ಪರಿಸರ ಸ್ನೇಹಿ ಜೀವನ ಶೈಲಿ ಪ್ರೇರಣೆ ಆಗಲಿ: ಬಿ.ಕೆ. ಸಂತೋಷ್

ಪರಿಸರ ಸ್ನೇಹಿ ಜೀವನ ಶೈಲಿ ಪ್ರೇರಣೆ ಆಗಲಿ: ಬಿ.ಕೆ. ಸಂತೋಷ್ Let an eco-friendly lifestyle be an inspiration: B.K. Santosh

ಕಾರವಾರ, ಡಿ.2; ಸಾರ್ವಜನಿಕರು ನಿಷೇದಿತ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು. ಪ್ರತಿಯೊಬ್ಬರೂ ಗಿಡಗಳನ್ನು ನೆಡಬೇಕು. ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ಬಳಸುವುದರ ಮೂಲಕ ಪರಿಸರ ಸ್ನೇಹಿ ಜೀವನ ಶೈಲಿಯ ಪ್ರೇರಣೆ ಆಗಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಬಿ.ಕೆ. ಸಂತೋಷ್ ಹೇಳಿದರು. 

ಅವರು ಮಂಗಳವಾರ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ, ವಾಯು ಮಾಲಿನ್ಯ ನಿಯಂತ್ರಣಾ ಜಾಗೃತಿ ಮಾಸಾಚರಣೆ ಅಂಗವಾಗಿ , ಪ್ರಾದೇಶಿಕ ಸಾರಿಗೆ ಕಚೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಹಾಗೂ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಕಾರವಾರ ಇವರ ಸಹಯೋಗದೊಂದಿಗೆ “ವಾಯು ಮಾಲಿನ್ಯ ನಿಯಂತ್ರಣ ಮತ್ತು ತಡೆಗಟ್ಟುವಿಕೆ” ಎಂಬ ಧ್ಯೇಯವಾಕ್ಯದೊಂದಿಗೆ ಅಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ ಡಿಸೆಂಬರ್ 2 ರಂದು ಭಾರತದಲ್ಲಿ ಆಚರಿಸಲಾಗುತ್ತಿದ್ದು, 1984 ರ ಭೋಪಾಲ್ ಅನಿಲ ದುರಂತದಲ್ಲಿ ಸಾವಿರಾರು ಜನರು ಸಾವೀಗೀಡಾದ ದುರ್ಘಟನೆಗೆ ಶ್ರದ್ಧಾಂಜಲಿ ಸಲ್ಲಿಸಲು ಮತ್ತು ಭವಿಷ್ಯದಲ್ಲಿ ಪರಿಸರ ಮಾಲಿನ್ಯ ತಪ್ಪಿಸುವ ಜ್ಞಾನ ಹರಡುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದ ಅವರು ವಾಯು ಮಾಲಿನ್ಯಕ್ಕೆ ಕಾರಣಗಳು, ಅದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳು ಹಾಗೂ ನಿಯಂತ್ರಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.  

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿಯ ಪ್ರಾಜೆಕ್ಟ್‌ ಅಸಿಸ್ಟೆಂಟ್ ಡಾ. ಅಮೃತಾ ಎಸ್‌. ಶೇಟ್, ವಿದ್ಯಾರ್ಥಿಗಳಿಗೆ ಪರಿಸರದಲ್ಲಿ ವಾಯು ಮಾಲಿನ್ಯದ ಕಾರಣ ಹಾಗೂ ಅದರಿಂದಾಗುವ ಪರಿಣಾಮಗಳ ಬಗ್ಗೆ ಮತ್ತು ಅದನ್ನು ತಡೆಗಟ್ಟಲು ವಿದ್ಯಾರ್ಥಿಗಳ ಪಾತ್ರದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.  

ಕಾರವಾರ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲೆ ಗೀತಾ ಎಸ್‌. ವಾಲೀಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  

ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಕಾರುಣ್ಯ ಶೆಟ್ಟಿ, ಸಂಜು ಸಣ್ಣಿಂಗನವರ್, ಪ್ರಾದೇಶಿಕ ಸಾರಿಗೆ ಕಚೇರಿಯ ಸಿಬ್ಬಂದಿಗಳಾದ ಶಿವಾಜಿ, ಪ್ರವೀಣ ಗಾಂವಕರ್, ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.