ಶಿಕ್ಷಣ ಕ್ಷೇತ್ರಕ್ಕೆ ಮೌಲಾನಾ ಆಜಾದ್ ಕೊಡುಗೆ ಅಪಾರ:ಕೆಂಭಾವಿ

ಶಿಕ್ಷಣ ಕ್ಷೇತ್ರಕ್ಕೆ ಮೌಲಾನಾ ಆಜಾದ್ ಕೊಡುಗೆ ಅಪಾರ:ಕೆಂಭಾವಿ  Maulana Azad's contribution to the field of education is immense: Kembavi

ತಾಳಿಕೋಟಿ 13: ಮೌಲಾನಾ ಅಬ್ದುಲ್ ಕಲಾಂ ಆಜಾದ್ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಶಿಕ್ಷಣ ತಜ್ಞ ದೇಶದ ಪ್ರಥಮ ಶಿಕ್ಷಣ ಸಚಿವರಾಗಿದ್ದ ಅವರು ಲೇಖನಿ ಮೂಲಕ ಬ್ರಿಟಿಷರ ವಿರುದ್ಧ ಸಮರ ಸಾರಿದರು, ಅವರು ಹಿಂದೂ ಮುಸ್ಲಿಂ ಐಕ್ಯತೆಗಾಗಿ ಶ್ರಮಿಸಿದ ಮಹಾನ್ ನಾಯಕರಾಗಿದ್ದಾರೆ ಎಂದು ಜಯಂತಿ ಕಾರ್ಯಕ್ರಮದ ಸಂಚಾಲಕ ಜಾವೇದ ಕೆಂಭಾವಿ ಹೇಳಿದರು. ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನಾಚರಣೆ ಅಂಗವಾಗಿ ಪಟ್ಟಣದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಸ್ಲಿಂ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕೆಂಬುದು ಅವರ ಕಾಳಜಿಯಾಗಿತ್ತು, ಶಿಕ್ಷಣದಿಂದ ಮಾತ್ರ ಸಮುದಾಯದ ಸರ್ವಾಂಗೀಣ ಪ್ರಗತಿ ಆಗಲು ಸಾಧ್ಯ ಎಂದು ಅವರು ನಮಗೆ ತಿಳಿಸಿ ಹೋಗಿದ್ದಾರೆ ಅದನ್ನು ಸಮುದಾಯ ಅನುಸರಿಸುವ ಅಗತ್ಯವಿದೆ ಎಂದರು. ಶಿಕ್ಷಕ ಇರ್ಫಾನ್ ಖಾಜಿ ಮಾತನಾಡಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಅನುಪಮ ಸೇವೆಯ ಸ್ಮರಣೆಗಾಗಿಯೇ ಅವರ ಜನ್ಮದಿನವಾದ ನವೆಂಬರ್ 11 ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಗಣ್ಯರಾದ ಅಬ್ದುಲ್ ಸತ್ತಾರ ಅವಟಿ, ಕಾಸಿಂಸಾಬ ಜಕಾತಿ, ನಿವೃತ್ತ ಶಿಕ್ಷಕ ಭಾಷಾಸಾಬ ಆರಬೋಳ, ಸೂಲೇಮಾನ ನಮಾಜಕಟ್ಟಿ, ಜಲಾಲಪಟೇಲ ಪಟೇಲ, ಸಂಜೀವಪ್ಪ ಬರದೇನಾಳ, ರಾಮಣ್ಣ ಕಟ್ಟಿಮನಿ, ಸಾಧಿಕ ಖಲೀಫಾ, ದಸ್ತಗೀರ ಕೆಂಭಾವಿ, ಇಕ್ಬಾಲ್ ಆಗ್ರಾ, ಶಬ್ಬೀರ ಅವಟಿ, ಗನಿಸಾಬ ಶಾಪೂರ ಮತ್ತಿತರರು ಇದ್ದರು.