ಕನಕದಾಸರ ಜಯಂತಿ ಮಾಡಿದರೆ ಸಾಲದು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು

ಕನಕದಾಸರ ಜಯಂತಿ ಮಾಡಿದರೆ ಸಾಲದು ಅವರ ಆದರ್ಶಗಳನ್ನು  ಅಳವಡಿಸಿಕೊಳ್ಳಬೇಕು  It is not enough to celebrate Kanakadasa Jayanti, we must adopt his ideals.


ಕೊಪ್ಪಳ 08: ಕನಕದಾಸರ ಜಯಂತಿ ದಿನದಂದು ಭಾವಚಿತ್ರದ  ಮೆರವಣಿಗೆ ಮಾಡಿದರೆ ಸಾಲದು, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕಿದೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು. 

ಅವರು ಶನಿವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 

ಕನಕದಾಸರು ದೇಶ ಕಂಡ ದಾಸ ಶ್ರೇಷ್ಠರು. ಅವರು ತಮ್ಮ ಕೀರ್ತನೆಗಳ ಮೂಲಕ ಜಾತಿ, ಮತ, ಪಂಥಗಳನ್ನು ಹೋಗಲಾಡಿಸಿದ್ದರು. 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿ ಸಮ ಸಮಾಜವನ್ನು ಕಟ್ಟುವ ಕೆಲಸ  ಮಾಡಿದ್ದರು. ಅಂಬೇಡ್ಕರ್, ಬಸವಣ್ಣ, ಕನಕದಾಸರು ಎಲ್ಲಾ ಸಮಾಜದ ಏಳ್ಗೇಗಾಗಿ ಶ್ರಮಿಸಿದ್ದರು ಎಂದರು. 

ಸಿದ್ಧರಾಮಯ್ಯನವರು ಎಲ್ಲಾ ಜಾತಿ ಜನಾಂಗದವರಿಗೆ ಸಮಾನ ಸ್ಥಾನಮಾನ ನೀಡಿ 2013 ರಿಂದ ಇಲ್ಲಿಯವರೆಗೆ ಅವರು ಅನೇಕ ಭಾಗ್ಯಗಳನ್ನು ಜಾರಿಗೆ ತಂದಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯು  ಮುಖ್ಯ ವಾಹಿನಿಗೆ ಬರಬೇಕೆಂದು ಅವರು ಎಲ್ಲರಿಗೂ ಸಮಾನತೆ ತರುವ ಕೆಲಸ ಮಾಡುತ್ತಿದ್ದಾರೆ. ನಾವು  ಸಮಾನವಾಗಿ ಬದುಕುವುದರ ಜೊತೆಗೆ ಇತರರನ್ನು ಸಮಾನವಾಗಿ ಬದುಕುವಂತೆ ಮಾಡಬೇಕು.  ಕನಕದಾಸರು, ಅಂಬೇಡ್ಕರ್, ಬಸವಣ್ಣನವರು ಆಯಾ ಸಮಾಜಕ್ಕೆ ಸೀಮಿತ ಅಲ್ಲ. ಅವರು ಎಲ್ಲರ ಒಳಿತಿಗಾಗಿ ಶ್ರಮಿಸಿದ್ದರು ಎಂದರು. 

ಕೊಪ್ಪಳ ಸಂಸದರಾದ ಕೆ. ರಾಜಶೇಖರ ಬಸವರಾಜ ಹಿಟ್ನಾಳ ಅವರು ಮಾತನಾಡಿ, ಕನಕದಾಸರು ದಂಡನಾಯಕ ತಿಮ್ಮಪ್ಪನಾಗಿ ತನ್ನ ಲೌಕಿಕ ಜೀವನವನ್ನು ತ್ಯಜಿಸಿ ಎಲ್ಲಾ ಸಿರಿ ಸಂಪತ್ತನ್ನು ತ್ಯಾಗಮಾಡಿ ಸಮಾಜದ ಸುಧಾರಣೆಗಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಅವರು ಸಮಾಜ ಸುಧಾರಣೆಗಾಗಿ ಕೀರ್ತನೆಗಳ ಮೂಲಕ ಜಾತಿ ಮುಖ್ಯ ಅಲ್ಲ ನೀತಿ ಮುಖ್ಯ.  ತಮ್ಮ ಭಕ್ತಿಯಿಂದ ಶ್ರೀಕೃಷ್ಣನನ್ನೆ ತನ್ನೆಡೆಗೆ ಒಲಿಸಿಕೊಂಡಿರುವುದನ್ನು ನಾವು ಕಾಣುತ್ತೆವೆ. ಸಿದ್ದರಾಮಯ್ಯನವರು 16ನೇ ಶತಮಾನದಲ್ಲಿ ಕನಕದಾಸರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದು ಅವರು ಸಮಾಜದ ಕಟ್ಟ ಕಡೆಯ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮೆಲ್ಲರ ಆಶಯದಂತೆ ಇತ್ತಿಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಪ್ಪಳದಲ್ಲಿ ಕನಕದಾಸ ಮೂರ್ತಿಯನ್ನು ಅನಾವರಣ ಗೊಳಿಸಿದರು ಎಲ್ಲರಿಗೂ ಕನಕದಾಸರ ಜಯಂತಿ ಶುಭಾಶಯಗಳು ಎಂದು ಹೇಳಿದರು.  

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಮಾಜಿ ಸಂಸದರಾದ ಕರಡಿ ಸಂಗಣ್ಣ, ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳ, ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್‌. ಅರಸಿದ್ದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ಇತರೆ ಅಧಿಕಾರಿಗಳು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದರು.