ಕನ್ನಡ ಪುಸ್ತಕ ಪ್ರಾಧಿಕಾರ ಜಾಗೃತ ಸಮಿತಿ ರಚನೆ ಸಭೆ

ಕನ್ನಡ ಪುಸ್ತಕ ಪ್ರಾಧಿಕಾರ ಜಾಗೃತ ಸಮಿತಿ ರಚನೆ ಸಭೆ Kannada Book Authority Vigilance Committee Formation Meeting

  

             ಬೆಳಗಾವಿ 15:  ಇಂದಿನ ಆಧುನಿಕ ಜೀವನದಲ್ಲಿ ಸಾಮಾಜಿಕ ನೆಲೆಯ ಸಂಬಂಧಗಳನ್ನು ಪರಸ್ಪರರಲ್ಲಿ ಬೆಸೆಯುವಲ್ಲಿ ಪುಸ್ತಕದ ಪಾತ್ರ ಬಹು ಮುಖ್ಯವಾದದ್ದು. ಪುಸ್ತಕ ಪ್ರೀತಿ ಹಾಗೂ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಹಾಕಿಕೊಳ್ಳುವ ಮೂಲಕ ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುತ್ತಿರುವುದು ಅಭಿನಂದನೀಯವಾಗಿದೆ ಎಂದು ಖ್ಯಾತ ನಾಟಕಕಾರ ಡಾ. ಡಿ. ಎಸ್‌. ಚೌಗಲೆ ಅಭಿಪ್ರಾಯ ಪಟ್ಟರು.  

             ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಇವುಗಳ ಆಶ್ರಯದಲ್ಲಿ ಜರುಗಿದ ಮನೆಗೊಂದು ಗ್ರಂಥಾಲಯ ಜಿಲ್ಲಾ ಸಮಿತಿ ರಚನಾ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಇದರಿಂದ ಹೊರಬಂದು ಪುಸ್ತಕಗಳನ್ನು ಪ್ರೀತಿಸಿ, ಓದುವ ಮೂಲಕ ಮನುಷ್ಯ ಪ್ರಜ್ಞೆ ಬೆಳೆಸಿಕೊಂಡು ಬದುಕನ್ನು ಹಸನಾಗಿಸುವತ್ತ ಹೆಚ್ಚಿನ ಜನರು ಬರುವಂತಾಗಲಿ. ಇದರಿಂದ ಕನ್ನಡ ಸಾಹಿತ್ಯದ ವಿಸ್ತಾರವಾಗಿ ಓದುಗರ ಸಂಖ್ಯೆ ಹೆಚ್ಚಾಗುವದು ಎಂದು ಆಶಿಸಿದರು.  

                ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ವೈ. ಬಿ. ಹಿಮ್ಮಡಿ ಅವರು ಪುಸ್ತಕ ಓದುವ ಸಂಸ್ಕೃತಿ ಹೆಚ್ಚಾದಂತೆ ಬರಹಗಾರರು, ಪ್ರಕಾಶಕರು, ಮುದ್ರಕರ ಸಂಖ್ಯೆಯೂ ಹೆಚ್ಚಾಗುತ್ತದೆ. ಪುಸ್ತಕಗಳೇ ಇತಿಹಾಸವನ್ನು ತಿಳಿಸುತ್ತ ಭವಿಷ್ಯದ ಸ್ಪಷ್ಟ ಕಲ್ಪನೆ ನೀಡಬಲ್ಲವು. ಜ್ಞಾನದ ಮೂಲ ಬೇರುಗಳು ಪುಸ್ತಕದಲ್ಲಿರುವುದರಿಂದ ಅಧಿಕೃತ ಮಾಹಿತಿ ಒದಗಿಸಬಲ್ಲ ಪುಸ್ತಕಗಳನ್ನು ಓದುವತ್ತ ಇಂದಿನ ಪೀಳಿಗೆ ಸಾಗಲಿ ಎಂದರು.  

               ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಮಾತನಾಡಿ, "ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾದೊಂದಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಮನೆಗೊಂದು ಗ್ರಂಥಾಲಯ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಿಂದಲೇ ಕಾರ್ಯಕ್ರಮ ಉದ್ಘಾಟನೆಗೊಂಡು ರಾಜ್ಯದ ಎಲ್ಲ ಜಿಲ್ಲೆಗಳತ್ತ ಸಾಗುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶ ಪುಸ್ತಕ ಓದುವ ಸಂಸ್ಕೃತಿಯನ್ನು ಮನೆ-ಮನಗಳಿಗೆ ಮುಟ್ಟಿಸುವುದಾಗಿದೆ. ಪ್ರತಿ ಮನೆಯಲ್ಲಿ ದೇವರ ಮನೆ, ಅಡುಗೆ ಮನೆ ಇದ್ದ ಹಾಗೆಯೇ ಒಳ್ಳೆಯ ಪುಸ್ತಕಗಳಿಗೆ ಮನೆಯಲ್ಲೊಂದಿಷ್ಟು ಜಾಗ ಕೊಟ್ಟು ಗ್ರಂಥಾಲಯದ ಸ್ವರೂಪ ಕೊಟ್ಟರೆ ಅಕ್ಷರ ಕಲಿತ ಮನೆಯ ಸದಸ್ಯರೆಲ್ಲರಿಗೂ ಒಂದಲ್ಲ ಒಂದು ದಿನ ಪುಸ್ತಕ ಓದುವ ಆಸಕ್ತಿ ಮೂಡುತ್ತದೆ.

            ಒಳ್ಳೆಯ ಪುಸ್ತಕಗಳು ಜನರಿಗೆ ಜಗತ್ತನ್ನು ತೆರೆದಿಡಬಲ್ಲವು. ಪುಸ್ತಕಗಳ ಓದು ಜಗತ್ತಿನಲ್ಲಿ ಅನೇಕ ಮಹನೀಯರಾದ ಶೇಕ್ಸ್‌ ಪೀಯರ್, ವರ್ಡ್ಸ ವರ್ಥ, ಗಾಂಧೀಜಿ, ಅಂಬೇಡ್ಕರರಂಥ ಅನೇಕ ಮಹನೀಯರನ್ನು ಸೃಷ್ಟಿಸಿದೆ. ಭವಿಷ್ಯದ ಮತ್ತಷ್ಟು ಮಹನೀಯರು ಪುಸ್ತಕಗಳ ಓದಿನಿಂದ ಹುಟ್ಟುವಂತಾಗಬೇಕು. ಹೀಗಾಗಿ ಪ್ರಾಧಿಕಾರವು ಸಾಹಿತಿ ಮತ್ತು ಓದುಗರನ್ನು ಮುಖಾ-ಮುಖಿಯಾಗಿಸುವ ಮೂಲಕ ಜನರಲ್ಲಿ ಪುಸ್ತಕ ಓದುವ ಆಸಕ್ತಿ ಬೆಳೆಸುವ ಉದ್ದೇಶ ಹೊಂದಿದೆ. ಪ್ರಾಧಿಕಾರವು ರಾಜ್ಯದ ತುಂಬೆಲ್ಲ ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಮನೆಯಲ್ಲಿ ಗ್ರಂಥಾಲಯ ಸೃಷ್ಟಿಸುವ ಮಹತ್ತರ ಉದ್ದೇಶ ಹೊಂದಿದ್ದು ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಟ್ಟೇ ಕೊಡುತ್ತದೆ ಎನ್ನುವ ದೇವನೂರು ಮಹಾದೇವರ ಆಶಯವನ್ನು ಸಾಕಾರಗೊಳಿಸುವತ್ತ ಹೆಜ್ಜೆ ಇಡುತ್ತಿದೆ.  

ಜಿಲ್ಲಾ ಜಾಗೃತ ಸಮಿತಿಗಳಿಂದ ಕನ್ನಡ ಪುಸ್ತಕಗಳ ಪ್ರಚಾರ ಹಾಗೂ ವಿತರಣೆಗೆ ಇನ್ನಷ್ಟು ಬಲ ಸಿಗಲಿದೆ. ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಸ್ಥಾಪನೆಗೊಂಡ ನಾಲ್ಕು ಉತ್ತಮ ಗ್ರಂಥಾಲಯಗಳಿಗೆ ಕನ್ನಡದ ಮೊದಲ ಪ್ರಕಾಶಕಿ ನಂಜನಗೂಡು ತಿರುಮಲಾಂಬ ಪ್ರಶಸ್ತಿ, ಕನ್ನಡದ ಖ್ಯಾತ ಅಂಕಣಕಾರ ಡಾ. ಹಾ. ಮಾ. ನಾಯಕ ಪ್ರಶಸ್ತಿ, ಪುಸ್ತಕ ಪ್ರೇಮಿ ಪೀ. ಆರ್‌. ತಿಪ್ಪೇಸ್ವಾಮಿ ಪ್ರಶಸ್ತಿ ಹಾಗೂ ಗಳಗನಾಥ ಪ್ರಶಸ್ತಿ ಹೀಗೆ ನಾಲ್ಕು ಪ್ರಶಸ್ತಿ ಸ್ಥಾಪಿಸಿ ಪ್ರತಿ ವರ್ಷ ಪುಸ್ತಕ ದಿನಾಚರಣೆಯ ದಿನ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪ್ರದಾನ ಮಾಡಿಸುವ ಯೋಜನೆ ಹೊಂದಿದೆ ಎಂದು ಹೇಳಿದರು.  

      ಮನೆಗೊಂದು ಗ್ರಂಥಾಲಯ, ಬೆಳಗಾವಿ ಜಿಲ್ಲಾ ಜಾಗೃತ ಸಮಿತಿಯ ಜಿಲ್ಲಾ ಸಂಚಾಲಕರಾಗಿ ಶಂಕರ ಬಾಗೇವಾಡಿ ಹಾಗೂ ಸದಸ್ಯರಾಗಿ ಡಾ. ಕವಿತಾ ಕುಸುಗಲ್, ಡಾ. ಶೋಭಾ ನಾಯಕ, ಡಾ. ಪಿ. ನಾಗರಾಜ್, ಡಾ. ಸಂತೋಷ ನಾಯಕ, ನದೀಮ ಸನದಿ, ವಿನೋದ ಪಾಟೀಲ, ಜಗದೀಶ ಹೊಸಮನಿ, ಲಲಿತಾ ಕ್ಯಾಸನ್ನವರ ಹಾಗೂ ಸುಮಿತ್ರಾ ಮುಗಳಖೋಡ ನೇಮಕಗೊಂಡರು. ನೇಮಕಗೊಂಡ ಸದಸ್ಯರಿಗೆ ಪ್ರಾಧಿಕಾರದಿಂದ ಹಕ್ಕುಪತ್ರಗಳನ್ನು ವಿತರಿಸಲಾಯಿತು.  

    ಡಾ. ಎಚ್‌. ಬಿ. ಕೋಲ್ಕಾರ, ಡಾ. ಮಂಜುನಾಥ ಪಾಟೀಲ, ಡಾ. ಬಾಲಕೃಷ್ಣ ನಾಯಕ, ರೇಣುಕಾ ಮಜಲಟ್ಟಿ, ತೇಜಸ್ವಿನಿ ಬಾಗೇವಾಡಿ ಹಾಗೂ ಸಾಹಿತಿಗಳು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಕರಿಯಪ್ಪ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಪ್ರಾಧಿಕಾರದ ಸದಸ್ಯರಾದ ಡಾ. ಕುಶಾಲ ಬರಗೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಬಾಗೇವಾಡಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ದೇಮಣ್ಣ ಸೊಗಲದ ವಂದಿಸಿದರು.