ಜಮೀನು ಸಮಸ್ಯೆ ಇತ್ಯರ್ಥಕ್ಕೆ ತಹಶಿಲ್ದಾರರಿಗೆ ಸಂಪೂರ್ಣ ಅಧಿಕಾರ ಕೊಡುವಂತೆ ಕರ್ನಾಟಕ ರೈತ ಸಂಘ ಒತ್ತಾಯ

ಜಮೀನು ಸಮಸ್ಯೆ ಇತ್ಯರ್ಥಕ್ಕೆ ತಹಶಿಲ್ದಾರರಿಗೆ ಸಂಪೂರ್ಣ ಅಧಿಕಾರ ಕೊಡುವಂತೆ ಕರ್ನಾಟಕ ರೈತ ಸಂಘ ಒತ್ತಾಯ Karnataka Farmers' Association demands full authority to be given to Tahsildars to resolve land iss

ವಿಜಯಪುರ 25 : ಜಮೀನು ದಾರಿ ಸಮಸ್ಯೆ ಇತ್ಯರ್ಥಕ್ಕೆ ಬಜೆಟ್ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ಮಾಡಿ ತಹಶಿಲ್ದಾರರಿಗೆ ಸಂಪೂರ್ಣ ಅಧಿಕಾರ ವಹಿಸಿ ಕೊಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಘಟಕದ ಪದಾಧಿಕಾರಿಗಳು ಬುಧವಾರ ಮುಖ್ಯಮಂತ್ರಿಗಳಿಗೆ ಹಾಗೂ ಕಂದಾಯ ಸಚಿವರಿಗೆ ವಿಜಯಪುರ ಅಪರ ಜಿಲ್ಲಾಧಿಕಾರಿ ಡಾ. ಓದ್ರಾಮ ಅವರ ಮೂಲಕ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಜಮೀನು ದಾರಿ ಸಮಸ್ಯೆವೊಂದು ರಾಜ್ಯಾದ್ಯಂತ ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ದಿನ ನಿತ್ಯ ಹಳ್ಳಿಗಳಲ್ಲಿ ಹೊಲಗಳ ದಾರಿಗಾಗಿ ಕಲಹಗಳು ನಡೆಯುತ್ತಲೆ ಇವೆ. ಆದರೆ ಸರಕಾರ ಮಾತ್ರ ಅದಕ್ಕೂ ನಮಗೂ ಸಂಬಂದವೇ ಇಲ್ಲ ಎನ್ನುವ ರೀತಿಯಲ್ಲಿ ಮೌನ ವಹಿಸಿದೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ರೈತರು ದಾರಿಗಾಗಿ ಹೊಡೆದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲು ಹತ್ತವುದು ಮಾಮುಲಾಗಿಬಿಟ್ಟಿದೆ ಪೊಲೀಸ್ ಇಲಾಖೆ ಅಧಿಕಾರಿಗಳು ಇದು ಸಿವ್ಹಿಲ್ ಸ್ವರೂಪದ ಪ್ರಕರಣವಿರುವುದರಿಂದ ರೈತರು ನ್ಯಾಯಾಲಯಕ್ಕೆ ಹೋಗಿ ಎಂದು ಹೇಳುವುದು ಸಾಮಾನ್ಯವಾಗಿದೆ ನ್ಯಾಯಾಲಯದ ಮೆಟ್ಟಿಲೇರಿದರೆ ಪ್ರಕರಣ ಇತ್ಯರ್ಥವಾಗಲು ಕನಿಷ್ಠ 10 ರಿಂದ 12 ವರ್ಷಗಳ ಕಾಲ ಬೇಕು ಲಕ್ಷಾಂತರ ಹಣ ಖರ್ಚು ಮಾಡುವುದಲ್ಲದೆ ಇತ್ಯರ್ಥವಾಗುವರೆಗೂ ಜಮೀನು ಪಾಳು ಬೀಳುತ್ತಿವೆ.

ಅಲ್ಲಿಯವರೆಗೆ ರೈತ ಕುಟುಂಬಗಳು ಜೀವನ ನಡೆಸುವುದಾದರು ಹೇಗೆ ಈ ರೀತಿಯಾಗುವದರಿಂದ ಹಳ್ಳಿಗಳಲ್ಲಿ ರೈತರ ಮಧ್ಯ ದ್ವೇಷದ ವಾತಾವರಣ ಉಂಟಾಗಿ ಹೊಡೆದಾಟಗಳು ನಡೆಯುತ್ತಿವೆ. ಕೆಲವೊಂದು ಭಾಗದಲ್ಲಿ ದಾರಿಗಾಗಿ ಕೊಲೆಗಳು ನಡಿದಿವೆ ಇಂತಹ ಗಂಭೀರ ಸಮಸ್ಯೆಗಳನ್ನು ಅರಿತ ಅಖಂಡ ಕರ್ನಾಟಕ ರೈತ ಸಂಘ ಹೋರಾಟವನ್ನು ಕೈಗೆತ್ತಿಕೊಂಡಿತ್ತು ನಿರಂತರ 12 ವರ್ಷಗಳ ವರೆಗೆ ಹೋರಾಟ ಮಾಡುತ್ತಾ ಬಂದಿತ್ತು ಹೋರಾಟವನ್ನು ಅರಿತ ಸರಕಾರ ಕಾಟಾಚಾರಕ್ಕೆ ಎಂಬಂತೆ ಸುತೋಲೆ ಹೊರಡಿಸಿತು ನಕ್ಷೆಯಲ್ಲಿ ದಾರಿ ಗುರ್ತು ಇದ್ದರೆ (ನಕ್ಷೆ ಕಂಡ ದಾರಿ) ಅಂತವುಗಳನ್ನು ಬಂದು ಮಾಡಿದ ಸಂದರ್ಭದಲ್ಲಿ ತಹಶೀಲ್ದಾರರು ತಾಲೂಕಾ ಮ್ಯಾಜಿಸ್ಟ್ರೇಟ್ ಆಗಿ ದಾರಿ ಬಿಡಿಸಿಕೊಡುವ ಅಧಿಕಾರವು ತಹಶೀಲ್ದಾರರಿಗೆ ಇದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಹೀಗೆ ಇದ್ದಾಗಲು ಕೂಡಾ ತಹಶೀಲ್ದಾರಗಳು ಜವಾಬ್ದಾರಿ ತೆಗೆದುಕೊಂಡು ದಾರಿ ಬಿಡಿಸಿಕೊಡುತ್ತಿಲ್ಲ ಅದು ಅಲ್ಲದೆ ನಕ್ಷೆಯಲ್ಲಿ ದಾರಿ ಗುರುತು ಇರುವದು ಅಪರೂಪ ಸಾವಿರ ರೈತರಲ್ಲಿ ಒಬ್ಬ ರೈತನಿಗೆ ನಕ್ಷೆಯಲ್ಲಿ ದಾರಿ ಗುರುತು ಸಿಗಬಹುದು ಅದು ಇದ್ದರೆ ಅವನ ಪುಣ್ಯ ಬಹುತೇಕ ನಕ್ಷೆಯಲ್ಲಿ ದಾರಿ ಗುರುತು ಇರುವುದಿಲ್ಲ ಬ್ರಿಟೀಷರ ಆಡಳಿತದ ಸಂದರ್ಭದಲ್ಲಿ ನಕ್ಷೆಯಲ್ಲಿ ಗುರುತಿಸಿಲ್ಲ. ಇಂತಹದರಲ್ಲಿ ನಕ್ಷೆಯಲ್ಲಿ ಇದ್ದರೆ ಮಾತ್ರ ದಾರಿ ಬಿಡಿಸಿ ಕೊಡುತ್ತೇವೆಂದು ಹೇಳುವದು ಸರಕಾರದ ಧೋರಣೆ ಸರಿಯಲ್ಲ. ಸರಕಾರ ಹೊರಡಿಸಿದ ಸುತ್ತೋಲೆ ನಾಮಕೆ ವಾಸ್ತೆ ಎಂಬಂತಾಗಿದೆ (ಈಜಮೆಂಟರಿ ರೈಟ್ಸ್‌) ಅನುಭೋಗದ ಹಕ್ಕು ಅಧಿನಿಯಮ 1882 ರ ಪ್ರಕಾರ ಯಾವ ರೈತ ನಿರಂತರವಾಗಿ 30 ವರ್ಷಗಳ ಮೇಲ್ಪಟ್ಟು ಒಂದು ದಾರಿಯನ್ನು ಬಳಸಿ ತಮ್ಮ ಜಮೀನುಗಳಿಗೆ ತೆರಳುತ್ತಿದ್ದರೆ ಅದನ್ನು ವಹಿವಾಟು ದಾರಿಯೆಂದು ಪರಿಗಣಿಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಿದ್ದರು

ಕೂಡಾ ಸುತ್ತೋಲೆಯ ಕೊನೆಯ ಪ್ಯಾರಾದಲ್ಲಿ ಇಲ್ಲದ ಕಾರಣ ಯಾವ ತಹಶೀಲ್ದಾರರು ಸರಕಾರದ ಸುತ್ತೋಲೆಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಜಮೀನು ಅಂದ ಮೇಲೆ ಹಾಯ್ದು ಹೋಗಲು ದಾರಿ ಬೇಕೆ ಬೇಕು ಇಲ್ಲದಿದ್ದರೆ ಜಮೀನು ಉಳುಮೆ ಮಾಡುವದಾದರು ಹೇಗೆ? ಇಂತಹ ಗಂಭೀರ ಸಮಸ್ಯೆ ಸರಕಾರಕ್ಕೆ ಏಕೆ ಅರ್ಥವಾಗುತ್ತಿಲ್ಲ ರೈತರಿಗಾಗಿ ಕಾನೂನು ತಿದ್ದುಪಡಿಮಾಡದ ಸರಕಾರ ತಮ್ಮ ಸ್ವಹಿತಾಸಕ್ತಿಗಾಗಿ ಕಾನೂನು ಅಡ್ಡಿಯಾದರೆ ಕಾನೂನನ್ನೆ ಬದಲಾಯಿಸುತ್ತಾರೆ, ಆದರೆ ರೈತರ ವಿಷಯದಲ್ಲಿ ಕಾನೂನು ತಿದ್ದುಪಡಿ ಮಾಡಲು ಮೀನಮೇಷ ಮಾಡುತ್ತಿದೆ ಈಗಾಗಲೆ ಕಂದಾಯ ಸಚಿವರಿಗೆ ಬೇಟೆಯಾಗಿ ಮತ್ತೆ ಮನವರಿಕೆ ಮಾಡಿಕೊಡಲಾಗಿದೆ ಈಗ ಮುಂಬರುವ ಬಜೆಟ್‌ನಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರದಂತೆ ಕಾನೂನು ತಿದ್ದುಪಡಿಮಾಡಿ ಸುಗ್ರೀವಾಜ್ಞೆ ಹೊರಡಿಸಿ ಜಮೀನುಗಳ ದಾರಿ ಸಮಸ್ಯೆಗೆ ಅಂತ್ಯ ಹಾಡಬೇಕು ಇಲ್ಲದಿದ್ದರೆ ರಾಜ್ಯ ಮಟ್ಟದಲ್ಲಿ ಬೃಹತ್ ಪ್ರಮಾಣದ ಹೋರಾಟ ಹಾಗೂ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕುಲಕರ್ಣಿ ಎಚ್ಚರಿಕೆ ನೀಡಿದರು. 

ಈ ಸಂದರ್ಭದಲ್ಲಿ ಹುಣಶ್ಯಾಳಿ ಪಿ.ಬಿ.ಯ ಸಂಗನಬಸವ ಮಹಾಸ್ವಾಮೀಜಿಗಳು, ತಾಲೂಕ ಅಧ್ಯಕ್ಷ ಉಮೇಶ ವಾಲೀಕಾರ, ರೈತ ಮುಖಂಡ ವಿಠ್ಠಲ ಬಿರಾದಾರ, ಬಸವನ ಬಾಗೇವಾಡಿ ತಾಲೂಕು ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ರೈತ ಮುಖಂಡ ಲಂಕೇಶ ತಳವಾರ, ರೈತ ಮುಖಂಡ ಗುರಲಿಂಗಪ್ಪ ಪಡಲಸಗಿ, ರೈತ ಮುಖಂಡ ಹಣಮಂತ ಹಂದ್ರಾಳ, ಕಿರಣ ಮೇಲಿನಕೇರಿ, ದತ್ತಾತ್ರೇಯ ಕುಲಕರ್ಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.