ವ್ಯಕ್ತಿತ್ವ ವಿಕಸನಕ್ಕೆ ಮಾತೃ ಭಾಷೆ ಅತ್ಯವಶ್ಯ: ಪ್ರೊ. ಪಾಟೀಲ

ವ್ಯಕ್ತಿತ್ವ ವಿಕಸನಕ್ಕೆ ಮಾತೃ ಭಾಷೆ ಅತ್ಯವಶ್ಯ: ಪ್ರೊ. ಪಾಟೀಲ Mother tongue is essential for personality development: Prof. Patil

ವ್ಯಕ್ತಿತ್ವ ವಿಕಸನಕ್ಕೆ ಮಾತೃ ಭಾಷೆ ಅತ್ಯವಶ್ಯ: ಪ್ರೊ. ಪಾಟೀಲ 

ಬೆಳಗಾವಿ 11: ನಾವು ರಾಷ್ಟ್ರದ ಎಲ್ಲ ಭಾಷೆಗಳನ್ನು ಪ್ರೀತಿಸಬೇಕು, ಗೌರವಿಸಬೇಕು. ಮಾತೃಭಾಷೆ ಮೇಲಿನ ಆಳವಾದ ಪ್ರೀತಿ, ಗೌರವ ಮತ್ತು ಬದ್ಧತೆ ನಮ್ಮ ವ್ಯಕ್ತಿತ್ವ ವಿಕಸನಕ್ಕೆ, ಬೌದ್ಧಿಕ ಬೆಳವಣೆಗೆಗೆ ಮತ್ತು ಸೃಜನಶೀಲತೆಗೆ ಉತ್ತೇಜ ನೀಡುತ್ತದೆ. ಯಾವುದೇ ಭಾಷೆಯವರೇ ಇರಲಿ, ಕರ್ನಾಟಕದಲ್ಲಿ ವಾಸಿಸುತ್ತಿರುವ ಎಲ್ಲರೂ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡಲೇಬೇಕು ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರಂಬಳ ಮುಖ್ಯೋಪಾಧ್ಯಾಯ ಭೈರು ಪಾಟೀಲ ಹೇಳಿದರು.  

ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಸಂಘಟನೆಯವರು ದಿ. 10 ಬುಧವಾರದಂದು ಖಾನಾಪುರ ತಾಲೂಕಿನ ಕರಂಬಳ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡೇತರ ಭಾಷೆಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕನ್ನಡ ವಾಚನ ಸ್ಪರ್ಧೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಇಂಗ್ಲೀಷ ಮತ್ತು ಮರಾಠಿ ಮಾಧ್ಯಮದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು  

ನಿರ್ಣಾಯಕರಾಗಿ ಆಗಮಿಸಿದ್ದ ಬೆಳಗಾವಿಯ ಗೋಗಟೆ ಇಂಜನಿಯರಿಂಗ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರ ಡಾ. ಜಯಂತ ಕಿತ್ತೂರ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ ಜೀವನದಲ್ಲಿ ನಿಮ್ಮ ಆಯ್ಕೆ ಉನ್ನತ ಮಟ್ಟದ್ದಿರಬೇಕು. ಅದನ್ನು ಪಡೆಯಲು ನೀವು ಸತತ ಅಭ್ಯಾಸ ಮಾಡಬೇಕಾಗುತ್ತದೆ. ಆ ಕುರಿತಂತೆ ಶ್ರಮ ಪಟ್ಟಾಗ ಮಾತ್ರ ನಿಮ್ಮ ಕನಸು ನನಸಾಗಲು ಸಾಧ್ಯ ಎಂಬುದನ್ನು ಮಕ್ಕಳಿಗೆ ತಿಳಿಯುವಂತೆ ಮೊಬೈಲ್ ಉದಾಹರಣೆಯೊಂದಿಗೆ ತುಂಬ ಸ್ವಾರಸ್ಯಕರವಾಗಿ ಮಕ್ಕಳಿಗೆ ತಿಳಿಸಿ ಹೇಳಿದರು. 

ಇನ್ನೊರ್ವ ನಿರ್ಣಾಯಕ ಖಾನಾಪುರದ ಮರಾಠಾ ಮಂಡಲ ಇಂಜನೀಯರಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಬಸವರಾಜ ಹಮ್ಮಣ್ಣವರ ಮಾತನಾಡುತ್ತ ಕನ್ನಡ ಭಾಷಾ ಜ್ಞಾನವನ್ನು ಹೆಚ್ಚಿಸುವುದಕ್ಕಾಗಿ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಭಾಷೆಯನ್ನು ಕೇವಲ ಪರೀಕ್ಷೆಯ ದೃಷ್ಟಿಯಿಂದ ಓದದೇ ಜ್ಞಾನಾರ್ಜನೆಗಾಗಿ ಓದಬೇಕು ಎಂದು ಹೇಳಿದರು. 

ಈ ಕನ್ನಡ ವಾಚನ ಸ್ಪರ್ಧೆಯಲ್ಲಿ 18 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಮಾನಸ್ವಿ ಮಾರುತಿ ದೇವಲ್ಕರ್(ಪ್ರಥಮ), ತನಿಷ್ಕಾ ಯಲ್ಲಪ್ಪ ಗುರುವ(ದ್ವಿತೀಯ) ಮತ್ತು ಶ್ರೀನಿಧಿ ಗಣೇಶ ಹಳ್ಯಾಳಕರ (ತೃತೀಯ) ಬಹುಮಾನ ಪಡೆದರು.  

ಕನ್ನಡ ಶಿಕ್ಷಕಿ ಎಸ್‌. ಡಿ. ಮೇತ್ರಿಯವರನ್ನು ಶಾಲು ಹೊದಸಿ ಸನ್ಮಾನಿಸಿ ಗೌರವಿಸಲಾಯಿತು. ಖಾನಾಪುರ ತಾಲೂಕ ಲೈನ್ಸ ಕ್ಲಬ್ ಅಧ್ಯಕ್ಷ ವಿಕಾಸ ಕಲ್ಯಾಣಿ, ಅಜಿತ ಪಾಟೀಲ, ರವಿ ಸಾಗರ ಉಪ್ಪಿನ ಮುಂತಾದ ಗಣ್ಯರು ಉಪಸ್ಥಿತರಿದ್ದರು.  

ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎನ್‌.ಬಿ. ದೇಶಪಾಂಡೆ, ಕಾರ‌್ಯದರ್ಶಿ ಗುಂಡೇನಟ್ಟಿ ಮಧುಕರ, ಶಾಶ್ವತ ಸದಸ್ಯ ಜಯಂತ ಜೋಶಿ ಮಾತನಾಡಿದರು. ಭಾರತಿ ವಡವಿ ನಿರೂಪಿಸಿದರು.