ಮನರೇಗಾ ಬಚಾವೋ ಸಂಗ್ರಾಮ್‌: ತಿದ್ದುಪಡಿ ವಿಧೇಯಕ ವಾಪಸ್ ಪಡೆಯಲು ಜನವರಿ 11ರಿಂದ ಫೆಬ್ರವರಿ 25ರವರೆಗೆ ರಾಷ್ಟ್ರವ್ಯಾಪಿ ಹೋರಾಟ

ಮನರೇಗಾ ಬಚಾವೋ ಸಂಗ್ರಾಮ್‌: ತಿದ್ದುಪಡಿ ವಿಧೇಯಕ ವಾಪಸ್ ಪಡೆಯಲು ಜನವರಿ 11ರಿಂದ ಫೆಬ್ರವರಿ 25ರವರೆಗೆ ರಾಷ್ಟ್ರವ್ಯಾಪಿ ಹೋರಾಟ  MNREGA Bachao Sangram: Nationwide struggle to withdraw the Amendment Bill from January 11 to Februa

          ಸಿರುಗುಪ್ಪ 13:  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಯಾವುದೇ ಒಂದು ರಾಜಕೀಯ ಪಕ್ಷದ ಹೋರಾಟವಲ್ಲ. ಇದು ದೇಶದ ಬಡ ರೈತರು, ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಜನರ ಜೀವನೋಪಾಯಕ್ಕಾಗಿ ನಡೆಯುವ ಹೋರಾಟವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಬೆಂಗಳೂರು ವಕ್ತಾರ ಬಾಲಕೃಷ್ಣ ಸ್ವಾಮಿ ಯಾದವ್ ಸ್ಪಷ್ಟಪಡಿಸಿದರು.  

          ಸಿರುಗುಪ್ಪ ನಗರದ ಬಳ್ಳಾರಿ ರಸ್ತೆ ವೈಷ್ಣವಿ ಗ್ರಾಂಡ್ ಫಂಕ್ಷನ್ ಹಾಲ್ ಸಭಾಭವನದಲ್ಲಿ ಭಾನುವಾರ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಮಿಟಿ ಗ್ರಾಮಾಂತರ ಹಾಗೂ ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ “ಮನರೇಗಾ ಬಚಾವೋ ಸಂಗ್ರಾಮ್‌” ಅಭಿಯಾನದ ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ಎಷ್ಟೇ ಅನ್ಯಾಯ ಮಾಡಿದರೂ ಅದನ್ನೇ ಸಮರ್ಥಿಸುವ ರಾಜ್ಯದ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರು ಮಾಡುತ್ತಿರುವುದು ಮಹಾ ಅಪರಾಧ ಎಂದು ಅವರು ತೀವ್ರವಾಗಿ ಟೀಕಿಸಿದರು.  

           ಮನರೇಗಾ ತಿದ್ದುಪಡಿ ವಿಧೇಯಕದ ಮೂಲಕ ಗ್ರಾಮೀಣ ಕಾರ್ಮಿಕರ ಉದ್ಯೋಗದ ಹಕ್ಕನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ತಿದ್ದುಪಡಿ ವಾಪಸ್ ಪಡೆಯುವಂತೆ ಆಗ್ರಹಿಸಿ ಜನವರಿ 11ರಿಂದ ಫೆಬ್ರವರಿ 25ರವರೆಗೆ ದೇಶಾದ್ಯಂತ ಹಂತ ಹಂತವಾಗಿ ವ್ಯಾಪಕ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಈ ಹಿಂದೆ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ನಡೆದ ರಾಷ್ಟ್ರವ್ಯಾಪಿ ಹೋರಾಟದ ಮಾದರಿಯಲ್ಲೇ ಈ ಬಾರಿಯೂ ಜನಾಂದೋಲನ ನಡೆಯಲಿದೆ ಎಂದು ತಿಳಿಸಿದರು.  

           ಹೋರಾಟದ ಸಂಪೂರ್ಣ ಕಾರ್ಯಯೋಜನೆಯನ್ನು ವಿವರಿಸಿದ ಅವರು, ಜನವರಿ 11ರಂದು ಎಲ್ಲಾ ಜಿಲ್ಲಾ ಕೇಂದ್ರಗಳ ಪ್ರಮುಖ ಸ್ಥಳಗಳಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಅಥವಾ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದರು. ಜನವರಿ 12ರಿಂದ 29ರವರೆಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನಸಂಪರ್ಕ ಪ್ರತಿಭಟನೆಗಳು ಹಾಗೂ ಸಮಾವೇಶಗಳು ನಡೆಯಲಿವೆ. ಜನವರಿ 30ರಂದು ಆಯಾ ಪಂಚಾಯಿತಿಗಳ ವಾರ್ಡ್‌ ಮಟ್ಟದಲ್ಲಿಯೂ ಮತ್ತು ಪಕ್ಷದ ಬ್ಲಾಕ್ ಮಟ್ಟದಲ್ಲಿಯೂ ಶಾಂತಿಯುತ ಧರಣಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.  

          ಜನವರಿ 31ರಿಂದ ಫೆಬ್ರವರಿ 6ರವರೆಗೆ ಜಿಲ್ಲಾ ಮಟ್ಟದಲ್ಲಿ ಮನರೇಗಾ ಬಚಾವ್ ಧರಣಿ ನಡೆಯಲಿದ್ದು, ಫೆಬ್ರವರಿ 7ರಿಂದ 15ರವರೆಗೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ವಿಧಾನಸೌಧಗಳಿಗೆ ಮುತ್ತಿಗೆ ಹಾಕಲಾಗುವುದು. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಬಿಜೆಪಿ ರಾಜ್ಯ ಕಚೇರಿ ಅಥವಾ ಕೇಂದ್ರ ಸರ್ಕಾರದ ಪ್ರಮುಖ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುತ್ತದೆ. ಫೆಬ್ರವರಿ 16ರಿಂದ 25ರವರೆಗೆ ಆಯಾ ರಾಜ್ಯಗಳಲ್ಲಿ ವಿಭಾಗವಾರು ಪ್ರತಿಭಟನಾ ರ್ಯಾಲಿಗಳು ನಡೆಯಲಿವೆ. ಈ ಅವಧಿಯಲ್ಲೂ ತಿದ್ದುಪಡಿ ವಿಧೇಯಕ ವಾಪಸ್ ಪಡೆಯದಿದ್ದರೆ, ಫೆಬ್ರವರಿ 25 ನಂತರ ದೆಹಲಿಯಲ್ಲಿ ಭಾರಿ ಮಟ್ಟದ ಪ್ರತಿಭಟನಾ ಸಮಾವೇಶ ನಡೆಸಲಾಗುವುದು ಎಂದು ಎಚ್ಚರಿಸಿದರು.  

           ಮನರೇಗಾ ಯೋಜನೆಯ ಹೆಸರನ್ನು ಬದಲಿಸುವ ಕ್ರಮದ ವಿರುದ್ಧವೂ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಜನವರಿ 26ರಿಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ “ಮನರೇಗಾ ಉಳಿಸಿ” ಅಭಿಯಾನ ಆರಂಭಿಸಲಾಗುವುದು ಎಂದರು. ಈ ಅಭಿಯಾನಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.  

           ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಶಾಸಕ ಬಿ.ಎಂ. ನಾಗರಾಜ ಮಾತನಾಡಿ, ಕಳೆದ 20 ವರ್ಷಗಳಿಂದ ಗ್ರಾಮೀಣ ಬದುಕಿನ ಜೀವನಾಡಿಯಾಗಿದ್ದ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಉದ್ಯೋಗದ ಹಕ್ಕಿನ ಕುಸಿತ, ಸ್ಥಳೀಯ ಪಂಚಾಯತಿಗಳ ಅಧಿಕಾರ ಕಡಿತ, ರಾಜ್ಯಗಳ ಮೇಲೆ ಹೆಚ್ಚುವರಿ ಹಣಕಾಸಿನ ಹೊರೆ, ನಿರುದ್ಯೋಗದ ಪ್ರಮಾಣ ಹೆಚ್ಚಳ, ಕನಿಷ್ಠ ವೇತನದ ರಕ್ಷಣೆ ಇಲ್ಲದ ಸ್ಥಿತಿ, ಕಾರ್ಮಿಕರ ಸಂಕಷ್ಟ, ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆ, ಬಲವಂತದ ವಲಸೆ, ಗ್ರಾಮೀಣ ಜೀವನೋಪಾಯಗಳ ಕುಸಿತ ಮತ್ತು ಗ್ರಾಮೀಣ ಸಂಕಷ್ಟ ತೀವ್ರಗೊಳ್ಳುವ ಅಪಾಯ ಎದುರಾಗಿದೆ ಎಂದು ವಿವರಿಸಿದರು.  

            ಪಂಚಾಯತಿಗಳನ್ನು ಕೇವಲ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂಸ್ಥೆಗಳಾಗಿ ಸೀಮಿತಗೊಳಿಸಲಾಗುತ್ತಿದ್ದು, ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಧರಿಸುವ ಅಧಿಕಾರವನ್ನು ಕಡಿತಗೊಳಿಸಲಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ವಿಕಸಿತ ಭಾರತ್ ಗ್ರಾಮ್ ಜಿ ಕಾಯಿದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಮರು ಜಾರಿಗೊಳಿಸಬೇಕು, ಜನರ ಉದ್ಯೋಗದ ಹಕ್ಕನ್ನು ಪುನರ್ ಸ್ಥಾಪಿಸಬೇಕು ಮತ್ತು ಪಂಚಾಯತಿಗಳ ಸ್ವಯಂ ಆಡಳಿತದ ಹಕ್ಕನ್ನು ಮರು ಸ್ಥಾಪಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳು ಎಂದು ಸ್ಪಷ್ಟಪಡಿಸಿದರು.  

           ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಲೀಡರ್ಶಿಪ್ ಡೆವಲಪ್ಮೆಂಟ್ ಮಿಷನ್ ಕೋಆರ್ಡಿನೇಟರ್ ಅಶ್ವಿನ್, ನಗರಸಭೆ ಮಾಜಿ ಅಧ್ಯಕ್ಷರು ಬಿ. ರೇಣುಕಮ್ಮ ವೆಂಕಟೇಶ್, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್‌. ಕರಿಬಸಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ದಮ್ಮೂರು ಸೋಮಪ್ಪ, ತೆಕ್ಕಲಕೋಟೆ ಮಲ್ಲಿಕಾರ್ಜುನ ಬಾಲಪ್ಪ, ನರೇಂದ್ರ ಸಿಂಹ ಸಾಹುಕಾರ್, ವಿರೇಶಪ್ಪ ಗೌಡ, ನಗರಸಭೆ ಮಾಜಿ ಅಧ್ಯಕ್ಷರು ಬಿ. ಮುತ್ಯಾಲಯ್ಯ ಶೆಟ್ಟಿ, ಬಿ.ಜಿ. ಮಂಜುನಾಥ ರೆಡ್ಡಿ, ಸಿದ್ದರಾಮಯ್ಯ ಸ್ವಾಮಿ, ನಗರಸಭೆ ಮಾಜಿ ಸದಸ್ಯರು ಎಚ್‌. ಗಣೇಶ್, ಟಿ. ಸಲ್ವಾತ್ ಉದ್ದೀನ್, ಕಾಯಿಪಲ್ಲೆ ನಾಗರಾಜ, ಡಿ. ನಾಗರಾಜ, ಬಿ. ಅಫ್ಜಲ್ ಹುಸೇನ್, ಗೊರವರ ಶ್ರೀನಿವಾಸ, ಮೋದಿನ್ ಮುಲ್ಲಾ, ಅಬ್ದುಲ್ ರೋಫ್ ಬಗರ್, ಹುಕುಮ್ ಸಲಹಾ ಸಮಿತಿ ತಾಲೂಕ ಸದಸ್ಯ ಪವನ್ ದೇಸಾಯಿ, ಸಮಾಜ ಸುಧಾರಕ ಅಬ್ದುಲ್ ನಬಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು