ಶಾಲೆಯ ಸಿಬ್ಬಂಧಿಗಳಿಗೆ ವಸತಿ ಗೃಹ; ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಹೆಚ್‌.ಆರ್‌.ಗವಿಯಪ್ಪ

ಶಾಲೆಯ ಸಿಬ್ಬಂಧಿಗಳಿಗೆ ವಸತಿ ಗೃಹ; ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಹೆಚ್‌.ಆರ್‌.ಗವಿಯಪ್ಪ  MLA H.R. Gaviappa laid the foundation stone for a residential building for school staff

ವಿಜಯನಗರ (ಹೊಸಪೇಟೆ) ಫೆ.19: ನಗರದ ಹೊರವಲಯದಲ್ಲಿನ ಜಂಬುನಾಥ ರಸ್ತೆಯಲ್ಲಿನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ವಸತಿ ಶಾಲೆ ಸಿಬ್ಬಂದಿಗೆ ವಸತಿಗೃಹ ಕಟ್ಟಡ ನಿರ್ಮಾಣಕ್ಕೆ ಗುರುವಾರ ಶಾಸಕರಾದ ಹೆಚ್‌.ಆರ್‌.ಗವಿಯಪ್ಪ ಅವರು ಭೂಮಿ ಪೂಜೆ ನೆರವೇರಿಸಿ  ಮಾತನಾಡಿದರು. ವಸತಿ ಶಾಲೆ ಸಿಬ್ಬಂದಿಗಳಿಗಾಗಿ ಸುಮಾರು 6.33 ಕೋಟಿ ವೆಚ್ಚದಲ್ಲಿ 2 ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ. ಒಂದು ಕಟ್ಟಡದಲ್ಲಿ 1 ಬಿಹೆಚ್ಕೆ ಹೊಂದಿರುವ 12 ಕೋಣೆ ಒಳಗೊಂಡ ಕಟ್ಟಡ ಮತ್ತೊಂದು ಕಟ್ಟಡದಲ್ಲಿ 2 ಬಿಹೆಚ್ಕೆ 12 ಕೋಣೆಗಳಿರುವ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು.  

ಕ್ಷೇತ್ರದಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ 7 ರಿಂದ 8 ಸಾವಿರ ಸಿಬ್ಬಂದಿ ಇದೆ. ಆದರೆ ಸುವ್ಯವಸ್ಥಿತ ಕಟ್ಟಡ ಇಲ್ಲದಿರುವ ಕಾರಣ ಬಳ್ಳಾರಿ ನಗರದಲ್ಲಿಯೇ ಉಳಿದುಕೊಂಡಿದ್ದಾರೆ. ಅವರಿಗೆ ಸುಸಜ್ಜಿತವಾದ ಸುಮಾರು 5 ರಿಂದ 6 ಸಾವಿರ ವಸತಿ ನಿಲಯಗಳ ಅವಶ್ಯಕತೆ ಇದೆ. ಅದಕ್ಕಾಗಿ ಕಳೆದ ಎರಡು ಮೂರು ವರ್ಷಗಳಲ್ಲಿ ಜಿಲ್ಲೆಯಾದ್ಯಂತ ಈಗಾಗಲೇ 9 ವಸತಿ ನಿಲಯ, ಪೊಲೀಸ್ ಇಲಾಖೆಗೆ 100 ವಸತಿಗೃಹ ನಿರ್ಮಿಸಲಾಗಿದೆ. ಹೀಗೆ ಹಂತ ಹಂತವಾಗಿ ಮುಂದಿನ 5 ಅಥವಾ 10 ವರ್ಷಗಳಲ್ಲಿ ಸಿಬ್ಬಂದಿಗಳ ವಸತಿ ಗೃಹ ಸಮಸ್ಯೆ ಬಗೆಹರಿಯಲಿದೆ ಎಂದರು. ಪ್ರಸ್ತುತ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ 6 ರಿಂದ 12ನೇ ತರಗತಿವರೆಗೆ ಒಟ್ಟು 450 ಕ್ಕೂ ಅಧಿಕ ಮಕ್ಕಳಿಗೆ ವಸತಿಯುತ ವಿದ್ಯಾಭ್ಯಾಸ ಒದಗಿಸಲಾಗುತ್ತಿದೆ. ಇಲ್ಲಿನ ಮಕ್ಕಳ ಸುರಕ್ಷತೆ ದೃಷ್ಠಿಯಿಂದ ವಸತಿ ಶಾಲೆಯ ಆವರಣದಲ್ಲಿ ಹೈಮಾಸ್ಟ್‌ ದೀಪ ಮತ್ತು ಸಿಸಿಟಿವಿ ಅಳವಡಿಸಲು ಕ್ರಮವಹಿಸಲಾಗುವುದು.

ಇದೇ ಸಂದರ್ಭದಲ್ಲಿ ವಸತಿ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿ, ಅಲ್ಲಿನ ಸಮಸ್ಯೆಗಳ ಬಗ್ಗೆ ಆಲಿಸಿದರು. ಈ ವೇಳೆ ಕುಡಿಯುವ ನೀರಿನ ಸಮಸ್ಯೆ ಇದ್ದು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ವಿದ್ಯಾರ್ಥಿಯೊಬ್ಬರು ಮನವಿ ಮಾಡಿದರು. ಹಾಗೆಯೇ ವಸತಿ ನಿಲಯಗಳಲ್ಲಿ ಶೌಚಾಲಯ ಹದಗೆಟ್ಟಿವೆ ಎಂದು ಹೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ತಕ್ಷಣವೇ ದುರಸ್ಥಿಗೊಳಿಸುವಂತೆ ನಿರ್ದೇಶನ ನೀಡಿದರು. ಹಾಗೆಯೇ 6 ರಿಂದ 12 ನೇ ತರಗತಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪೂರ್ಣಗೊಂಡ ವಸತಿ ನಿಲಯ ಮತ್ತು ಭೋಧನಾ ಕೊಠಡಿಗಳನ್ನು ಬಳಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಾವೀದ್ ಖರಂಗಿ, ಪ್ರಾಂಶುಪಾಲ ಪರಶುರಾಮ್ ಸೇರಿದಂತೆ ವಸತಿಶಾಲೆ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.