿ ಬಹುದೊಡ್ಡ ಹೂಡಿಕೆ ಮಾಡಿ ಮಾಲಿನ್ಯಕಾರಕ ಬಲ್ಡೋಟ ಕಾರ್ಖಾನೆ ಸ್ಥಾಪಿಸುವುದು ಎಷ್ಟು ಸರಿ. ಮತ್ತೆ ಇಲ್ಲಿನ ಲಕ್ಷಗಟ್ಟಲೆ ಜನರು ಪರಿಸರ ಮಾಲಿನ್ಯದಿಂದ ಬಾಧಿತವಾದರೆ ಅದಕ್ಕೆ ಯಾರು ಹೊಣೆ? ಅದರ ಒಂದು ಚಿಮಣಿಯೇ ಕೊಪ್ಪಳದ ಅರ್ಧ ಭಾಗ ಮಾಲಿನ್ಯ ಮಾಡಿದೆ. ಅದನ್ನು ಹಠಕ್ಕೆ ಬಿದ್ದು ಸ್ಥಾಪಿಸಿದರೆ ನಮ್ಮ ಆರೋಗ್ಯ ಉಳಿಯದು. ಮುಂದಿನ ಮಕ್ಕಳ ಭವಿಷ್ಯವಂತೂ ಇದರಿಂದ ಕತ್ತಲಾಗುತ್ತದೆ. ಆದ್ದರಿಂದ ನಾವೆಲ್ಲ ಹೋರಾಡಿ ಎಷ್ಟೇ ಕಷ್ಟವಾದರೂ ಇದನ್ನು ನಿಲ್ಲಿಸೋಣ. ಇಲ್ಲದಿದ್ದರೆ ಊರು ಬಿಟ್ಟು ಹೋಗಬೇಕಾಗುತ್ತದೆ ಎಂದರು. 

 ಶಿಕ್ಷಕ ಬಿ.ಎಂ. ನಿತಿನ್ ಮಾತಾಡಿ, ಕೊಪ್ಪಳ ಅತ್ಯಂತ ಶುಷ್ಕ ಹವಾಮಾನ ಇರುವ ನಗರ. ಈಗ ಧೂಳುಮಯವಾಗಿದೆ. ಮಕ್ಕಳು ಆದಿಯಾಗಿ ಪರಿಸರದ ಹಕ್ಕು ಕೇಳುವುದು ಇಲ್ಲಿನ ಅನಿವಾರ್ಯತೆಯಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳಾದ ಕೃಷ್ಣ, ಮಧು, ಜೋಯಾ ಪರಿಸರ ಜಾಗೃತಿ ಮಾಡೋಣ. ನಾವೆಲ್ಲರೂ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಡುವ ಅನಿವಾರ್ಯತೆ ಬಂದಿದೆ. ಇಲ್ಲಿನ ಹಿರಿಯರು ನಮ್ಮ ಭವಿಷ್ಯದ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಇವರಿಗೆ ನಾವು ವಿಧೇಯರಾಗಿರೋಣ ಎಂದರು.  ಪರಿಸರ ಜಾಗೃತಿ ಗೀತೆಯನ್ನು ವಿದ್ಯಾರ್ಥಿಗಳಾದ ಮಿಶ್ಬಾ, ಅರ​‍್ಿತಾ, ಮಧು, ಕೃಷ್ಣ ಮತ್ತು ಶ್ವೇತಾ ಹಾಡಿದರು.

         ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಎ.ಎಂ. ಮದರಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಎಸ್‌.ಬಿ. ರಾಜೂರು, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಕಾರ್ಮಿಕ ನೀರೀಕ್ಷಕ ಶಾಂತಯ್ಯ ಅಂಗಡಿ, ಮಹದೇವಪ್ಪ ಮಾವಿನಮಡು, ವಿಜಯ ಮಹಾಂತೇಶ್ ಹಟ್ಟಿ, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಡಿ.ಎಂ.ಬಡಿಗೇರ, ಚಾರಣ ಬಳಗದ ಸಿ.ಬಿ. ಪಾಟೀಲ್,  ಮಂಜುನಾಥ ಕವಲೂರು, ಗವಿಸಿದ್ದಪ್ಪ ತುಮ್ಮರಗುದ್ಧಿ, ಪಂಪಣ್ಣ ಚಿಂತಪಲ್ಲಿ, ರತ್ನಮ್ಮ ಪುರಾಣಿಕಮಠ, ಪದ್ಮಾವತಿ ದಸ್ತೇನವರ್, ರಮೇಶ ಪಿ.ಬಿ, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು, ಯಮನೂರ​‍್ಪ ಹಳ್ಳಿಕೇರಿ, ಹಾಗೂ ಎನ್ಕೆಪಿಎಂ ಶಾಲೆಯ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡರು.