ಲೋಕಾಯುಕ್ತರ ಭೇಟಿ ಕೇವಲ ಪುಟ್ಟ ಕಾರ್ಯಕ್ರಮವಾಗದೆ ಫಲಪ್ರದವಾಗಲಿ

ಲೋಕಾಯುಕ್ತರ ಭೇಟಿ ಕೇವಲ ಪುಟ್ಟ ಕಾರ್ಯಕ್ರಮವಾಗದೆ ಫಲಪ್ರದವಾಗಲಿ  May the meeting with the Lokayukta be fruitful, rather than just a minor event


ರಾಣೆಬೆನ್ನೂರು, ಆ.25: ಜಿಲ್ಲೆಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅವರ ನೇತೃತ್ವದ ತಂಡ ಜಿಲ್ಲೆಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ, ಲೋಕಾಯುಕ್ತರ ಸಾರ್ವಜನಿಕ ದೂರುಗಳ ಪರೀಶೀಲನಾ ಕಾರ್ಯಕ್ರಮ ಕೇವಲ ನೆಪದ ಕಾರ್ಯಕ್ರಮವಾಗದೆ, ದೂರುದಾರರ ಸಮಸ್ಯೆಗಳಿಗೆ ಸ್ಪಂದಿಸಿ ಫಲಿತಾಂಶ ನೀಡುವಂತಾಗಬೇಕು ಎಂದು ರೈತ ಮುಖಂಡ, ಪ್ರಗತಿಪರ ಚಿಂತಕ ಹಾಗೂ ಕರ್ನಾಟಕ ರಾಜ್ಯ ಅಭಿವೃದ್ಧಿ ಪರಿಷತ್ತಿನ ರಾಜ್ಯಾಧ್ಯಕ್ಷ ರವೀಂದ್ರಗೌಡ ಎಫ್‌. ಪಾಟೀಲ ಮನವಿ ಮಾಡಿದ್ದಾರೆ.  

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅವರು ಹಾವೇರಿ ಲೋಕಾಯುಕ್ತ ಕಚೇರಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜೊತೆಗೆ ಸಾರ್ವಜನಿಕ ದೂರುಗಳ ಪರೀಶೀಲನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಹಲವು ಇಲಾಖೆಗಳ ವಿರುದ್ಧ ದಾಖಲಾಗಿರುವ ಗಂಭೀರ ದೂರುಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.  

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿನ ವೈದ್ಯರ ಭ್ರಷ್ಟಾಚಾರ, ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುವ ಮುರಾರ್ಜಿ ವಸತಿ ಶಾಲೆಗಳಲ್ಲಿನ ಅವ್ಯವಸ್ಥೆ, ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ, ಸಣ್ಣ ನೀರಾವರಿ ಹಾಗೂ ಅಪ್ಪರ್ ತುಂಗಾ ಯೋಜನೆ, ಕೆರೆ ತುಂಬಿಸುವ ಯೋಜನೆಗಳಲ್ಲಿನ ಅಕ್ರಮಗಳ ಕುರಿತು ದೂರುಗಳಿವೆ ಎಂದು ತಿಳಿಸಿದ್ದಾರೆ.  

ಅಲ್ಲದೆ, ಸರ್ಕಾರದಿಂದ ಮಾನ್ಯತೆ ಪಡೆದಿದ್ದರೂ ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ನಿಯಮಬಾಹಿರವಾಗಿ ಡೊನೇಷನ್ ವಸೂಲಿ ಮಾಡುತ್ತಿರುವುದು, ಆರ್ಟಿಐ ವ್ಯಾಪ್ತಿಗೆ ಬರುವುದಿಲ್ಲ ಹಾಗೂ ಬಿಇಒ, ಡಿಡಿಪಿಐ ವ್ಯಾಪ್ತಿಗೆ ಸಂಬಂಧಿಸುವುದಿಲ್ಲ ಎಂದು ಹೇಳಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧವೂ ದೂರುಗಳಿವೆ ಎಂದು ಹೇಳಿದ್ದಾರೆ.  

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಆದೇಶಗಳನ್ನು ಉಲ್ಲಂಘಿಸಿ ಹಣದ ಆಸೆಗಾಗಿ ಶಾಲೆ, ಕಾಲೇಜು, ದೇವಸ್ಥಾನ, ಹೆದ್ದಾರಿ ಹಾಗೂ ಸಾರ್ವಜನಿಕ ಸ್ಥಳಗಳ ಸಮೀಪ ಬಾರ್, ಬ್ರಾಂಡಿ ಶಾಪ್ಗಳು ಮತ್ತು ರೆಸ್ಟೋರೆಂಟ್ಗಳಿಗೆ ಅನುಮತಿ ನೀಡುತ್ತಿರುವ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧವೂ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.  

ಈ ಎಲ್ಲಾ ದೂರುಗಳ ಆಧಾರದ ಮೇಲೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಶಾಶ್ವತವಾಗಿ ಅಮಾನತು ಮಾಡುವಂತಹ ಕ್ರಮ ಕೈಗೊಳ್ಳುವ ಮೂಲಕ ದೂರುದಾರರು ಮತ್ತು ಹೋರಾಟಗಾರರಲ್ಲಿ ಲೋಕಾಯುಕ್ತ ಸಂಸ್ಥೆಯ ಮೇಲಿರುವ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಬೇಕು ಎಂದು ರವೀಂದ್ರಗೌಡ ಎಫ್‌. ಪಾಟೀಲ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.