ಚಳಿಗಾಲದ ಬದಲು ಮುಂಗಾರು ಅಧಿವೇಶನ
Monsoon session instead of winter session
ಬೆಂಗಳೂರು: ವಿಧಾನಮಂಡಲದ ಚಳಿಗಾಲದ ಅಧಿವೇಶನ ಬದಲು ಮುಂಗಾರು ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಕಾರ್ಯಕ್ರಮಗಳು, ಮದುವೆ ಇತ್ಯಾದಿ ಕಾರಣಗಳಿಂದ ಬೆಳಗಾವಿಯಲ್ಲಿ ಲಾಡ್ಜ್, ಹೊಟೇಲ್ಗಳು ಬುಕ್ ಆಗಿರುತ್ತವೆ. ಶಾಸಕರಿಗೂ ಇದೇ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ಅಧಿವೇಶನ ನಡೆಸಬೇಕೆಂಬ ಚರ್ಚೆ ನಡೆಯುತ್ತಿದೆ. ಆದರೆ, ಪ್ರತಿಭಟನೆಯನ್ನು ತಡೆಯಬೇಕೆಂಬ ಉದ್ದೇಶದಿಂದ ಅಲ್ಲ. ಪ್ರತಿಭಟನೆಗಳು ಪ್ರಜಾಪ್ರಭುತ್ವದ ಸೌಂದರ್ಯ ಎಂದು ಅಭಿಪ್ರಾಯಪಟ್ಟರು.
ಈ ಅಧಿವೇಶನದಲ್ಲಿ ಒಟ್ಟು 23 ವಿಧೇಯಕಗಳನ್ನು ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ. ಉತ್ತರ ಕರ್ನಾಟಕದ ಚರ್ಚೆಯಲ್ಲಿ 39 ಸದಸ್ಯರು ಸುಮಾರು 17 ಗಂಟೆ 2 ನಿಮಿಷ ಮಾತನಾಡಿದ್ದಾರೆ. 22 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ. 1974 ಲಿಖಿತ ಪ್ರಶ್ನೆಗಳ ಪೈಕಿ 1750 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಸದನದಲ್ಲಿ ಉತ್ತರಿಸಬೇಕಾದ 135 ಪ್ರಶ್ನೆಗಳ ಪೈಕಿ 134ಕ್ಕೆ ಉತ್ತರ ಒದಗಿಸಲಾಗಿದೆ. 368 ಗಮನ ಸೆಳೆಯುವ ಸೂಚನೆಗಳ ಪೈಕಿ 228ಕ್ಕೆ ಉತ್ತರ ನೀಡಲಾಗಿದೆ. 7 ನಿರ್ಣಯಗಳು ಅಂಗೀಕಾರಗೊಂಡಿವೆ ಎಂದು ತಿಳಿಸಿದರು.
ಈ ಬಾರಿಯ ಕಲಾಪವನ್ನು ಒಟ್ಟು 30,010 ಜನರು ವೀಕ್ಷಣೆ ಮಾಡಿದ್ದಾರೆ. ಈ ಪೈಕಿ 14462 ಶಾಲಾ ವಿದ್ಯಾರ್ಥಿಗಳಾಗಿದ್ದು, ಅವರೆಲ್ಲರಿಗೂ ಉತ್ತಮ ಅವಕಾಶ ಕಲ್ಪಿಸಲಾಗಿದೆ. ಜಗತ್ತಿನ ಎರಡನೇ ಅತಿದೊಡ್ಡ ಧ್ವಜವನ್ನು ಈ ಸಂದರ್ಭದಲ್ಲಿ ಅನಾವರಣ ಮಾಡಿದ್ದೇವೆ ಎಂದು ಸ್ಪೀಕರ್ ಹೇಳಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಪ್ಪು ಉತ್ತರ ನೀಡಿದ್ದರಿಂದ ಸದನವನ್ನು ತಪ್ಪು ದಾರಿಗೆ ಎಳೆದಂತಾಗಲಿಲ್ಲವೇ ಎಂಬ ಪ್ರಶ್ನೆಗೆ, ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂಬ ಕಾರಣಕ್ಕೇ ಅವರು ಮರುದಿನ ಸದನದಲ್ಲಿ ಕ್ಷಮೆ ಹಾಗೂ ವಿಷಾದ ವ್ಯಕ್ತಪಡಿಸಿಲ್ಲವೇ ಎಂದು ಪ್ರಶ್ನಿಸಿದರು.
ದ್ವೇಷಭಾಷಣ ವಿಧೇಯಕ ಅಂಗೀಕಾರ ಸಂದರ್ಭದಲ್ಲಿ ನಾನು ಗಡಿಬಿಡಿ ಮಾಡಿಲ್ಲ, ಚರ್ಚೆಯನ್ನು ಮೊಟಕೂ ಮಾಡಿಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷಗಳು ಬಯಸಿದ ರೀತಿಯಲ್ಲಿ ನಾನು ಸುದೀರ್ಘ ಚರ್ಚೆಗೆ ಅವಕಾಶ ಕಲ್ಪಿಸಿದ್ದೆ. ಆದರೆ, ಸಚಿವರೊಬ್ಬರು ನೀಡಿದ ಹೇಳಿಕೆಯನ್ನು ಮುಂದಿಟ್ಟುಕೊಂಡು ಹಿಂದಿನ ಸಾಲಿನಲ್ಲಿ ಕುಳಿತಿದ್ದ ಬಿಜೆಪಿ ಶಾಸಕರು ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ವಿಪಕ್ಷ ನಾಯಕರು ಚರ್ಚೆ ನಡೆಸುತ್ತಿರುವಾಗ ಶಾಸಕರು ಈ ರೀತಿ ಮಾಡುವುದು ಸಮಂಜಸವೇ? ಎಂದು ಪ್ರಶ್ನಿಸಿದರು.
ವಿಧೇಯಕದ ಬಗ್ಗೆ ಚರ್ಚೆ ಮಾಡಲೇಬೇಕೆಂಬ ಮನಸ್ಸಿದ್ದರೆ ಅವರು ವಿಪಕ್ಷ ನಾಯಕರ ಚರ್ಚೆಗೆ ಅವಕಾಶ ನೀಡಬೇಕಿತ್ತು. ಪ್ರತಿಭಟನೆ ನಡೆಸುವುದಿದ್ದರೂ ಹಿರಿಯ ಶಾಸಕರು ಹಾಗೂ ನಾಯಕರ ಅಭಿಪ್ರಾಯ ಕೇಳಿ ವ್ಯವಸ್ಥಿತ ರೀತಿಯಲ್ಲಿ ಮಾಡಬೇಕಿತ್ತು. ನಾನು ಈ ವಿಚಾರದಲ್ಲಿ ಗಡಿಬಿಡಿ ಮಾಡಿಲ್ಲ. ನಿಯಮದಂತೆ ನಡೆದುಕೊಂಡಿದ್ದೇನೆ ಎಂದು ಖಾದರ್ ಸ್ಪಷ್ಟಪಡಿಸಿದರು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 