ಕೋಲ್ಕತ 22: ಲೋಕಸಭಾ ಅಭ್ಯರ್ಥಿಯಾಗಿ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಕಣಕ್ಕಿಳಿಸಿದ ಪಕ್ಷದ ನಿರ್ಧಾರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಸಾಧ್ವಿ ವಿರುದ್ಧ ಮಾಡಲಾದ ಆರೋಪಗಳೆಲ್ಲವೂ ಸುಳ್ಳಾಗಿದ್ದು, ಮಾಲೆಗಾಂವ್ ಸ್ಫೋಟದ ನಿಜವಾದ ಅಪರಾಧಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಅಮಿತ್ ಶಾ ಹೇಳಿದರು.
2008ರ ಮಾಲೆಗಾಂವ್ ಸ್ಫೋಟದಲ್ಲಿ ಆರೋಪಿಯಾಗಿ ಬಂಧಿತರಾಗಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅವರನ್ನು ಬಿಜೆಪಿ ಭೋಪಾಲ್ ಕ್ಷೇತ್ರದಿಂದ ಕಣಕ್ಕಿಳಿಸಿದೆ.
'ಇದು ಸಂಪೂರ್ಣ ಸರಿಯಾದ ನಿರ್ಧಾರ. ಅವರ ವಿರುದ್ಧದ ಆರೋಪಗಳು ನಿರಾಧಾರ. ಸಾಧ್ವಿ ಅಥವಾ ಸ್ವಾಮಿ ಅಸೀಮಾನಂದರ ವಿರುದ್ಧದ ಯಾವ ಆರೋಪಗಳೂ ಸಾಬೀತಾಗಿಲ್ಲ' ಎಂದು ಸುದ್ದಿಗೋಷ್ಠಿಯಲ್ಲಿ ಶಾ ತಿಳಿಸಿದರು.
ನಿಜವಾದ ಅಪರಾಧಿಗಳನ್ನು ಬಂಧಿಸಿದ ಕೂಡಲೇ ಬಿಟ್ಟು ಕಳುಹಿಸಲಾಗಿದೆ. ಅವರನ್ನು ಯಾಕಾಗಿ ಬಿಡುಗಡೆ ಮಾಡಲಾಯಿತು ಎಂಬುದೇ ಪ್ರಶ್ನೆ ಎಂದು ಅಮಿತ್ ಶಾ ನುಡಿದರು.
ವಿವಾದಕ್ಕೆ ಗುರಿಯಾದ ಎನ್‌ಆರ್‌ಸಿ ಮತ್ತು ಪೌರತ್ವ (ತಿದ್ದುಪಡಿ) ವಿಧೇಯಕ ಕುರಿತು ಪ್ರಸ್ತಾಪಿಸುತ್ತ, ವಲಸಿಗರು ಆತಂಕ ಪಡಬೇಕಾಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮೊದಲು ಸಂಸತ್ತಿನಲ್ಲಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆಯುತ್ತದೆ. ನಂತರ ಅಕ್ರಮ ವಲಸಿಗರನ್ನು ಹೊರಹಾಕಲು ಅದನ್ನು ದೇಶಾದ್ಯಂತ ಜಾರಿಗೊಳಿಸಲಾಗುತ್ತದೆ ಎಂದು ವಿವರಿಸಿದರು.
'ವಲಸಿಗರಿಗೆ ಪೌರತ್ವ ನೀಡಲಾಗುತ್ತದೆ. ಅವರು ಈ ದೇಶದಲ್ಲೇ ಪೂರ್ಣ ಘನತೆ-ಗೌರವದೊಂದಿಗೆ ಬದುಕಬಹುದಾಗಿದೆ. ಮಮತಾ ಬ್ಯಾನರ್ಜಿ ನೀಡುವ ದಾರಿ ತಪ್ಪಿಸುವ ಹೇಳಿಕೆಗಳಿಗೆ ಕಿವಿಗೊಡಬೇಕಿಲ್ಲ' ಎಂದು ಬಿಜೆಪಿ ಅಧ್ಯಕ್ಷರು ಹೇಳಿದರು.
ಪೌರತ್ವ ವಿಧೇಯಕವನ್ನು ಜನವರಿ 8ರಂದು ಲೋಕಸಭೆ ಅಂಗೀಕರಿಸಿತ್ತು. ಆದರೆ ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತವಿಲ್ಲದ್ದರಿಂದ ಮಂಡಿಸಿರಲಿಲ್ಲ.
2020ರ ಹೊತ್ತಿಗೆ ರಾಜ್ಯಸಭೆಯಲ್ಲೂ ಬಿಜೆಪಿಗೆ ಬಹುಮತ ದೊರೆಯಲಿದೆ. ಆಗ ವಿಧೇಯಕ ಅಂಗೀಕರಿಸಲು ಯಾವುದೇ ಸಮಸ್ಯೆ ಇರದು ಎಂದು ಅಮಿತ್ ಶಾ ತಿಳಿಸಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿದವಿತ್‌ನಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ಪೌರತ್ವ ಕುರಿತು ನೀಡಿದ ತಪ್ಪು ಮಾಹಿತಿಗಳ ಬಗ್ಗೆ ಚುನಾವಣಾಧಿಕಾರಿ ಗಮನ ಹರಿಸಬೇಕು ಎಂದು ಅಮಿತ್ ಶಾ ಒತ್ತಾಯಿಸಿದರು.
ಬಹುಮತಕ್ಕೆ ಕೊರತೆಯಾದಲ್ಲಿ ಬಿಜೆಪಿ ತೃಣಮೂಲ ಕಾಂಗ್ರೆಸ್ ಬೆಂಬಲ ಕೋರುವುದೆ? ಎಂಬ ಪ್ರಶ್ನೆಗೆ, 'ಅಂತಹ ಸಂದರ್ಭವೇ ಬರುವುದಿಲ್ಲ. ನಾವು ಸಂಪೂರ್ಣ ಬಹುಮತ ಪಡೆಯುತ್ತೇವೆ' ಎಂದು ಶಾ ಉತ್ತರಿಸಿದರು.
ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೇ ಧಕ್ಕೆಯಾಗಿದೆ ಎಂದು ಪುನರುಚ್ಚರಿಸಿದ ಅಮಿತ್ ಶಾ, ರಾಜ್ಯದ ಜನತೆ ಈ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಸೋಲಿಸಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದರು.