ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾಗಳು ನಿರ್ಮಾಣವಾಗಬೇಕು-ಸಿಎಂ

ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾಗಳು ನಿರ್ಮಾಣವಾಗಬೇಕು-ಸಿಎಂ Movies that give a good message to society should be produced - CM


ಹಾವೇರಿ 04 : ಸಿನಿಮಾ ಹೆಚ್ಚು ಪ್ರಭಾವ ಇರುವ, ಸಮಾಜದ ಮೇಲೆ ಹೆಚ್ಚು ಪರಿಣಾಮ ಬೀರುವ ಮಾಧ್ಯಮ. ಸಾಮಾಜಿಕ ಕಳಕಳಿ ಇರುವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾಗಳು ಹೆಚ್ಚು ಹೆಚ್ಚು ನಿರ್ಮಾಣವಾಗಬೇಕು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಿಳಿಸಿದರು.  ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಮುಕ್ತ ವಿಶ್ವದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ 2018 ಮತ್ತು 2019 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೈಸೂರನ್ನು ಸಾಂಸ್ಕೃತಿಕ ನಗರಿ ಎಂದು ಕರೆಯಲಾಗುತ್ತದೆ. ಇಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಅತೀವ ಸಂತೋಷ ಆಗಿದೆ.  

ನಮ್ಮ ಸರ್ಕಾರ ಕನ್ನಡ ಚಲನಚಿತ್ರ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಹಾಗೂ ಸಹಾಯಧನ ನೀಡುವ ಮೂಲಕ ಚಲನ ಚಿತ್ರ ಬೆಳವಣಿಗೆಗೆ ಸಹಕರಿಸುತ್ತದೆ.  ಚಲನ ಚಿತ್ರ ನಟ ನಟಿಯರು ಪರದೆಯ ಮೇಲೆ ಇರುವ ಹಾಗೆಯೇ ತಮ್ಮ ನಿಜ ಜೀವನದಲ್ಲೂ ಉತ್ತಮ ಅಂಶಗಳೊಂದಿಗೆ ನಡೆದುಕೊಳ್ಳಬೇಕು. ಚಲನ ಚಿತ್ರ ನಟ ನಟಿಯರು ಸಮಾಜಕ್ಕೆ ಮಾದರಿಯಾಗಿ ಇರಬೇಕು. ಮೈಸೂರು ನಗರದಲ್ಲಿ ಚಿತ್ರ ನಗರಿ ಮಾಡಲು 160 ಎಕರೆ ಪ್ರದೇಶವನ್ನು ಈಗಾಗಲೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನೀಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಡಿ ಪಿ ಆರ್ ಪೂರ್ಣವಾಗುತ್ತದೆ. ಹೈದರಾಬಾದ್ ನಲ್ಲಿ ಇರುವ ರಾಮೋಜಿರಾವ್ ಫಿಲ್ಮ್‌ ಸಿಟಿ ತರವೇ ಇಲ್ಲಿಯೂ ಚಿತ್ರ ನಗರಿ ನಿರ್ಮಾಣ ಆಗುತ್ತದೆ ಎಂದು ತಿಳಿಸಿದರು.  2018 ಮತ್ತು 2019 ಸಾಲಿನ ಪ್ರಶಸ್ತಿ ಪಡೆದ ಚಿತ್ರಗಳ ಕುರಿತ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. 2018 ಮತ್ತು 2019 ನೇ ಸಾಲಿನಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದರಿಗೆ ಸನ್ಮಾನ ಮಾಡಲಾಯಿತು.  

ಕಾರ್ಯಕ್ರಮದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಸುನೀಲ್ ಬೋಸ್, ಶಾಸಕರಾದ ಕೆ ಹರೀಶ್ ಗೌಡ, ಡಿ ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ ತಿಮ್ಮಯ್ಯ, ಸಿ ಎನ್ ಮಂಜೇಗೌಡ, ಕೆ ಶಿವಕುಮಾರ್ , ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮರಿಸ್ವಾಮಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ರಂಗಸ್ವಾಮಿ, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಬಿ ಬಿ ಕಾವೇರಿ, ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಹಾಗೂ ಕಲಾವಿದರಾದ ಸಾಧುಕೋಕಿಲ, ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿಯ ಅಧ್ಯಕ್ಷರಾದ ನರಸಿಂಹುಲು, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎಸ್ ಯುಕೇಶ್ ಕುಮಾರ್,  ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಷ್ಣುವರ್ಧನ್  ಅವರು ಸೇರಿದಂತೆ ಪ್ರಶಸ್ತಿ ಪುರಸ್ಕೃತರು, ಸಿನಿಮಾ ಕಲಾವಿದರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳು, ಸಿನಿಮಾಭಿಮಾನಿಗಳು ಉಪಸ್ಥಿತರಿದ್ದರು.