ಲೋಕದರ್ಶನ ವರದಿ
ಶಿರಹಟ್ಟಿ 14: ಕಪ್ಪತ್ತಗುಡ್ಡ ವ್ಯಾಪ್ತಿಯ 35 ಗ್ರಾಮಗಳಲ್ಲಿ ಪೂರ್ವಭಾವಿ ಸಭೆ ನಡೆಸಿ ಸಾಧಕ-ಬಾಧಕಗಳನ್ನು ಅರಿಯದೇ ಏಕಾಏಕೀ ಕಪ್ಪತ್ತಗುಡ್ಡ ವನ್ಯಜೀವಿ ಅಭಯಾರಣ್ಯ ಎಂದು ಸರಕಾರ ಘೋಷಣೆ ಮಾಡಿದ್ದು ಖಂಡನೀಯ. ಸರಕಾರ ಕೂಡಲೇ ಈ ಅವೈಜ್ಞಾನಿಕ ಯೋಜನೆಯನ್ನು ಹಿಂಪಡೆಯಬೇಕು ಎಂದು ಕನರ್ಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕ ರಾಜ್ಯಾಧ್ಯಕ್ಷರಾದ ಸುಮತಿಶ್ರಿ ನವಲಿಹಿರೇಮಠ ಹೇಳಿದರು.
ಶಿರಹಟ್ಟಿ ತಾಲೂಕಿನ ಅಕ್ಕಿಗುಂದ, ಚನ್ನಪಟ್ಟಣ, ಶೆಟ್ಟಿಕೇರಿ, ಬಟ್ಟೂರು, ಛಬ್ಬಿ, ವರವಿತಾಂಡಾ, ಮಜ್ಜೂರುತಾಂಡಾಗಳಲ್ಲಿ ಸಂಚರಿಸಿ ಜಲ್ಲಿಕೇರಿ ತಾಂಡಾದಲ್ಲಿ ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಕಪ್ಪತ್ತಗುಡ್ಡ ವನ್ಯ ಜೀವಿ ಅಭಯಾರಣ್ಯ ಘೋಷಣೆಯನ್ನು ಸರಕಾರ ಹಿಂಪಡೆಯಲು ಆಗ್ರಹಿಸಿ ನಡೆಯುತ್ತಿರುವ ಪತ್ರ ಚಳುವಳಿ ಅಭಿಯಾನ ಸಪ್ತಾಹದಲ್ಲಿ ಭಾಗವಹಿಸಿ ಕಪ್ಪತ್ತಗುಡ್ಡ ವನ್ಯಜೀವಿ ಅಭಯಾರಣ್ಯ ಘೋಷಣೆ ಮಾಡಿದ್ದರಿಂದ ಬಗರಹುಕುಂ ಸಾಗುವಳಿದಾರರು ಬೀದಿಪಾಲಾಗಲಿದ್ದಾರೆ ಎಂದು ಅವರು ಹೇಳಿದರು.
ನೂರಾರು ವರ್ಷಗಳಿಂದ ಕಪ್ಪತ್ತಗುಡ್ಡ ಭಾಗದಲ್ಲಿ ಭೂಮಿಯನ್ನು ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಇಲ್ಲಿಯವರೆಗೂ ಆಳಿದ ಸರಕಾರಗಳು ರೈತರ ಭೂಮಿ ಒಡೆತನದ ಹಕ್ಕುಪತ್ರ/ ಪಹಣಿಗಳನ್ನು ಕೊಟ್ಟಿಲ್ಲ. ಇದರಿಂದ ರೈತಾಪಿ ಜನರಿಗೆ ತೊಂದರೆಯಾಗಿದೆ. ನಮ್ಮ ಬಂಜಾರಾ ಸಮುದಾಯದವರು ಹಿಂದಿನ ದಿನಗಳಲ್ಲಿ ರೈತರ ಮನೆಗಳಲ್ಲಿ ಜೀತ ಇದ್ದು, ಕಟ್ಟಿಗೆ ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಈಗ ಭೂಮಿ ಉಳುಮೆ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈಗ ಸರಕಾರ ಕಪ್ಪತ್ತಗುಡ್ಡವನ್ನು ವನ್ಯಜೀವಿ ಅಭಯಾರಣ್ಯ ಮಾಡುವುದರಿಂದ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತರು ಗುಳೆ ಹೋಗುವ ಸರದಿ ಬರುತ್ತದೆ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.
ರಾಜ್ಯ ಪ್ರಧಾನ ಸಂಘಟನಾ ಕಾರ್ಯದಶರ್ಿ ಅಣ್ಣಪ್ಪಗೌಡ ದೇಸಾಯಿ ಮಾತನಾಡಿ, ಈಗಾಗಲೇ ಹಲವಾರು ರಾಜ್ಯಗಳಲ್ಲಿ ವನ್ಯಜೀವಿ ಅಭಯಾರಣ್ಯ ಜಾರಿಗೆ ತಂದರೂ ಕೂಡಾ ಅಲ್ಲಿಯ ಜನರ ವಿರೋಧದಿಂದ ಈ ಕಾಯ್ದೆ ವಿಫಲವಾಗಿದೆ. ಕಪ್ಪತ್ತಗುಡ್ಡ ಪ್ರದೇಶದಲ್ಲಿ ಯಾವುದೇ ಅಪಾಯಕಾರಿ ಪ್ರಾಣಿಗಳಿರುವುದಿಲ್ಲ. ಇಲ್ಲಿ ವನ್ಯಜೀವಿ ಅಭಯಾರಣ್ಯ ಅವಶ್ಯಕತೆ ಇಲ್ಲದಿರುವುದನ್ನು ಸರಕಾರ ಮನಗಾಣಬೇಕು. ಈ ಕಾಯ್ದೆಯನ್ನು ಹಿಂದಕ್ಕೆ ಪಡೆಯುವವರೆಗೂ ರಾಜ್ಯಾದ್ಯಂತ ಹೋರಾಟ ಮುಂದುವರೆಯಲಿದೆ ಎಂದರು.
ಬಸವಣ್ಣೆಯ್ಯ ಹಿರೇಮಠ ಮಾತನಾಡಿ, ಕಪ್ಪತ್ತಗುಡ್ಡ ಉಳಿದು ಬೆಳೆಯಬೇಕಾದರೆ ಈ ಭಾಗದ ಜನರ ಸಹಕಾರ ಬೇಕಾಗುತ್ತದೆ. ಕಪ್ಪತ್ತಗುಡ್ಡವನ್ನು ವನ್ಯಜೀವಿ ಅಭಯಾರಣ್ಯ ಘೋಷಣೆ ಮಾಡುವುದಕ್ಕಿಂತ ಇದನ್ನು ಹಿಂಪಡೆದು ಕಪ್ಪತ್ತಗುಡ್ಡ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಇಲ್ಲಿನ ವನಸ್ಪತಿ ಸಸ್ಯಗಳನ್ನು ಇಡೀ ರಾಜ್ಯಕ್ಕೆ ಪರಿಚಯಿಸುವ ಹಾಗೂ ಕಪ್ಪತ್ತಗುಡ್ಡವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಬೇಕು ಎಂದರು.
ಈ ಪತ್ರ ಚಳುವಳಿಯ ಅಭಿಯಾನದಲ್ಲಿ ಅಡವಿಸೋಮಾಪುರದ ಮುತ್ತಣ್ಣ ಅಂಗಡಿ ಜನಪದ ಕಲಾ ತಂಡದವರು ರೈತರಿಗೆ ರೈತಗೀತೆಗಳನ್ನು ಪ್ರಸ್ತುತಪಡಿಸಿ ಗಮನ ಸೆಳೆದರು.
ಮುಖಂಡರಾದ ಮಹೇಶ ದಾಸರ, ಬಸವರಾಜ ಕೋಳೂರ, ಕೃಷ್ಣಪ್ಪ ಲಮಾಣಿ, ಅಪ್ಪಾಜಿ ಕಾರಬಾರಿ, ಮಂಜುನಾಥ ಕಾರಬಾರಿ, ರಾಮಣ್ಣ ಲಮಾಣಿ, ರಾಜು ಲಮಾಣಿ, ಗಂಗಪ್ಪ ಲಮಾಣಿ, ದೇವಲಪ್ಪ ಲಮಾಣಿ ಸೇರಿದಂತೆ ನೂರಾರು ಜನ ರೈತ ಮಹಿಳೆಯರು ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ಪತ್ರಗಳನ್ನು ಬರೆದು ಪತ್ರ ಚಳುವಳಿಯಲ್ಲಿ ಪಾಲ್ಗೊಂಡರು.