ಸಮಾಜ ಸೇವೆಯೇ ಬದುಕಿನ ಗುರಿಯಾಗಲಿ: ಡಾ. ಅನೀಲ ಪಾಟೀಲ

ಸಮಾಜ ಸೇವೆಯೇ ಬದುಕಿನ ಗುರಿಯಾಗಲಿ: ಡಾ. ಅನೀಲ ಪಾಟೀಲ  Let social service be the goal of life: Dr. Anil Patil

ತಾಳಿಕೋಟಿ, ಜು. 04: “ನಾವು ನಮಗಾಗಿಯೇ ಬದುಕುವುದು ಮುಖ್ಯವಲ್ಲ. ಸಮಾಜಕ್ಕಾಗಿ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು. ಪರೋಪಕಾರವೇ ಪ್ರತಿಯೊಬ್ಬರ ಜೀವನದ ಗುರಿಯಾಗಬೇಕು” ಎಂದು ಬೆಳಗಾವಿಯ ಲೋಟಸ್ ಆಸ್ಪತ್ರೆಯ ಮೂಳೆ ಹಾಗೂ ಕೀಲು ತಜ್ಞ ಡಾ. ಅನೀಲ ಬಿ. ಪಾಟೀಲ (ಲಿಂಗದಳ್ಳಿ) ಹೇಳಿದರು. ತಾಲೂಕಿನ ಲಿಂಗದಳ್ಳಿ ಗ್ರಾಮದ ಬಿ.ಆರ್‌. ಪಾಟೀಲ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ದಿ. ಬಾಪುಗೌಡ ರಾಮನಗೌಡ ಪಾಟೀಲ ಅವರ 8ನೇ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ಉಚಿತ ನೇತ್ರ, ಮೂಳೆ ಹಾಗೂ ಕೀಲು ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ತಂದೆ ದಿ. ಬಿ.ಆರ್‌. ಪಾಟೀಲ ಅವರ ಆದರ್ಶಗಳೇ ತಮ್ಮ ಬದುಕಿಗೆ ಪ್ರೇರಣೆಯಾಗಿವೆ. ಅವರು ಆಸ್ತಿ ಮಾತ್ರವಲ್ಲ, ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನೂ ನೀಡಿದ್ದರು. ಅವರ ತೋರಿದ ಮಾರ್ಗದಲ್ಲೇ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸುತ್ತಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು. ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ. ದತ್ತಾತ್ರೇಯ ಹೊಸಮಠ ಮಾತನಾಡಿ, ದಿ. ಬಿ.ಆರ್‌. ಪಾಟೀಲ ಅವರ ಕುಟುಂಬದವರು ಸಮಾಜ ಸೇವೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದಾರೆ.

ಅವರ ಸ್ಮರಣಾರ್ಥ ಆಯೋಜಿಸಿರುವ ಈ ಆರೋಗ್ಯ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು. ಶಾಲೆಯ ಮುಖ್ಯಶಿಕ್ಷಕ ಆರಿ​‍್ಬ. ದೇಸಾಯಿ ಮಾತನಾಡಿ, ದಿ. ಬಿ.ಆರ್‌. ಪಾಟೀಲ ಅವರು ಶಿಕ್ಷಣ ಪ್ರೇಮಿಯಾಗಿದ್ದರು. ಅವರು ಶಾಲೆಗೆ ಮೂರು ಎಕರೆ ಜಮೀನು ದಾನ ನೀಡಿದ್ದರಿಂದ ಕಳೆದ 25 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯುತ್ತಿದೆ. ಅವರ ಕುಟುಂಬಕ್ಕೆ ಶಾಲೆ ಸದಾ ಋಣಿಯಾಗಿರುತ್ತದೆ ಎಂದು ಹೇಳಿದರು.  

ಶಿಕ್ಷಕ ಎ.ಎಂ. ಮೂಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸನಗೌಡ ಪಾಟೀಲ (ಲಿಂಗದಳ್ಳಿ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಬಸಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ 2025 - 26 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಬಿ.ಆರ್‌. ಪಾಟೀಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಭಾಗ್ಯಶ್ರೀ ಪಾಟೀಲ ಹಾಗೂ ಅಂಜಲಿ ಬಿರಾದಾರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.