ಭಕ್ತರ ಕಲ್ಪತರು ಧಾರವಾಡದ ಕೆಲಗೇರಿ ಕಲ್ಮೇಶ್ವರ

ಭಕ್ತರ ಕಲ್ಪತರು ಧಾರವಾಡದ ಕೆಲಗೇರಿ ಕಲ್ಮೇಶ್ವರ Kelageri Kalmeshwar temple

ಕಲ್ಮೇಶ್ವರನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಪ್ರತಿ ವರ್ಷ ಬಸವ ಜಯಂತಿಯಂದು ಈ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜಾತ್ರೆ ಜರುಗುತ್ತದೆ. ಧಾರವಾಡದ ಕೆಲಗೇರಿಯಲ್ಲಿರುವ ಶ್ರೀ ಕಲ್ಮೇಶ್ವರ ಎಂದೆರ ಈಶ್ವರನ ಪ್ರತಿರೂಪವೇ ಎನ್ನುವ ಮನೋಭಾವ ಭಕ್ತರಲ್ಲಿದೆ. ಕೆಲಗೇರಿ ಕೆರೆಯ ದಡದಲ್ಲಿ ಈಶ್ವರ ಲಿಂಗದ ವಾಸ್ತುವಿನ್ಯಾಸದಲ್ಲಿರುವ ಈ ದೇಗುಲ ಭಕ್ತರು ಸೇರಿದಂತೆ ನೂರಾರು ಪ್ರವಾಸಿಗರನ್ನು ತನ್ನ ಸನ್ನಿಧಿಯತ್ತ ಸೆಳೆಯುತ್ತಿದೆ. 

ಶ್ರೀ ಕಲ್ಮೇಶ್ವರ ದೇವಸ್ಥಾನಕ್ಕೆ ದೊಡ್ಡ ಇತಿಹಾಸವೇ ಇದೆ. ಮಹಾತಪಸ್ವಿ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಲೋಕಕಲ್ಯಾಣಕ್ಕಾಗಿ ತಪ್ಪಸ್ಸನ್ನಾಚಾರಿಸುತ್ತಾ ಪ್ರಪಂಚ ಪರ್ಯಟನೆ ನಡೆಸಿ ಕೆಲಗೇರಿಗೆ ಬಂದಿದ್ದರು ಎನ್ನುವದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ. 1911ರಲ್ಲಿ ಸರ್‌.ಎಂ.ವಿಶ್ವೇಶ್ವರಯ್ಯನವರು ಕೆರೆಯನ್ನು ನಿರ್ಮಿಸುವ ಪೂರ್ವದಲ್ಲೇ ಕಲ್ಮೇಶ್ವರನ ಗುಡಿಯು ಈ ಸ್ಥಳದಲ್ಲಿತ್ತೆಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಆದ್ದರಿಂದ ಕಲ್ಮೇಶ್ವರನ ಗುಡಿಯ ಜಾಗವನ್ನಷ್ಟೇ ಬಿಟ್ಟು ಮೂರು ದಿಕ್ಕಿನ ಜಾಗದಲ್ಲಿ ಅಂದಾಜು 174 ಎಕರೆ ವ್ಯಾಪ್ತಿಯಲ್ಲಿ ಕೆರೆಯನ್ನು ನಿರ್ಮಿಸಿದ್ದಾರೆ. ಶತಮಾನದ ಹಿಂದೆಯೇ ಕೆಲಗೇರಿಯ ವೀರನಗೌಡ ಪಾಟೀಲರು ದೇವಸ್ಥಾನದ ನವೀಕರಣಕ್ಕೆ  ಮುಂದಾಗಿ ಹಳೆಯ ಕಲ್ಮೇಶ್ವರ ಗುಡಿಯನ್ನು ನಿರ್ಮಿಸಿದರು. 2009ರಲ್ಲಿ ಕಾಶಿ ಪೀಠದ ಜಗದ್ಗುರುಗಳಿಂದ ಭೂಮಿ ಪೂಜೆಯಾಗಿ, 2014ರಲ್ಲಿ ದೇವಸ್ಥಾನ ಪೂರ್ಣಗೊಂಡು ಕಾಶಿ ಜಗದ್ಗುರುಗಳ ಅಮೃತ ಹಸ್ತದಿಂದ ಆರಂಭಗೊಂಡು ಹೊಸ ರೂಪ ಪಡೆಯಿತು. 

ಈ ದೇವಸ್ಥಾನ ರಚನೆಯೇ ವಿಭಿನ್ನವಾಗಿದೆ. ದೇವಸ್ಥಾನದ ಮೇಲ್ಭಾಗದಲ್ಲಿ ಅತ್ಯಂತ ದೊಡ್ಡ ಗಾತ್ರದ ಶಿವಲಿಂಗವಿದ್ದು, ಅದರೆ ಮೇಲೆ ಐದು ತಲೆಯ ಸರಿ​‍್ವದೆ. ದೇವಾಲಯದ ತಳಭಾಗವು ಚೌಕಾಕಾರದಲ್ಲಿದ್ದು, ಮುಂಭಾಗವು ವೃತ್ತಾಕಾರವಾಗಿದೆ. ಗರ್ಭಗುಡಿಯಲ್ಲಿ ಶಿವಲಿಂಗವು ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಸಾಕ್ಷಾತ್ ಕೈಲಾಸವೇ ನಿಂತು ಶಿವನನ್ನು ನೋಡಿದಂತಾಗುತ್ತದೆ. ಈ ಶಿವಲಿಂಗಕ್ಕೆ ಅಭಿಮುಖವಾಗಿ ನಂದಿ ಪ್ರತಿಮೆಯನ್ನು ಕಾಣಬಹುದು. ದೇಗುಲ ಪ್ರವೇಶಕ್ಕೂ ಮುನ್ನ ದೀಪಸ್ತಂಭವಿದ್ದು, ಈ ದೇಗುಲದ ಪ್ರಾಕಾರದಲ್ಲಿ ಕಿರು ದೇವಾಲಯಗಳು ಕಂಡುಬರುತ್ತವೆ. 

ಪ್ರತಿವರ್ಷ ಬಸವ ಜಯಂತಿಯಂದು ಕಲ್ಮೇಶ್ಮರ ದೇವರ ಜಾತ್ರೆಯು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಲೋಕುರ ಗ್ರಾಮ ದೇವತೆಗಳಾದ ದ್ಯಾಮವ್ವ ಮತ್ತು ದುರ್ಗವ್ವ ಎಂಬ ಈರ‌್ವರೂ ಕಲ್ಮೇಶ್ವರ ಸಹೋದರಿಯರಾಗಿದ್ದು, ಜಾತ್ರೆಯಂದು ಲೋಕುರ ಗ್ರಾಮಗಳ ದೇವಸ್ಥಾನದಲ್ಲಿ ಇವರಿಗೆ ಉಡಿ ತುಂಬಿದ ಕಾಯಿಯನ್ನು ತಂದ ನಂತರವಷ್ಟೇ ಕಲ್ಮೇಶ್ವರನಿಗೆ ಕೆಲಗೇರಿಯಲ್ಲಿ ರಥೋತ್ಸವವು ವಿಜೃಂಭಣೆಯಿಂದ ಜರುಗುವದು. ದೇವಸ್ಥಾನದ ಪ್ರಧಾನ ಅರ್ಚಕ ಬಸಯ್ಯ ಹಿರೇಮಠರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ಶ್ರೀ ಕಲ್ಮೇಶ್ವರ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ದೇವಸ್ಥಾನ ಟ್ರಸ್ಟ್‌ ಕಮೀಟಿಯ ಅಧ್ಯಕ್ಷ ರುದ್ರಗೌಡ ಪಾಟೀಲ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಲೂತಿಮಠ, ಕಾರ್ಯದರ್ಶಿ ಪ್ರಭು ಅಜಗೊಂಡನವರ, ಕೋಶಾಧ್ಯಕ್ಷ ಚನ್ನಬಸಯ್ಯ ಹೊಂಗಲಮಠ ಹಾಗೂ ಟ್ರಸ್ಟಿನ ಪದಾಧಿಕಾರಿಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಲಿವೆ. 

ಶಿವರಾತ್ರಿ, ಶ್ರಾವಣ ಮಾಸದಲ್ಲಿ ಕಲ್ಮೇಶ್ವರ ಲಿಂಗಕ್ಕೆ ವಿಶೇಷ ರುದ್ರಾಭೀಷೇಕ, ಬಿಲ್ವ ಪತ್ರೆ ಅರ್ಚನೆ, ಭಜನಾ ಕಾರ್ಯಕ್ರಮ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಬೆಳ್ಳಿಗೆಯಿಂದ ರಾತ್ರಿವರೆಗೆ ಕಲ್ಮೇಶ್ಮರನ ಸನ್ನಿಧಿಗೆ ಭಕ್ತರ ದಂಡೆ ಹರಿದು ಬರುತ್ತದೆ. ಈ ದೇವಾಲಯವು ಕೆರೆಯ ದಂಡೆಯ ಮೇಲೆ ನಯನ ಮನೋಹರವಾಗಿದ್ದು, ಅತ್ಯಂತ ಪ್ರಶಾಂತ ವಾತಾವರಣವನ್ನು ಹೊಂದಿದೆ. ವಿದ್ಯಾಕಾಶಿ ಧಾರವಾಡಕ್ಕೆ ಭೇಟಿ ನೀಡಿದಾಗ, ಧಾರವಾಡ ನಗರದಿಂದ ಮೂರು ಕಿ.ಮೀ. ದೂರದಲ್ಲಿರುವ ಕೆಲಗೇರಿಯ ಕಲ್ಮೇಶ್ವರ ದೇವಾಲಯವನ್ನು ದರ್ಶನ ಮಾಡಲು ಮರೆಯದಿರಿ. 

ಸುರೇಶ ಗುದಗನವರ 

ಧಾರವಾಡ  

9449294694