ಗ್ರಾಮೀಣ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕಾ ಸೌಲಭ್ಯ

ಗ್ರಾಮೀಣ ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕಾ ಸೌಲಭ್ಯ Modern learning facilities for rural students

ಲೋಕದರ್ಶನ ವರದಿ 

 ಕಾಗವಾಡ, ಜು. 04: ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಡಿಜಿಟಲ್ ಶಿಕ್ಷಣ ಒದಗಿಸುವ ಉದ್ದೇಶದಿಂದ ಕಾಗವಾಡ ತಾಲೂಕಿನ ಶೇಡಬಾಳದ ಸನ್ಮತಿ ವಿದ್ಯಾಲಯದಲ್ಲಿ ಎಲ್ಲಾ 9 ತರಗತಿ ಕೊಠಡಿಗಳನ್ನು ಸ್ಮಾರ್ಟ್‌ ಕ್ಲಾಸ್‌ಗಳಾಗಿ ಅಭಿವೃದ್ಧಿಪಡಿಸಿ, ಡಿಜಿಟಲ್ ಬೋರ್ಡ್‌ಗಳ ಉದ್ಘಾಟನೆ ನೆರವೇರಿತು.  

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಂಕಲಿಯ ಗೊಮ್ಮಟೇಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ಎನ್‌.ಎ. ಮಗದುಮ್ಮ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ನಗರ ಮಟ್ಟದ ಶಿಕ್ಷಣ ಸೌಲಭ್ಯ ದೊರೆಯಬೇಕು. ದಾನಿಗಳ ಸಹಕಾರದಿಂದ ಶಾಲೆಯನ್ನು ಸಂಪೂರ್ಣ ಸ್ಮಾರ್ಟ್‌ ಶಾಲೆಯನ್ನಾಗಿ ರೂಪಿಸಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.  

ಸಾಂಗಲಿಯ ಉದ್ಯಮಿ ಶಾಂತಿನಾಥ ಪಾಲಗೌಡರ ಕುಟುಂಬದ ಸಹಕಾರದಿಂದ ಶಾಲೆಯ 9 ತರಗತಿ ಕೊಠಡಿಗಳಿಗೆ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕಾ ವಾತಾವರಣ ಕಲ್ಪಿಸಲಾಗಿದೆ.  

ಕಾರ್ಯಕ್ರಮದಲ್ಲಿ ಅತಿಥಿಗಳು ಸ್ಮಾರ್ಟ್‌ ಕ್ಲಾಸ್‌ಗಳ ಉದ್ಘಾಟನೆ ನಡೆಸಿದರು. ಬಳಿಕ ನಡೆದ ಸಮಾರಂಭದಲ್ಲಿ ದಾನಿಗಳನ್ನು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಲು ಶ್ರಮಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು.  

ಈ ಸಂದರ್ಭದಲ್ಲಿ ಕೃಷ್ಣಾ-ಗೋದಾವರಿ ಬೀಜ ಉತ್ಪಾದನೆ ಮತ್ತು ಮಾರಾಟ ಸಂಸ್ಥೆಯ ಪ್ರತಿನಿಧಿಗಳು, ಭಾರತ ಎಲೆಕ್ಟ್ರಿಕಲ್ ಸಂಸ್ಥೆಯ ಅಧಿಕಾರಿಗಳು, ಎಸ್‌ಎಸ್‌ಎಸ್ ಸಮಿತಿಯ ಪದಾಧಿಕಾರಿಗಳು, ಸನ್ಮತಿ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.