ದುಡ್ಡಿನಿಂದಲೇ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ: ಗೋಸಾವಿ ಪೀಠದ ಮಂಜುನಾಥ ಸ್ವಾಮಿಗಳು

 ದುಡ್ಡಿನಿಂದಲೇ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ: ಗೋಸಾವಿ ಪೀಠದ ಮಂಜುನಾಥ ಸ್ವಾಮಿಗಳು Money alone cannot buy everything: Manjunatha Swami of Gosavi Peeth

                        ಮುಂಡಗೋಡ 14:  ಪಟ್ಟಣದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಶನಿವಾರ ಛತ್ರಪತಿ ಶಿವಾಜಿ ಕೋ-ಆಪ್ ಕ್ರೆಡಿಟ್ ಸೊಸೈಟಿ ನಿ.ದ ರಜತ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ ಮಾನೆ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯನ್ನು ಸ್ಥಾಪಿಸುವುದು ದೊಡ್ಡ ವಿಷಯವಲ್ಲ, ಆದರೆ ಅದನ್ನು ಯಶಸ್ವಿಯಾಗಿ ಬೆಳೆಸಿಕೊಂಡು ಹೋಗುವುದು ದೊಡ್ಡ ಸವಾಲು ಎಂದು ಹೇಳಿದರು. ಸೊಸೈಟಿ ಜನಸಾಮಾನ್ಯರ ಆರ್ಥಿಕ ಬೆಳವಣಿಗೆಗೆ ಮಹತ್ವದ ಪಾತ್ರ ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.

                        ಗೋಸಾವಿ ಪೀಠದ ಮಂಜುನಾಥ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸೊಸೈಟಿ ಸಮಾಜದ ಎಲ್ಲಾ ವರ್ಗದ ಜನರಿಗೆ ಸಹಾಯ ಮಾಡುತ್ತಾ ಬಂದಿರುವುದು ಅಭಿನಂದನೀಯ ಎಂದು ಹೇಳಿದರು. ಮಾನವ ಜೀವನದಲ್ಲಿ ಹಣಕ್ಕೆ ತನ್ನದೇ ಆದ ಮಹತ್ವವಿದ್ದರೂ, ದುಡ್ಡಿನಿಂದಲೇ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ಸಾಧಿಸದ ಜೀವನ ವ್ಯರ್ಥ. ಧನವೇ ಸರ್ವಸ್ವ ಎಂದು ಭಾವಿಸುವವರು ಅಧಮರು ಮಾನವೀಯತೆ ಮತ್ತು ಮೌಲ್ಯಗಳನ್ನು ಗೌರವಿಸುವವರೇ ನಿಜವಾದ ಉತ್ತಮರು ಎಂದು ಗೋಸಾವಿ ಪೀಠದ ಮಂಜುನಾಥ ಸ್ವಾಮಿಗಳು ತಿಳಿಸಿದರು. ಸೊಸೈಟಿ ಅಧ್ಯಕ್ಷ ಎಲ್‌.ಟಿ. ಪಾಟೀಲ ಮಾತನಾಡಿ, ನಮ್ಮ ತಾಲೂಕಿನಲ್ಲಿ ಮರಾಠಾ ಸಮುದಾಯದ ಜನಸಂಖ್ಯೆ ಅತ್ಯಧಿಕವಾಗಿದೆ.

                       ಸಮುದಾಯದ ಹಿರಿಯರ ಬಹುದಿನಗಳ ಕನಸಾಗಿ, ಕುಲಬಾಂಧವರ ಪರಸ್ಪರ ಸಹಕಾರದೊಂದಿಗೆ 2000ನೇ ಇಸವಿಯಲ್ಲಿ ಈ ಸೊಸೈಟಿಯನ್ನು ಸ್ಥಾಪಿಸಲಾಯಿತು. ಆರಂಭಿಕ ದಿನಗಳಲ್ಲಿ ಅನೇಕ ಸವಾಲುಗಳು ಎದುರಾದರೂ, ಜಿಲ್ಲಾ ಮಧ್ಯವರ್ತಿ ಬ್ಯಾಂಕ್ನ ಅಮೂಲ್ಯ ಸಹಕಾರದಿಂದ ಸೊಸೈಟಿ ಕ್ರಮೇಣ ಪ್ರಗತಿಯ ಹಾದಿ ಹಿಡಿಯಿತು. ಪ್ರಸಕ್ತ ಸಾಲಿನಲ್ಲಿ ಸೊಸೈಟಿ ರೂ. 12 ಕೋಟಿ 6 ಲಕ್ಷ ಲಾಭ ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಇದು ಸದಸ್ಯರ ನಂಬಿಕೆ, ಆಡಳಿತ ಮಂಡಳಿಯ ಪರಿಶ್ರಮ ಹಾಗೂ ಸಿಬ್ಬಂದಿಯ ಶ್ರದ್ಧಾಪೂರ್ಣ ಕಾರ್ಯದ ಫಲವಾಗಿದೆ ಎಂದು ಹೇಳಿದರು. ಜಿ.ಎಚ್‌.ಮರಿಯೋಜಿರಾವ್, ರಾಜ್ಯ ಸರಕಾರದ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ರವರು ಮಾತನಾಡಿದರು. ಎಲ್‌.ಟಿ. ಪಾಟೀಲ ಸ್ವಾಗತಿಸಿದರು. ಮೇಘನಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು.

                      ಗೋಪಾಲ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.ಇಶಾ ಬೆಣ್ಣೆ ಭರತನಾಟ್ಯ ಪ್ರದರ್ಶಿಸಿದರು. ಇದೇ ವೇಳೆ ಸ್ವಾಮೀಜಿಗಳನ್ನು ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಾನಂದ ಸ್ವಾಮಿಗಳು, ವಿಧಾನ ಪರಿಷತ್ ಸದಸ್ಯ ಡಾ. ಎಂ.ಜಿ. ಮುಳೆ, ಪಿ.ಜಿ. ಪಾಟೀಲ, ವಿಜಯಕುಮಾರ ಭೋಸ್ಥೆ, ಯಲ್ಲಪ್ಪ ಕಿತ್ತೂರ, ರಾಜು ಗೌಳಿ, ಗಣೇಶಪ್ಪ ಕೋಡಿಹಳ್ಳಿ, ಉಪಾಧ್ಯಕ್ಷ ಕೆ.ಎಫ್‌. ಪುರದವರ, ಎಂ.ಸಿ. ಕಲಾಲ, ಜಾನದೇವ ಗುಡಿಯಾಳ, ಎನ್‌.ಡಿ. ಕಿತ್ತೂರ, ನಾಗರಾಜ ಬೆಣ್ಣಿ, ಶ್ರೀಧರ ಡೋರಿ, ಡಿ.ಎಫ್‌. ಮಡ್ಲಿ, ಡಿ.ಎಫ್‌. ಬಾಳಮ್ಮನವರ, ಬಸವರಾಜ ಆಸ್ತಕಟ್ಟಿ, ಅನಸಮ್ಮ, ಸೊಸೈಟಿಯ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕ ದಶರಥ ಸಾಳುಂಕೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.