ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ

ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ  Literacy Program in Jnana Jyoti English Medium School

ಕೊಲ್ಹಾರ 24 : ಪಟ್ಟಣದ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪುಟ್ಟ ಮಕ್ಕಳಿಗೆ ವಿದ್ಯಾಭ್ಯಾಸದ ಮೊದಲ ಹೆಜ್ಜೆಯಾದ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹಾಗೂ ಭಕ್ತಿಭಾವದಿಂದ ಆಯೋಜಿಸಲಾಯಿತು. ಶಾಲೆಯ ಆವರಣದಲ್ಲಿ ಅಲಂಕೃತ ವೇದಿಕೆ, ಹೂವಿನ ಸಿಂಗಾರ ಮತ್ತು ದೀಪಾಲಂಕಾರ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಮಸೂತಿಯ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿ ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಕ್ಕಳಿಗೆ ಆಶೀರ್ವಾದ ನೀಡಿದರು. ಆಶೀರ್ವಚನ ನೀಡಿದ ಅವರು, “ಅಕ್ಷರಾಭ್ಯಾಸವು ಜೀವನದ ಮಹತ್ವದ ಆರಂಭವಾಗಿದ್ದು, ವಿದ್ಯೆಯ ಮೂಲಕವೇ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುತ್ತದೆ.

ಮಕ್ಕಳು ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಆದರ್ಶ ಪ್ರಜೆಗಳಾಗಬೇಕು” ಎಂದು ಹೇಳಿದರು. ಓಂ ಶಾಂತಿ ಸಂಸ್ಥೆಯ ಭಾವನಾ ಅಕ್ಕ ಮಾತನಾಡಿ, “ಮಕ್ಕಳಲ್ಲಿ ಉತ್ತಮ ಗುಣಗಳು, ಶಿಸ್ತು ಮತ್ತು ಧಾರ್ಮಿಕ ಮೌಲ್ಯಗಳನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಪೋಷಕರು ಮಕ್ಕಳಿಗೆ ಪ್ರೀತಿ, ಪ್ರೋತ್ಸಾಹ ಹಾಗೂ ಸೂಕ್ತ ಮಾರ್ಗದರ್ಶನ ನೀಡುವುದು ಅತ್ಯಂತ ಅಗತ್ಯ” ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳು ದೇವರ ಸಮ್ಮುಖದಲ್ಲಿ ‘ಅಮ್ಮ’ ಹಾಗೂ ‘ಓಂ’ ಎಂದು ಮೊದಲ ಅಕ್ಷರಗಳನ್ನು ಬರೆಯುವ ಮೂಲಕ ತಮ್ಮ ವಿದ್ಯಾಭ್ಯಾಸಕ್ಕೆ ಶುಭಾರಂಭ ಮಾಡಿದರು. ಪೋಷಕರು ಮಕ್ಕಳೊಂದಿಗೆ ಭಾಗವಹಿಸಿ ಸಂತಸ ವ್ಯಕ್ತಪಡಿಸಿದರೆ, ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ನೀಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.