ಮೂಲಭೂತ ಸೌಕರ್ಯ ವಂಚಿತ ಮೆಡ್ಲೇರಿ: ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ ತಹಶೀಲ್ದಾರ್

ಮೂಲಭೂತ ಸೌಕರ್ಯ ವಂಚಿತ ಮೆಡ್ಲೇರಿ: ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ ತಹಶೀಲ್ದಾರ್ Medleri deprived of infrastructure: Tehsildar responded to the problem of villagers


ರಾಣೇಬೆನ್ನೂರು  10:  ಹಲವು ದಶಕಗಳಿಂದ ಅಭಿವೃದ್ಧಿ ಕಾಣದೇ ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ತಾಲೂಕಿನ ಮೆಡ್ಲೇರಿ ಗ್ರಾಮದ ಮುಕ್ತಿ ಧಾಮಗಳಿಗೆ ಬಹು ದಿನಗಳ ಗ್ರಾಮಸ್ಥರ ಮನವಿ ಮೇರೆಗೆ ತಹಶೀಲ್ದಾರ್ ಆರ್‌. ಹೆಚ್‌. ಭಾಗವಾನ್ ಅವರು ಗುರುವಾರ ಮೆಡ್ಲೇರಿ  ಗ್ರಾಮದ ಎಲ್ಲಾ ಸ್ಮಶಾನಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಇಲ್ಲಿನ ಸ್ಮಶಾನಗಳ ಒತ್ತುವರಿ ಹಾಗೂ ಶವ ಸಾಗಿಸಲು ರಸ್ತೆ ಹಾಗೂ ಮುಕ್ತಿಧಾಮಗಳಲ್ಲಿ ವಿವಿಧ ಸೌಕರ್ಯಗಳ ಅಳವಡಿಸುವ ಬಗ್ಗೆ ಗ್ರಾ ಪಂ ಪಿಡಿಒ ಅವರೊಂದಿಗೆ ಸುದೀರ್ಘವಾಗಿ  ಚರ್ಚಿಸಿದರು. ಗ್ರಾಮದ ಸ್ಮಶಾನ ಭೂಮಿಗಳಾದ ರಿ.ಸ.ನಂ 190/1ನೇದ್ದರ ಗಡ್ಡೆಹೊಳೆ ಸ್ಮಶಾನ ಭೂಮಿ ಜಮೀನಿಗೆ ಹೊಂದಿಕೊಂಡು ಗ್ರಾಮ ಪಂಚಾಯತಿ ಹೆಸರಿಗೆ ಗಡ್ಡಿಹೊಳೆ ತುಂಗಭದ್ರಾ ನದಿಯ ಸಮೀಪ 20 ಎಕರೆ ಆಸ್ತಿಯಿದ್ದು. 

ಇದರಲ್ಲಿ ಮೆಡ್ಲೇರಿ ಗ್ರಾಮದ ಜನಸಂಖ್ಯೆಗೆ ಅನುಗುಣವಾಗಿ 3 ಎಕರೆ ಭೂಮಿಯನ್ನು ಸ್ಮಶಾನಕ್ಕಾಗಿ ಮೀಸಲಿಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಇಲ್ಲಿನ ವೀರಶೈವ ರುದ್ರಭೂಮಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಳೆಗಾಲದಲ್ಲಿ ಶವ ಸಾಗಿಸಲು ಪರದಾಡುವಂತ ಸ್ಥಿತಿ ಇದ್ದು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು ಅಲ್ಲದೆ  441/1 ಇರಿಗೇಷನ್ ಸ್ಮಶಾನಕ್ಕೆ ರಸ್ತೆ ಇರುವುದಿಲ್ಲ ಇದಕ್ಕೆ ರಸ್ತೆಗಳನ್ನು ಗುರುತಿಸಿ ಸ್ಮಶಾನಕ್ಕೆ ಶವಸಂಸ್ಕಾರ ಮಾಡಲು ಹೋಗಿ ಬರಲು ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಗ್ರಾ ಪಂ ಸದಸ್ಯ ಮೈಲಪ್ಪ ಬಡಪ್ಳವರ ಮನವಿ ಮಾಡಿದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ  ತಹಶೀಲ್ದಾರ್ ಭಾಗವಾನ್ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕಾಗಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಕಂದಾಯ ನೀರೀಕ್ಷಕರಾದ ವಾಗೀಶ ಮಳಿಮಠ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ , ಗ್ರಾ ಪಂ ಪಿಡಿಒ ಮಂಜುನಾಥ ಕಂಬಳಿ, ಗ್ರಾ ಪಂ ಸದಸ್ಯ ಪ್ರಕಾಶ ಬಿಂಗೇರ,  ಮಂಜಪ್ಪ ಜಾಗಟಿ ಗ್ರಾಮಸ್ಥರಾದ ಡಿಳ್ಳೆಪ್ಪ ಮಾಳಗಿಮನಿ, ನಿಂಗಪ್ಪ ಚಕ್ರಸಾಲಿ , ಹುಚ್ಚಪ್ಪ ಅಂತರವಳ್ಳಿ, ಡಿಳ್ಳೆಪ್ಪ ಬೂದನೂರ ಸೇರಿದಂತೆ ಗ್ರಾ ಪಂ ಸದಸ್ಯರು ಸಿಬ್ಬಂದಿಗಳು ಗ್ರಾಮಸ್ಥರು ಇದ್ದರು. *ಅನೇಕ ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸ್ಮಶಾನಗಳು* ತಾಲೂಕಿನಲ್ಲೆಅತೀ ದೊಡ್ಡ ಗ್ರಾಮವಾಗಿ ಗುರುತಿಸಿಕೊಂಡಿರುವ ಮೆಡ್ಲೇರಿ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಇಲ್ಲಿನ ವಿವಿಧ ಸಮುದಾಯಗಳ ಸ್ಮಶಾನಗಳಿಗೆ ಶವ ಸಾಗಿಸಲು ಸರಿಯಾದ ರಸ್ತೆ ಇಲ್ಲದೆ ಮಳೆಗಾಲದಲ್ಲಿ ಶವ ಸಾಗಿಸಲು ಪರದಾಡುವಂತ ಸ್ಥಿತಿ ಇದೆ ಅಲ್ಲದೇ ಇಲ್ಲಿನ ಸ್ಮಶಾನಗಳು ಒತ್ತುವರಿ ಆಗಿದ್ದು ಸರಿಯಾದ ಕಾಂಪೌಂಡ್ ಆಗಲಿ, ಕುಡಿಯುವ ನೀರಿನ ವ್ಯವಸ್ಥೆಯಾಗಲಿ,

ತಂಗುದಾಣಗಳಾಗಲಿ ಇಲ್ಲದೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು,ಇದಕ್ಕೆ ಸಂಬಂಧಿಸಿದಂತೆ ಗ್ರಾ ಪಂ ಸದಸ್ಯರು, ಗ್ರಾಮಸ್ಥರು ತಾಲೂಕಿನ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರೂ, ಇಲ್ಲಿಯವರೆಗೂ ಸ್ಮಶಾನಗಳು ಅಭಿವೃದ್ಧಿ ಕಾಣದೇ ನಲುಗುತ್ತಿವೆ . ಜನಪ್ರತಿನಿಧಿಗಳ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸ್ಮಶಾನಗಳು ಹಾಳು ಕೊಂಪೆಯತೆ ಭಾಸವಾಗುತ್ತಿವೆ.ಇನ್ನಾದರೂ ಜನಪ್ರತಿನಿಧಿಗಳು ತಹಶೀಲ್ದಾರರು ಮಳೆಗಾಲ ಆರಂಭಕ್ಕೂ ಮುನ್ನವೇ ಸ್ಮಶಾನಗಳಿಗೆ ರಸ್ತೆ ಗುರುತಿಸಿ ಗ್ರಾಮದ ಸ್ಮಶಾನಗಳ ಅವ್ಯವಸ್ಥೆಗೆ ಮುಕ್ತಿ  ಕಾಣಿಸುವರೇ ಎಂಬುದು ಮೆಡ್ಲೇರಿ ಗ್ರಾಮಸ್ಥರ ಆಶಯವಾಗಿದೆ.