ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರೀಶೀಲನಾ ಸಭೆಯಲ್ಲಿ ಶಾಸಕ ರಾಜುಗೌಡ ಎಚ್ಚರಿಕೆ

ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರೀಶೀಲನಾ ಸಭೆಯಲ್ಲಿ ಶಾಸಕ ರಾಜುಗೌಡ ಎಚ್ಚರಿಕೆ MLA Rajugowda warns in progress review meeting of taluk level officials

ದೇವರಹಿಪ್ಪರಗಿ 04: ರೈತರು ಹಾಗೂ ಸಾರ್ವಜನಿಕರ ಕೆಲಸಗಳನ್ನು ಅಧಿಕಾರಿಗಳು ತ್ವರಿತಗತಿಯಲ್ಲಿ ಮಾಡಿಕೊಡಬೇಕು. ಅನಗತ್ಯವಾಗಿ ಕಚೇರಿಗೆ ಅಲೆಸಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಎಚ್ಚರಿಕೆ ನೀಡಿದರು.  

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರದಂದು ಹಮ್ಮಿಕೊಂಡಿದ್ದ 2025-26ನೇ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ (ಕೃಷಿ ಅಭಿವೃದ್ಧಿ ಕಾರ್ಯಕ್ರಮ) ತಾಲೂಕು ಮಟ್ಟದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಹಾಗೂ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು ಎಂದು ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ, ರೈತಪರ ಯೋಜನೆಗಳ ಅನುಷ್ಠಾನ, ಸಾರ್ವಜನಿಕ ಹಿತಾಸಕ್ತಿ ವಿಷಯದ ಕುರಿತು ಚರ್ಚೆ ನಡೆಯಿತು. 

ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಶರಣಗೌಡ ಬಿರಾದಾರ ಮಾತನಾಡಿ ತಾಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಕೃಷಿ ಯೋಗ್ಯ ಭೂಮಿ ಇದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದುವರೆಗೆ  ನೂರಾರು ಹೆಕ್ಟೇರ್ ಬೆಳೆ ಹಾನಿಯಾಗಿದೆ. ಹಾನಿಗೊಳಗಾದ ಬೆಳೆ ಸಮೀಕ್ಷೆ ನಡೆಸಲಾಗಿದೆ ಶೇ.95ರಷ್ಟು ಬೆಳೆ ಪರಿಹಾರ ನೀಡಲಾಗಿದ್ದು ಕೆಲವು ತಾಂತ್ರಿಕ ಸಮಸ್ಯೆಯಿಂದ ಪರಿಹಾರ ನೀಡಲಾಗಿಲ್ಲ, ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಶೀಘ್ರದಲ್ಲಿ ರೈತರಿಗೆ ಪರಿಹಾರ ಒದಗಿಸಲಾಗುವುದು ಎಂದರು. 

ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಬೆಳೆ ವಿಮೆ ಅರ್ಹ ರೈತರಿಗೆ ಶೀಘ್ರ ತಲುಪುವಂತೆ ಹಾಗೂ ಕೃಷಿ ಹೊಂಡಗಳ ಕುರಿತು ಪಾರದರ್ಶಕ ಮಾಹಿತಿಯನ್ನು ರೈತರಿಗೆ ನೀಡಿ ಎಂದು ಶಾಸಕರು ಒತ್ತಿ ಹೇಳಿದರು. ಬೀದಿ ನಾಯಿಗಳ ಹೆಚ್ಚುತ್ತಿರುವ ಸಮಸ್ಯೆಯನ್ನು ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಯಿತು.  

ಎಪಿಎಂಸಿ ದಾಸ್ತಾನು ಮಳಿಗೆ ಕಟ್ಟಡ ನಿರ್ಮಾಣ ಸಂಬಂಧಿಸಿದ ಬೇಡಿಕೆಯನ್ನು ಶಾಸಕರ ಮುಂದೆ ಮಂಡಿಸಲಾಯಿತು. ಗಂಗಾ ಕಲ್ಯಾಣ ಯೋಜನೆ ಅಡಿ ರೈತರ ಹೊಲಗಳಿಗೆ ಕೃಷಿ ಚಟುವಟಿಕೆಗೆ ಟಿಸಿ ನೀಡುವಲ್ಲಿ ಅಧಿಕಾರಿಗಳು ಹಣ ಕೇಳುತ್ತಾರೆ, ಹಳೆ ಕಂಬಗಳನ್ನು ಬದಲಿಸಲು, ಅಂಗನವಾಡಿ ಕಟ್ಟಡಗಳ ದುರಸ್ತಿ ಹಾಗೂ ಹಳೆಯ ಕಟ್ಟಡ ತೆರವುಗೊಳಿಸುವುದು ಸೇರಿದಂತೆ ಸರ್ಕಾರಿ ಸೇವೆಗಳು, ಸರಳವಾಗಿ ಹಾಗೂ ಪಾರದರ್ಶಕವಾಗಿ ಲಭ್ಯವಾಗುವಂತೆ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.ನಂತರ ನೀರಾವರಿ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ, ಹೆಸ್ಕಾಂ, ಆಹಾರ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ, ಕಾರ್ಮಿಕ ಇಲಾಖೆ, ಸಹಕಾರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ತಮ್ಮ ತಮ್ಮ ಇಲಾಖೆಯ ಪ್ರಗತಿ ವಿವರವನ್ನು ಮಂಡಿಸಿದರು. 

ಜಿಪಂ ಸಿಪಿಒ ಸಿ.ಬಿ.ಕುಂಬಾರ, ತಾ.ಪಂ ಇಒ ಭಾರತಿ ಚೆಲುವಯ್ಯ, ತಹಸಿಲ್ದಾರ್ ಪ್ರಕಾಶ ಸಿಂದಗಿ, ಪ.ಪಂ ಮುಖ್ಯಾಧಿಕಾರಿ ಅಪ್ರೋಜ ಅಹಮದ ಪಟೇಲ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು, ಕೆಡಿಪಿ ಸದಸ್ಯರು, ಗ್ಯಾರೆಂಟಿ ಯೋಜನೆಗಳ ಸದಸ್ಯರು ಹಾಗೂ ತಾಪಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.