ಎನ್.ಆರ್.ಎಲ್.ಎಮ್. ಕಾರ್ಯಾಗಾರಕ್ಕೆ ಸಿಇಓ ಕಾಂದೂ ಚಾಲನೆ
ಕಾರವಾರ 22 :- ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕಾರ್ಯಕ್ರಮದಡಿ ಬಹುತೇಕ ಗ್ರಾಮೀಣ ಮಹಿಳೆಯರನ್ನು ರಾಷ್ಟ್ರೀಯ ಜೀವನೋಪಾಯ ಅಭಿಯಾನದ ವ್ಯಾಪ್ತಿಗೆ ಒಳಪಡಿಸಿ ಅವರುಗಳ ಸಮಗ್ರ ಏಳಿಗೆಗೆ ಶ್ರಮಿಸಲಾಗುತ್ತಿದೆ. ಸ್ವ ಸಹಾಯ ಗುಂಪುಗಳ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ವಿನೂತನ ಚಟುವಟಿಕೆಗಳನ್ನು ಕೈಗೊಳ್ಳಲು ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ತಿಳಿಸಿದರು.
ಅವರು ಬುಧವಾರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಎಲ್ಲ ತಾಲೂಕು ಸಿಬ್ಬಂದಿಗಳಿಗೆ ಆಯೋಜಿಸಲಾಗಿದ್ದ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಜೀವಿನಿ ರಾಜ್ಯ ಅಭಿಯಾನ ಘಟಕದಿಂದ ಗ್ರಾಮ ಪಂಚಾಯತ್ ಒಕ್ಕೂಟಗಳಿಗೆ ಬಿಡುಗಡೆಯಾಗುವ ಅನುದಾನದ ಸಮರ್ಕ ಬಳಕೆ ಮತ್ತು ಮೇಲ್ವಿಚಾರಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಶಿಬಿರಾರ್ಥಿಗಳಿಗೆ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿಯ ಯೋಜನಾಧಿಕಾರಿ ಕರೀಂ ಅಸದಿ ಮಾತನಾಡಿ, ಹಣಕಾಸು ಮತ್ತು ಲೆಕ್ಕ ಪುಸ್ತಕ ನಿರ್ವಹಣೆ, ಸಾಂಸ್ಥಿಕ ಬಲವರ್ಧನೆ, ಕೃಷಿ ಮತ್ತು ಕೃಷಿಯೇತರ ಜೀವನೋಪಾಯ ಚಟುವಟಿಕೆ ಸೇರಿದಂತೆ ಇನ್ನಿತರೆ ಪ್ರಮುಖ ವಿಷಯಗಳ ಕುರಿತು ನಡೆಯಲಿರುವ ಎರಡು ದಿನಗಳ ಕಾರ್ಯಾಗಾರದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ, ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಯೋಜನಾಧಿಕಾರಿ ಕೃಷ್ಣ ಶಾಸ್ತ್ರಿ, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಿಡಾಕ್ ಉಪನಿರ್ದೇಶಕ ಶಿವಾನಂದ ಯಲಿಗಾರ, ಆರ್ಸೆಟಿ ಕುಮಟಾದಿಂದ ಪ್ರಶಾಂತ್ ನಾಯ್ಕ್, ಲೀಡ್ ಬ್ಯಾಂಕ್ ಪ್ರತಿನಿಧಿ ನಾಗರಾಜ ಶೆಟ್ಟಿ ಸೇರಿದಂತೆ ಇನ್ನಿತರೆ ಪ್ರಮುಖರು ಉಪಸ್ಥಿತರಿದ್ದರು.