ವಿಕಲಚೇತನ ಮಕ್ಕಳ ಪುನಃಶ್ಚೇತನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ - ಜಿಲ್ಲಾಧಿಕಾರಿ ಸುರೇಶ ಇಟ್ನಾಳ

ವಿಕಲಚೇತನ ಮಕ್ಕಳ ಪುನಃಶ್ಚೇತನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ - ಜಿಲ್ಲಾಧಿಕಾರಿ ಸುರೇಶ ಇಟ್ನಾಳ  Make good use of rehabilitation facilities for disabled children - Deputy Commissioner Suresh Itnal

ಕೊಪ್ಪಳ 11: ಸರ್ಕಾರ ಮತ್ತು ಸಂಘ ಸಂಸ್ಥೆಗಳ ಮೂಲಕ ವಿಕಲಚೇತನ ಮಕ್ಕಳಿಗೆ ಇರುವ ಪುನಃಶ್ಚೇತನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿರಿ ಎಂದು ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ರವರು ಆರೈಕೆದಾರರಿಗೆ ತಿಳಿಸಿದರು. ಕೊಪ್ಪಳದ ಅರುಣಚೇತನ ವಿಶೇಷ ಮಕ್ಕಳ ಶಾಲೆ, ಹಿಂದೂ ಸೇವಾ ಪ್ರತಿಷ್ಠಾನ ಹಾಗೂ ಮಹಾತ್ಮಾ ಗಾಂಧಿ ಅನಾಥ ಸೇವಾಶ್ರಮ ಟ್ರಸ್ಟ್‌ ಇವರ ಸಹಯೋಗದಲ್ಲಿ ಮಂಗಳವಾರ ಶಾಲೆಯಲ್ಲಿ ಜರುಗಿದ ಮೊದಲನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಗವಿಕಲರ ಹಕ್ಕುಗಳ ಕಾಯ್ದೆ ಪ್ರಕಾರ 21 ಬಗೆಯ ವಿಕಲಚೇತನರು ಇದ್ದಾರೆ. ಅರುಣಚೇತನ ವಿಶೇಷ ಮಕ್ಕಳ ಶಾಲೆಯಿಂದ ನಗರ ಭಾಗದ ವಿಕಲಚೇತನ ಮಕ್ಕಳಿಗೆ ಅಗತ್ಯ ಪುನಃಶ್ಚೇತನ ಸೌಲಭ್ಯಗಳು ದೊರಕುತ್ತಿವೆ. ಜಿಲ್ಲಾಡಳಿತವು ಶೀಘ್ರದಲ್ಲೇ ವಿಕಲಚೇತನ ಮಕ್ಕಳ ಪುನಃಶ್ಚೇತನಕ್ಕಾಗಿ ಆರಂಭಿಕ ಮಧ್ಯಸ್ಥಿಕೆ ಕೇಂದ್ರ ಪ್ರಾರಂಭಿಸಲಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.  

ಶಾಲಾ ಸಮಿತಿ ಕಾರ್ಯದರ್ಶಿ ರೇಣುಕಾ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಬೆಂಗಳೂರಿನಲ್ಲಿ ಮೂಲ ಶಾಲೆಯು 39 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು 7ನೇ ಶಾಲೆಯಾಗಿ ಕೊಪ್ಪಳ ನಗರದಲ್ಲಿ 2025 ರಲ್ಲಿ ಪ್ರಾರಂಭವಾಗಿ ಸಮಾಜ ಸೇವಾ ಮನಸ್ಕರ ಸಹಕಾರದಿಂದ ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿ ಕಾರ್ಯನಿರ್ವಹಿಸುತ್ತಿದೆ. ಶಾಲೆಯಲ್ಲಿ ಪ್ರಸ್ತುತ 30 ವಿಶೇಷಚೇತನ ಮಕ್ಕಳು ಕಲಿಯುತ್ತಿದ್ದಾರೆ. ಫಿಸಿಯೋಥೆರಪಿ, ವಿಶೇಷ ಶಿಕ್ಷಣ, ಸಾಧನ ಸಲಕರಣೆಗಳ ಜೊತೆಗೆ ಶಾಲಾ ವಾಹನ ಸೌಲಭ್ಯವಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿ, ಪಾಲನೆ, ಪೋಷಣೆ ಕುರಿತಂತೆ ಆರೈಕೆದಾರರ ಸಭೆ ಮಾಡಿ ಅವಲೋಕಿಸಲಾಗುತ್ತಿದೆ. ನುರಿತ ಸಿಬ್ಬಂದಿ ವರ್ಗ ಮಕ್ಕಳ ಪುನಃಶ್ಚೇತನಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ದಾನಿಗಳು ಮಕ್ಕಳ ಪುನಃಶ್ಚೇತನಕ್ಕಾಗಿ ಪ್ರಾಯೋಜಕತ್ವ ತೆಗೆದುಕೊಂಡರೆ ಶಾಲೆಯ ಸೇವೆ ವಿಸ್ತರಿಸಲು ಸಹಕಾರಿಯಾಗಲಿದೆ ಎಂದರು.   

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾತ್ಮಾ ಗಾಂಧಿ ಅನಾಥ ಸೇವಾಶ್ರಮ ಟ್ರಸ್ಟ್‌ ಅಧ್ಯಕ್ಷ ರಾಜೇಂದ್ರ ಜೈನ್ ಮಾತನಾಡಿ ಈ ಭಾಗದಲ್ಲಿ ವಿಕಲಚೇತನ ಮಕ್ಕಳಿಗೆ ವಿಶೇಷ ಶಾಲೆಯ ಅಗತ್ಯವಿತ್ತು. ಈ ಶಾಲೆ ಪ್ರಾರಂಭವಾಗಿ ಅತ್ಯುತ್ತಮ ಸೇವೆಗಳನ್ನು ನೀಡುತ್ತಿದೆ. ಶಾಲೆಯ ಸೇವೆಗಳನ್ನು ಹೆಚ್ಚಿನ ವಿಶೇಷಚೇತನ ಮಕ್ಕಳಿಗೆ ತಲುಪಿಸಲು ದಾನಿಗಳು ಕೈ ಜೋಡಿಸಲು ಮನವಿ ಮಾಡಿದರು. ಆರ್ಥಿಕ ನೆರವು ನೀಡುವ ದಾನಿಗಳಿಗೆ 80ಜಿ ಆದಾಯ ತೆರಿಗೆ ವಿನಾಯಿತಿ ಸೌಲಭ್ಯವಿದೆ. ಸಮಾಜಕ್ಕೆ ನಾವು ಕೊಡುಗೆ ನೀಡುವ ಮನೋವೃತ್ತಿ ಬೆಳೆಯಬೇಕು ಎಂದು ತಿಳಿಸಿದರು. ವಿಕಲಚೇತನ ಮಕ್ಕಳ ಆರೈಕೆದಾರರು ಮಾತನಾಡಿ ತಮ್ಮ ಮಕ್ಕಳು ಶಾಲೆಯ ಚಟುವಟಿಕೆಗಳಿಂದ ಕ್ರಿಯಾಶೀಲರಾಗಿದ್ದಾರೆ.

ಅವರ ದೈಹಿಕ, ಬೌದ್ಧಿಕ ಬೆಳವಣಿಗೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವಿಕಲಚೇತನ ಮಕ್ಕಳಿಂದ ನಡೆದ ಯೋಗ ಮತ್ತು ನೃತ್ಯಗಳು ಎಲ್ಲರ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೆಂಕಟೇಶ್ ದೇಶಪಾಂಡೆ, ಹಿರಿಯ ವೈದ್ಯ ಡಾ//ಕೆ.ಜಿ.ಕುಲಕರ್ಣಿ, ಕೊಪ್ಪಳ ಇನ್ನರ್ ವ್ಹೀಲ್ ಕ್ಲಬ್ ಸಂಸ್ಥಾಪಕ ಸದಸ್ಯೆ ಡಾ//ರಾಧಾ ಕುಲಕರ್ಣಿ, ಅರುಣಚೇತನ ಶಾಲಾ ಸಮಿತಿ ಅಧ್ಯಕ್ಷ ಅನಂತ ಇನಾಂದಾರ್, ಅನಿಲ್ ನಾಲವಾಡ್, ಮತ್ತಿತರರು ಉಪಸ್ಥಿತರಿದ್ದರು. ವಿಶೇಷಚೇತನ ವಿದ್ಯಾರ್ಥಿ ಫಣಿರಾಜ್ ಪ್ರಾರ್ಥಿಸಿದರು, ಅಮಿತ್ ಸ್ವಾಗತಿಸಿದರು, ಶಾಲೆಯ ಶಿಕ್ಷಕ ವಿರುಪಾಕ್ಷಪ್ಪ ಅಳವಂಡಿ ನಿರೂಪಿಸಿ ವಂದಿಸಿದರು. 


First Anniversary of School Special Education Physiotherapy Special Equipment